‘ಹಾಲಿ ಕುಲಪತಿಗೆ ಹೊಣೆ ನಿರಾಕರಣೆ’

ಮಂಗಳವಾರ, ಜೂನ್ 25, 2019
23 °C
ಅಂಕಪಟ್ಟಿ ಪ್ರಕರಣದಲ್ಲೂ ಎಡವಟ್ಟು ಮಾಡಿದ್ದ ಪ್ರೊ.ಪಿ.ಎಸ್‌. ಯಡಪಡಿತ್ತಾಯ

‘ಹಾಲಿ ಕುಲಪತಿಗೆ ಹೊಣೆ ನಿರಾಕರಣೆ’

Published:
Updated:
Prajavani

ಮಂಗಳೂರು: ಇಲ್ಲಿನ ಮಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕಗೊಂಡಿರುವ ಪ್ರೊ.ಪಿ.ಎಸ್‌. ಯಡಪಡಿತ್ತಾಯ ಅವರಿಗೆ ಕರ್ತವ್ಯಲೋಪ ಪ್ರಕರಣವೊಂದರಲ್ಲಿ ಶಿಸ್ತುಕ್ರಮ ಜರುಗಿಸಿದ್ದ ವಿಶ್ವವಿದ್ಯಾಲಯದ ಸಿಂಡಿಕೇಟ್‌, ಮುಂದೆ ಸಂಸ್ಥೆಯ ಯಾವುದೇ ರೀತಿಯ ಆಡಳಿತಾತ್ಮಕ ಜವಾಬ್ದಾರಿಗಳನ್ನು ನೀಡದಿರುವ ನಿರ್ಣಯ ಕೈಗೊಂಡಿತ್ತು ಎಂಬುದು ಈಗ ಬಹಿರಂಗವಾಗಿದೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಿಂದ ವಿಶ್ವವಿದ್ಯಾಲಯಗಳಿಗೆ ರೇಟಿಂಗ್‌ ನೀಡುವ ಪ್ರಕ್ರಿಯೆ 2016ರಲ್ಲಿ ನಡೆದಿತ್ತು. ಆಗ ಮಂಗಳೂರು ವಿಶ್ವವಿದ್ಯಾಲಯದ ದಾಖಲೆಗಳನ್ನು ಪರಿಷತ್‌ಗೆ ಒದಗಿಸುವ ನೋಡಲ್‌ ಅಧಿಕಾರಿಯಾಗಿ ಪ್ರೊ.ಯಡಪಡಿತ್ತಾಯ ಅವರನ್ನು ನೇಮಿಸಲಾಗಿತ್ತು. ಆದರೆ, ಅವರು ಸಕಾಲಕ್ಕೆ ದಾಖಲೆಗಳನ್ನು ಸಲ್ಲಿಸದ ಕಾರಣದಿಂದ ಮಂಗಳೂರು ವಿಶ್ವವಿದ್ಯಾಲಯಕ್ಕೆ ರೇಟಿಂಗ್‌ನಲ್ಲಿ ಕಳಪೆ ಸ್ಥಾನ ಲಭಿಸಿತ್ತು. ಈ ಪ್ರಕರಣದಲ್ಲಿ ಶೋಕಾಸ್‌ ನೋಟಿಸ್‌ ಜಾರಿ ಮಾಡಿ, ವಿಚಾರಣೆ ನಡೆಸಲಾಗಿತ್ತು. ಯಡಪಡಿತ್ತಾಯ ಕರ್ತವ್ಯಲೋಪ ಎಸಗಿದ್ದಾರೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ತೀರ್ಮಾನಿಸಿತ್ತು.

‘ಮೂಲಸೌಕರ್ಯದ ಕೊರತೆ ಮತ್ತು ಕಾಲಾವಕಾಶದ ಕೊರತೆಯ ಕಾರಣದಿಂದ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ಗೆ ಸಕಾಲಕ್ಕೆ ಮಾಹಿತಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ’ ಎಂದು ಯಡಪಡಿತ್ತಾಯ ನೋಟಿಸಿಗೆ ಸಮಜಾಯಿಷಿ ನೀಡಿದ್ದರು. ಆದರೆ, 2017ರ ಮೇ 12ರಂದು ನಡೆದ ಸಿಂಡಿಕೇಟ್‌ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗಿತ್ತು.

‘ವಿವರಣೆ ತೃಪ್ತಿಕರವಾಗಿಲ್ಲ. ಅವರ ವರ್ತನೆಯು ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯಕ್ಕೆ ಸಮನಾಗಿದೆ. ಆದ್ದರಿಂದ ಅವರಿಗೆ ಇನ್ನುಮುಂದೆ ವಿಶ್ವವಿದ್ಯಾಲಯ ಯಾವುದೇ ಆಡಳಿತಾತ್ಮಕ ಜವಾಬ್ದಾರಿಯನ್ನು ನೀಡಬಾರದು’ ಎಂಬ ನಿರ್ಣಯವನ್ನು ಕೈಗೊಂಡಿತ್ತು. ನಿರ್ಣಯದ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಅಂಕಪಟ್ಟಿ ಪ್ರಕರಣದಲ್ಲೂ ಎಡವಟ್ಟು: ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾಗಿದ್ದ ಅವಧಿಯಲ್ಲಿ ಯಡಪಡಿತ್ತಾಯ ಅವರು ಅಂಕಪಟ್ಟಿ ಮತ್ತು ತೇರ್ಗಡೆ ಪ್ರಮಾಣ ಪತ್ರ ನೀಡುವಾಗ ಒಂದು ಪ್ರಕರಣದಲ್ಲಿ ಎಡವಟ್ಟು ಮಾಡಿದ್ದರು. ಆಗಲೂ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಗಂಭೀರವಾದ ಎಚ್ಚರಿಕೆ ನೀಡಿತ್ತು.

ಎಂ.ಟೆಕ್‌ ಅಧ್ಯಯನ ಪೂರ್ಣಗೊಳಿಸಿದ್ದ ನಿಂಗಮಂಜಪ್ಪ ಎಂಬ ವಿದ್ಯಾರ್ಥಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದಾಗಿ ಪ್ರಮಾಣಪತ್ರ ವಿತರಿಸಲಾಗಿತ್ತು. ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಕೋರಿತ್ತು. ‘ನಿಂಗಮಂಜಪ್ಪ ಅವರು ಶೇಕಡ 64.23ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಪ್ರಥಮ ದರ್ಜೆಗೆ ಸಮನಾಗಿದೆ’ ಎಂದು ಆಗಿನ ಪರೀಕ್ಷಾಂಗದ ಕುಲಸಚಿವ ಯಡಪಡಿತ್ತಾಯ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ, ನಿಂಗಮಂಜಪ್ಪ ಶೇ 54ರಷ್ಟು ಅಂಕಗಳನ್ನು ಮಾತ್ರ ಪಡೆದಿರುವುದು ದಾಖಲೆ ಪರಿಶೀಲನೆ ವೇಳೆ ಖಚಿತವಾಗಿತ್ತು.

ಈ ಪ್ರಕರಣದಲ್ಲೂ ಯಡಪಡಿತ್ತಾಯ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ‘ವಿದ್ಯಾರ್ಥಿ ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ಪ್ರಮಾಣಪತ್ರ ವಿತರಿಸಲಾಗಿತ್ತು. ಈ ಅವಧಿಯಲ್ಲಿ ಪರೀಕ್ಷಾಂಗದ ಕಂಪ್ಯೂಟರೀಕರಣ ಆರಂಭವಾಗಿತ್ತು.

ಉದ್ದೇಶಪೂರ್ವಕವಲ್ಲದ ರೀತಿಯಲ್ಲಿ ನನ್ನಿಂದ ಲೋಪ ಆಗಿರಬಹುದು. ಪ್ರಮಾಣಪತ್ರದಲ್ಲಿ ತಪ್ಪಿದ್ದರೆ ಅದನ್ನು ಹಿಂಪಡೆಯಬೇಕು ಮತ್ತು ನನ್ನ ತಪ್ಪನ್ನು ಮನ್ನಿಸಬೇಕು’ ಎಂದು ಯಡಿಪಡಿತ್ತಾಯ ಕ್ಷಮೆ ಯಾಚಿಸಿದ್ದರು.

ಈ ಪ್ರಕರಣದ ಕುರಿತು ಸಿಂಡಿಕೇಟ್‌ ಅವರ ಕರ್ತವ್ಯಲೋಪದ ಬಗ್ಗೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿ, ಎಚ್ಚರಿಕೆ ನೀಡುವ ತೀರ್ಮಾನ ಕೈಗೊಂಡಿತ್ತು.

‘ಎರಡೂ ನಿರ್ಣಯ ಹಿಂಪಡೆಯಲಾಗಿದೆ’

‘ವಿಶ್ವವಿದ್ಯಾಲಯದ ರೇಟಿಂಗ್‌ ವಿಷಯದಲ್ಲಿ ಡೇಟಾ ಕೇಂದ್ರ ಇಲ್ಲದಿರುವುದು ಮತ್ತು ಮೂಲಸೌಕರ್ಯದ ಕೊರತೆಯಿಂದ ಪೂರ್ಣ ಮಾಹಿತಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ನನ್ನ ವಿರುದ್ಧ ಕ್ರಮ ಜರುಗಿಸುವ ನಿರ್ಣಯವನ್ನು ನಂತರದ ಸಿಂಡಿಕೇಟ್‌ ಸಭೆಯಲ್ಲಿ ವಾಪಸು ಪಡೆಯಲಾಗಿದೆ. ಆದರೆ, ಕುಲಪತಿ ಹುದ್ದೆ ತಪ್ಪಿಸಲು ಯತ್ನಿಸುತ್ತಿದ್ದ ಕೆಲವರು ಅರ್ಧ ಮಾಹಿತಿ ಹರಿಯಬಿಟ್ಟಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ ಪ್ರತಿಕ್ರಿಯಿಸಿದರು.

‘ಅಂಕಪಟ್ಟಿ ಪ್ರಕರಣದಲ್ಲೂ ನಾನು ಉದ್ದೇಶಪೂರ್ವಕವಾಗಿ ತಪ್ಪು ಮಾಡಿರಲಿಲ್ಲ. ಆ ಪ್ರಕರಣದಲ್ಲೂ ನನ್ನ ಕೋರಿಕೆಯನ್ನು ಸಿಂಡಿಕೇಟ್‌ ಮಾನ್ಯ ಮಾಡಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !