ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಬಿಎಸ್ ಪದವೀಧರನಿಗೆ ಜೈಲು ಕಾಣಿಸಿದ ಇ ಮೇಲ್‌

‘ನೀಟ್‌’ನಲ್ಲಿ ಉತ್ತಮ ರ‍್ಯಾಂಕ್ ಪಡೆದಿದ್ದ ವಿದ್ಯಾರ್ಥಿ * ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಕಲಿ ಅಂಕಪಟ್ಟಿ ಕೊಟ್ಟಿದ್ದ
Last Updated 29 ಏಪ್ರಿಲ್ 2019, 23:30 IST
ಅಕ್ಷರ ಗಾತ್ರ

ಬೆಂಗಳೂರು: ಡಾಕ್ಟರ್‌ ಆಫ್‌ ಮೆಡಿಸಿನ್ (ಎಂ.ಡಿ) ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಸೀಟು ಗಿಟ್ಟಿಸಿಕೊಳ್ಳಲು ಅಸಲಿ ಅಂಕಪಟ್ಟಿಯನ್ನೇ ಹೋಲುವ ನಕಲಿ ಅಂಕಪಟ್ಟಿ ಕೊಟ್ಟಿದ್ದ ಆರೋಪದಡಿ ಎಂಬಿಬಿಎಸ್ ಪದವೀಧರ ರಾಜೇಶ್‌ಕುಮಾರ್ ರಾಯ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ರಾಜೇಶ್‌ಕುಮಾರ್‌, ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದರು. ದಾಖಲೆಗಳ ಪರಿಶೀಲನೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕೌನ್ಸೆಲಿಂಗ್‌ಗೆ ಹಾಜರಾಗಿದ್ದರು. ಪ್ರಾಧಿಕಾರದ ಸಿಬ್ಬಂದಿ, ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿತ್ತು. ಆ ಬಗ್ಗೆ ಪ್ರಾಧಿಕಾರದ ಆಡಳಿತಾಧಿಕಾರಿ ಶಿಲ್ಪಾ ಅವರು ಏಪ್ರಿಲ್ 26ರಂದು ದೂರು ನೀಡಿದ್ದರು’ ಎಂದು ಮಲ್ಲೇಶ್ವರ ಪೊಲೀಸರು ಹೇಳಿದರು.

‘ರಾಜೇಶ್‌ಕುಮಾರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ. ಅವರು ನಕಲಿ ಅಂಕಪಟ್ಟಿಯನ್ನು ಎಲ್ಲಿಂದ ತಂದಿದ್ದಾರೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ವಿವರಿಸಿದರು.

‘ಬಿಹಾರದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿರುವುದಾಗಿ ಹೇಳುತ್ತಿರುವ ಆರೋಪಿ, ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಉತ್ತಮ ರ‍್ಯಾಂಕ್‌ ಪಡೆದಿದ್ದಾರೆ‍’ ಎಂದು ಪೊಲೀಸರು ಹೇಳಿದರು.

ಸುಳಿವು ನೀಡಿದ್ದ ಇ–ಮೇಲ್: ‘2019ರ ನೀಟ್ ಪಿ.ಜಿ ಪರೀಕ್ಷೆಯಲ್ಲಿ ಪಡೆದಿದ್ದ ರ‍್ಯಾಂಕ್‌ ಆಧಾರದಲ್ಲಿ ರಾಜೇಶ್‌ಕುಮಾರ್ ಅವರಿಗೆ ಸಪ್ತಗಿರಿ ವೈದ್ಯಕೀಯ ಕಾಲೇಜಿನಲ್ಲೇ ಸೀಟು ಸಿಕ್ಕಿತ್ತು. ದಾಖಲೆ ಪರಿಶೀಲನೆಗಾಗಿ ಅವರು ಮಾರ್ಚ್ 23ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎದುರು ಹಾಜರಾಗಿದ್ದರು. ದಾಖಲೆಗಳನ್ನು ಕೊಟ್ಟು ವಾಪಸ್‌ ಹೋಗಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಕೆಲ ದಿನಗಳ ನಂತರ ಪ್ರಾಧಿಕಾರದ ಅಧಿಕಾರಿಗಳಿಗೆ, ಅಪರಿಚಿತ ವ್ಯಕ್ತಿಯಿಂದ ‘ಇ– ಮೇಲ್’ ಬಂದಿತ್ತು. ‘ಬಿಹಾರದ ರಾಜೇಶ್‌ಕುಮಾರ್ ರಾಯ್‌, ನಕಲಿ ದಾಖಲೆಗಳನ್ನು ಕೊಟ್ಟು ಸೀಟು ಪಡೆದುಕೊಂಡಿದ್ದಾರೆ. ಅವರ ದಾಖಲೆಗಳನ್ನು ಪರಿಶೀಲನೆ ನಡೆಸಿ. ಅಕ್ರಮ ಹೊರಬರುತ್ತದೆ’ ಎಂದು ‘ಇ–ಮೇಲ್‌’ನಲ್ಲಿ ಬರೆಯಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಇ– ಮೇಲ್’ನಲ್ಲಿದ್ದ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಅಧಿಕಾರಿಗಳು, ದಾಖಲೆಗಳನ್ನು ಮರು ಪರಿಶೀಲನೆ ನಡೆಸಿದ್ದರು. ಅಂಕಪಟ್ಟಿ ಸೇರಿ ಕೆಲ ದಾಖಲೆಗಳು ನಕಲಿ ಎಂಬುದು ಗಮನಕ್ಕೆ ಬಂದಿತ್ತು. ರಾಜೇಶ್‌ಕುಮಾರ್‌ಗೆ ಸಂದೇಶ ಕಳುಹಿಸಿದ್ದ ಅಧಿಕಾರಿಗಳು,ಏಪ್ರಿಲ್ 26ರಂದು ಪುನಃ ದಾಖಲೆಗಳ ಪರಿಶೀಲನೆಗೆ ಬರುವಂತೆ ಹೇಳಿದ್ದರು.’

‘ಪರಿಶೀಲನೆಗೆ ಬಂದಿದ್ದ ರಾಜೇಶ್‌ಕುಮಾರ್‌, ಅಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿದ್ದರು. ಅಧಿಕಾರಿಗಳು, ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ವಿವರಿಸಿದರು.

ವ್ಯವಸ್ಥಿತ ಜಾಲವಿರುವ ಅನುಮಾನ: ‘ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಸೀಟು ಗಿಟ್ಟಿಸಿಕೊಳ್ಳಲು ಕೆಲ ವಿದ್ಯಾರ್ಥಿಗಳು, ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸುತ್ತಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲವಿದ್ದು, ಅದನ್ನು ಪತ್ತೆ ಮಾಡಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಅಧಿಕಾರಿ ಶಿಲ್ಪಾ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಶೈಕ್ಷಣಿಕ ಹಾಗೂ ವೈಯಕ್ತಿಕ ಮಾಹಿತಿಯ ದಾಖಲೆಗಳನ್ನು ಸಲ್ಲಿಸಿಯೇ ವಿದ್ಯಾರ್ಥಿಗಳು,ನೀಟ್‌ ಪರೀಕ್ಷೆ ಬರೆದಿರುತ್ತಾರೆ. ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅರ್ಹತೆ ಪಡೆದವರ ದಾಖಲೆಗಳನ್ನು ಪ್ರಾಧಿಕಾರವೇ ಪರಿಶೀಲಿಸುತ್ತದೆ. ಇದೇ ಮೊದಲ ಬಾರಿಗೆ ನಕಲಿ ಅಂಕಪಟ್ಟಿ ಕಂಡುಬಂದಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳ ದಾಖಲೆಗಳನ್ನು ಮರು ಪರಿಶೀಲಿಸಿ ತಿಳಿಸುವಂತೆ ಕೋರಿದ್ದೇವೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT