ಭಾನುವಾರ, ನವೆಂಬರ್ 17, 2019
23 °C
ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರ ಜೊತೆ ಕಾದಾಡಿ ವೀರ ಸೇನಾನಿ

ಜನಸಾಗರದ ಮಧ್ಯೆ ಹುತಾತ್ಮ ಯೋಧ ರಾಹುಲ್‌ ಅಂತ್ಯಕ್ರಿಯೆ

Published:
Updated:
Prajavani

ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರ ಜೊತೆ ಕಾದಾಡಿ, ವೀರ ಮರಣ ಹೊಂದಿದ್ದ ರಾಹುಲ್‌ ಸುಳಗೇಕರ (22) ಅಂತ್ಯಕ್ರಿಯೆ ಸ್ವಗ್ರಾಮವಾದ ಬೆಳಗಾವಿ ತಾಲ್ಲೂಕಿನ ಉಚಗಾಂವದಲ್ಲಿ ಶನಿವಾರ ಸಂಜೆ ಸೇನಾ ಗೌರವದೊಂದಿಗೆ ನೆರವೇರಿತು. ಸಾವಿರಾರು ಜನರು ಸಾಕ್ಷಿಯಾದರು.

ಪಾಕಿಸ್ತಾನ ಸೈನಿಕರ ಬೆಂಬಲದೊಂದಿಗೆ ಕಾಶ್ಮೀರದೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಉಗ್ರರ ಜೊತೆ ಗುಂಡಿನ ಕಾಳಗ ನಡೆಸಿದ್ದ ರಾಹುಲ್‌ ವೀರ ಮರಣ ಹೊಂದಿದ್ದರು. ಅವರ ಪಾರ್ಥಿವ ಶರೀರವನ್ನು ಶನಿವಾರ ಮಧ್ಯಾಹ್ನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು.

ಮರಾಠಾ ಲಘು ಪದಾತಿದಳದ ಬ್ರಿಗೇಡಿಯರ್‌ ಗೋವಿಂದ ಕಾಲ್ವಾಡ, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ, ನಗರ ಪೊಲೀಸ್‌ ಆಯುಕ್ತ ಬಿ.ಕೆ. ಲೋಕೇಶಕುಮಾರ್‌, ಇತರ ಪ್ರಮುಖರು ಬರಮಾಡಿಕೊಂಡರು.

ಮೆರವಣಿಗೆ: ವಿಮಾನ ನಿಲ್ದಾಣದಿಂದ ಸುಮಾರು 30 ಕಿ.ಮೀ ಉದ್ದದ ಉಚಗಾಂವ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿ ಒಯ್ಯಲಾಯಿತು. ಗ್ರಾಮದ ಗಡಿ ಪ್ರವೇಶಿಸುತ್ತಿದ್ದಂತೆ ಸಾವಿರಾರು ಜನರು ಮೆರವಣಿಗೆ ನಡೆಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ‘ರಾಹುಲ್‌ ಅಮರ ರಹೇ’ ಎನ್ನುವ ಘೋಷಣೆಗಳನ್ನು ಕೂಗಿದರು.

ಪ್ರಾರ್ಥಿವ ಶರೀರವನ್ನು ರಾಹುಲ್‌ ಅವರ ಮನೆಗೆ ತಂದಾಗ, ಅವರ ತಂದೆ, ತಾಯಿ, ತಂಗಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ರುದ್ರಭೂಮಿಯಲ್ಲಿ ಮರಾಠಾ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌, ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಮುಖಂಡ ಸಂಜಯ ಪಾಟೀಲ ಇತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)