ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವಾರ ಬರಲಿವೆ ಟಿಬಿಎಂ

ಕೊರೊನಾ ವೈರಸ್‌ಗೂ–ಯಂತ್ರಗಳ ಪೂರೈಕೆಗೂ ಸಂಬಂಧವಿಲ್ಲ l ಚೆನ್ನೈಗೆ ಬಂದಿಳಿದ ಸುರಂಗ ಕೊರೆಯುವ ಯಂತ್ರ
Last Updated 13 ಫೆಬ್ರುವರಿ 2020, 4:45 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಒಟ್ಟು 12 ನೆಲದಡಿ ನಿಲ್ದಾಣಗಳು ಸೇರಿದಂತೆ 13 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಬೇಕಿದ್ದು, ಇದಕ್ಕಾಗಿ ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ಚೀನಾದಿಂದ ತರಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಇವು ನಗರಕ್ಕೆ ಬರಲಿವೆ.

‘ನಾಲ್ಕು ಪ್ಯಾಕೇಜ್‌ಗಳಲ್ಲಿ ಕೆಲಸ ನಿರ್ವಹಿಸಲಾಗುತ್ತಿದ್ದು, ಇದಕ್ಕಾಗಿ 9 ಟಿಬಿಎಂಗಳ ಅವಶ್ಯಕತೆ ಇದೆ. ಚೀನಾದ ‘ಚೀನಾ ರೈಲ್ವೆ ಕನ್‌ಸ್ಟ್ರಕ್ಷನ್‌ ಹೆವಿ ಇಂಡಸ್ಟ್ರಿ ಕಾರ್ಪೊರೇಷನ್’ ಕಂಪನಿಯಿಂದ ಈ ಯಂತ್ರಗಳು ಚೆನ್ನೈಗೆ ಬಂದಿದ್ದು, ಮುಂದಿನ ವಾರದಲ್ಲಿ ನಗರಕ್ಕೆ
ಬರಲಿವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚೀನಾದಲ್ಲಿ ಕೊರೊನಾ ವೈರಸ್‌ನಿಂದ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಯಂತ್ರಗಳು ಬರುವುದು ವಿಳಂಬವಾಗುತ್ತವೆ ಎಂಬ ಆತಂಕವಿತ್ತು. ಆದರೆ, ಟಿಬಿಎಂ ಪೂರೈಸುವ ಕಂಪನಿಯು ಸಕಾಲದಲ್ಲಿ ಯಂತ್ರಗಳನ್ನು ಪೂರೈಸಿದೆ. ವಿಳಂಬವಾಗುವುದಿದ್ದರೆ ಕಂಪನಿಯು ಮೊದಲೇ ಮಾಹಿತಿ ನೀಡುತ್ತಿತ್ತು’ ಎಂದೂ ಅವರು ತಿಳಿಸಿದರು.

‘ಟಿಬಿಎಂಗಳು ಬಂದ ನಂತರ ಅವುಗಳನ್ನು ನೆಲದಾಳದಲ್ಲಿ ಕೂರಿಸಲು ಒಂದು ತಿಂಗಳು ಸಮಯ ಬೇಕಾಗುತ್ತದೆ. ನಂತರವೇ, ಸುರಂಗ ಕೊರೆಯುವ ಕಾರ್ಯಪ್ರಾರಂಭಿಸಲಾಗುತ್ತದೆ’ ಎಂದರು.

‘ಪ್ಯಾಕೇಜ್‌ 2 ಮತ್ತು ಪ್ಯಾಕೇಜ್‌ 3ರ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ತೆಗೆದುಕೊಂಡಿದೆ. ಪ್ಯಾಕೇಜ್‌ 1 ಮತ್ತು 4ರ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.ನಾಲ್ಕು ಟಿಬಿಎಂಗಳು ಶಿವಾಜಿನಗರದಿಂದ ಒಂದು ತಿಂಗಳಲ್ಲಿ ಕಾರ್ಯ ಪ್ರಾರಂಭಿಸಲಿವೆ’ ಎಂದರು.

‘ಮೊದಲ ಎರಡು ಪ್ಯಾಕೇಜ್‌ನ ಗುತ್ತಿಗೆದಾರರು ಕಟ್ಟಡಗಳ ಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಮೊದಲ ಹಂತದ ಯೋಜನೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಮಾದರಿಯಲ್ಲೇ ಎರಡನೇ ಹಂತದಲ್ಲಿ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದು ತಿಳಿಸಿದರು.

ಗಟ್ಟಿಯಾದ ಬಂಡೆಗಳನ್ನು ಒಡೆಯುವ ಸಾಮರ್ಥ್ಯವನ್ನು ಈ ಯಂತ್ರಗಳು ಹೊಂದಿವೆ. ಸಿಡಿಮದ್ದುಗಳನ್ನು ಅತಿ ಕಡಿಮೆ ಅಥವಾ ಅನಿವಾರ್ಯ ಇದ್ದಲ್ಲಿ ಮಾತ್ರ ಬಳಸಲಾಗುತ್ತದೆ. ದಿನಕ್ಕೆ 2 ಮೀಟರ್‌ನಿಂದ 2.5 ಮೀಟರ್‌ನಷ್ಟು ಉದ್ದದ ಸುರಂಗ ಕೊರೆಯುವ ಸಾಮರ್ಥ್ಯ ಇವುಗಳಿಗಿದೆ.

ಕಾಮಗಾರಿ ಎಲ್ಲಿ?: ಸ್ವಾಗತ್‌ ಕ್ರಾಸ್‌ನಿಂದ ನಾಗವಾರದವರೆಗೆ 13 ಕಿ.ಮೀ. ಉದ್ದದ ಸುರಂಗ ನಿರ್ಮಾಣವಾಗಲಿದೆ. ಮೊದಲು ವೆಲ್ಲಾರ ಜಂಕ್ಷನ್‌, ಶಿವಾಜಿನಗರ ಮಾರ್ಗದಲ್ಲಿ ಕಾಮಗಾರಿ ನಡೆಸಲಾಗುತ್ತದೆ. ನಂತರ, ಬಂಬೂ ಬಜಾರ್‌ ಹಾಗೂ ಪಾಟರಿ ಟೌನ್‌ ಕಡೆ ಕಾಮಗಾರಿ ನಡೆಯಲಿದೆ.

ಬೆಲೆ ಎಷ್ಟು? ಸವಾಲುಗಳೇನು?: ಒಂದು ಟಿಬಿಎಂನ ಬೆಲೆ ಅಂದಾಜು ₹75 ಕೋಟಿ ಇದೆ. ಒಂದು ಟಿಬಿಎಂ ಚಲಾಯಿಸಲು 14 ಮೆಗಾವಾಟ್‌ ವಿದ್ಯುತ್‌ ಪೂರೈಸಬೇಕಾಗುತ್ತದೆ. ಕಾಮಗಾರಿ ವೇಳೆ ಅಪಾರ ಪ್ರಮಾಣದ ಮಣ್ಣನ್ನು ಹೊರತೆಗೆಯಬೇಕಾಗುತ್ತದೆ. ಈ ಮಣ್ಣಿನ ವಿಲೇವಾರಿ ಸವಾಲಿನದ್ದಾಗಿರುತ್ತದೆ. 13 ಕಿ.ಮೀ. ಉದ್ದದ ಸುರಂಗ ಕೊರೆದರೆ ಅಂದಾಜು 15.56 ಲಕ್ಷ ಮಣ್ಣನ್ನು ವಿಲೇವಾರಿ ಮಾಡಬೇಕಾಗುತ್ತದೆ. ಈ ಭಾಗದಲ್ಲಿ ಹೆಚ್ಚು ಜನಸಂಖ್ಯೆಯಿದ್ದು, ಹಳೆಯ ಕಟ್ಟಡಗಳು ಬಹಳಷ್ಟಿವೆ. ಜನ ಆತಂಕಕ್ಕೆ ಒಳಗಾಗದಂತೆ, ಕಟ್ಟಡಗಳಿಗೂ ಹಾನಿಯಾಗದಂತೆ ಕಾಮಗಾರಿ ನಡೆಸಬೇಕಾಗಿದೆ.

‘ಶೇ 34ರಷ್ಟು ಮಾತ್ರ ಬಂಡೆಗಲ್ಲು’

ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಿರುವ ಸ್ಥಳಗಳಲ್ಲಿ ನಿಗಮವು ಭೂವೈಜ್ಞಾನಿಕ ಪರೀಕ್ಷೆ ನಡೆಸಿದ್ದು, ಈ ಸ್ಥಳದಲ್ಲಿ ಶೇ 34ರಷ್ಟು ಮಾತ್ರ ಬಂಡೆಗಲ್ಲುಗಳು ಇರುವುದು ಗೊತ್ತಾಗಿದೆ.

ನಮ್ಮ ಮೆಟ್ರೊ ಮೊದಲ ಹಂತದ ವೇಳೆ, ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಬಂಡೆಗಳು ಎದುರಾಗಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ಈ ಬಾರಿ, ಶೇ 46ರಷ್ಟು ಮೆದು ಮಣ್ಣು ಇದ್ದು, ಉಳಿದ ಶೇ 20ರಷ್ಟು ಮೆದು ಮತ್ತು ಬಂಡೆಗಳ ಮಿಶ್ರಣವಿದೆ.

‘ಬಂಡೆಗಲ್ಲು ಇದ್ದರೆ ದಿನವೊಂದಕ್ಕೆ 2.4 ಮೀಟರ್‌ನಷ್ಟು ಸುರಂಗವನ್ನು ಟಿಬಿಎಂ ಕೊರೆಯುತ್ತದೆ. ಅದೇ, ಮೆದು ಮಣ್ಣು ಇದ್ದರೆ 5 ಮೀಟರ್‌ನಷ್ಟು ಉದ್ದ ಕೊರೆಯಬಹುದು’ ಎಂದು ಯಶವಂತ ಚೌಹಾಣ್‌ ಹೇಳಿದರು.

‘ಯಾವುದೇ ಪರೀಕ್ಷೆ ನಡೆಸಿದ್ದರೂ ಕಾಮಗಾರಿ ಪ್ರಾರಂಭವಾದ ಮೇಲೆ ಎಂತಹ ಸವಾಲುಗಳು ಎದುರಾಗುತ್ತವೆಯೋ ಹೇಳಲಾಗದು’ ಎಂದೂ ಅವರೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT