ಗುರುವಾರ , ಜೂನ್ 4, 2020
27 °C
ಸರ್ಕಾರ ಪ್ರಾಯೋಜಿತ ಮೊದಲ ಸಾಮೂಹಿಕ ವಿವಾಹಕ್ಕೆ ವಿಘ್ನ?

‘ಸಪ್ತಪದಿ’ ಯೋಜನೆಗೆ ಸೂತಕ ತಂದ ಕೊರೊನಾ

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಜರಾಯಿ ಇಲಾಖೆಯ ‘ಎ’ ದರ್ಜೆ ದೇವಸ್ಥಾನಗಳ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಸರ್ಕಾರದ ‘ಸಪ್ತಪದಿ‘ ಯೋಜನೆಗೆ ಕೊರೊನಾ ಸೂತಕ ತಂದಿದ್ದು, ವಿವಾಹ ದಿನಾಂಕಗಳನ್ನು ಮುಂದೂಡುವುದು ಬಹುತೇಕ ಖಚಿತವಾಗಿದೆ.

ಏಪ್ರಿಲ್ 26 ಮತ್ತು ಮೇ 24ರಂದು ಈ ವಿವಾಹ ಸಮಾರಂಭಗಳು ನಡೆಯಬೇಕಿತ್ತು. ಏಪ್ರಿಲ್‌ 15ರವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಮಾಡಲಾಗಿದ್ದು, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಅದು ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ‘ಸಪ್ತಪದಿ’ ತುಳಿಯುವ ನೂರಾರು ಜೋಡಿಯ ಕನಸನ್ನು ಸಹ ಮುಂದೂಡಬೇಕಾಗಿದೆ.

ಸುಮಾರು 750 ಜೋಡಿ ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು. ಸಿಂಧನೂರಿನ ಅಂಬಾದೇವಿ ದೇವಸ್ಥಾನದಲ್ಲಿ 160ಕ್ಕೂ ಅಧಿಕ ಜೋಡಿಯ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ, ಗಂಗಾವತಿ ತಾಲ್ಲೂಕು ಕನಕಗಿರಿಯ ಕನಕಾ ಚಲಪತಿ ದೇವಸ್ಥಾನ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಗಳಲ್ಲಿ 30ಕ್ಕೂ ಅಧಿಕ ಜೋಡಿ ಹೆಸರು ನೋಂದಾಯಿಸಿದ್ದರು.

ಭರ್ಜರಿ ತಯಾರಿ: ಯೋಜನೆ ರಾಜ್ಯ ಸರ್ಕಾರದ ಬಹು ನಿರೀಕ್ಷೆಯ ಜನಕಲ್ಯಾಣ ಯೋಜನೆ ಎಂಬಂತೆ ಬಿಂಬಿತವಾಗಿತ್ತು. ಅದೆಷ್ಟೋ ಬಡವರು ಮದುವೆಗಾಗಿ ಭಾರಿ ಸಾಲ ಮಾಡುವುದನ್ನು ತಪ್ಪಿಸುವ ಸಲುವಾಗಿ ಸರ್ಕಾರವೇ ಒಂದೊಂದು ಜೋಡಿಗೆ ಸುಮಾರು ₹ 55 ಸಾವಿರ ಖರ್ಚು ಮಾಡಿ ಮದುವೆ ಮಾಡಿಸುವ ಯೋಜನೆಯ ಪ್ರಚಾರವನ್ನು ಹಲವೆಡೆ ಭರ್ಜರಿಯಾಗಿ ನಡೆಸಲಾಗಿತ್ತು. ‘ಕೊರೊನಾ ನಾಡಿಗೇ ಅಂಟಿದ ಸೋಂಕು, ಹೀಗಾಗಿ ಲಾಕ್‌ಡೌನ್‌ ಮಾಡುವುದು ಅನಿವಾರ್ಯವಾಯಿತು. ಅದೇ ರೀತಿ ಈ ಸಾಮೂಹಿಕ ವಿವಾಹವನ್ನು ಮುಂದೂಡುವುದು ಅನಿವಾರ್ಯವಾಗಲಿದೆ’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

*
ಮುಂದೂಡುವುದನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ, ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು