ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗೇಟಿಗೂ ಬೆದರದ ‘ಮೀ–ಟೂ’

Last Updated 16 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ/ಬೆಂಗಳೂರು: ‘ಮೀ ಟೂ’ ಅಂತರ್ಜಾಲ ಅಭಿಯಾನದಲ್ಲಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳೆಯರ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ ಮಾರನೇ ದಿನವೇ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ವಿರುದ್ಧ ಮತ್ತಿಬ್ಬರು ಮಹಿಳೆಯರು ಧ್ವನಿ ಎತ್ತಿದ್ದಾರೆ.

ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ಕಲಾವಿದ ಜತಿನ್‌ ದಾಸ್‌ ಹೆಸರು ಕೂಡ ಮಂಗಳವಾರ ‘ಮೀ ಟೂ’ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ.2004ರಲ್ಲಿ ಜತಿನ್‌ ದಾಸ್‌ ತಮಗೆ ಬಲವಂತವಾಗಿ ಮುತ್ತಿಕ್ಕಿದ್ದರು ಎಂದು ಉದ್ಯಮಿ ನಿಶಾ ಬೋರಾ ಆರೋಪಿಸಿದ್ದಾರೆ. ಆರೋಪವನ್ನು ಜತಿನ್‌ ತಳ್ಳಿ ಹಾಕಿದ್ದಾರೆ.

ಒಳ ಉಡುಪಿನಲ್ಲಿ ಬಾಗಿಲು ತೆರೆದ ಅಕ್ಬರ್‌!:ಕೆಲಸದ ನಿಮಿತ್ತ ತಮ್ಮನ್ನು ಹೋಟೆಲ್‌ ಕೊಠಡಿಗೆ ಆಹ್ವಾನಿಸಿದ್ದ ಎಂ.ಜೆ. ಅಕ್ಬರ್‌ ಒಳ ಉಡುಪಿನಲ್ಲಿಯೇ ಬಾಗಿಲು ತೆರೆದಿದ್ದರು ಎಂದು ಪತ್ರಕರ್ತೆ ತುಷಿತಾ ಪಟೇಲ್‌ ಮಂಗಳವಾರ ಆರೋಪಿಸಿದ್ದಾರೆ.

‘ಇದು ನಡೆದಿದ್ದು 1990ರಲ್ಲಿ. 22 ವರ್ಷದ ತಾನು ಆಗಿನ್ನೂ ದಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ತರಬೇತಿನಿರತ ಪತ್ರಕರ್ತೆಯಾಗಿ ಕೆಲಸಕ್ಕೆ ಸೇರಿದ್ದೆ’ ಎಂದು ತುಷಿತಾ ಹೇಳಿದ್ದಾರೆ. ‘ಡೆಕ್ಕನ್‌ ಕ್ರಾನಿಕಲ್‌’ ಇಂಗ್ಲಿಷ್‌ ದೈನಿಕಕ್ಕಾಗಿ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ಬಾರಿ ಅಕ್ಬರ್‌ ಅವರಿಂದ ಲೈಂಗಿಕಕಿರುಕುಳಕ್ಕೆ ಒಳಗಾಗಿದ್ದಾಗಿ ಅವರು ಹೇಳಿದ್ದಾರೆ.

‘ಕ್ವಿಂಟ್‌’ ಅಂತರ್ಜಾಲ ಪತ್ರಿಕೆಗೆ ಬರೆಯುವ ಮಹಿಳಾ ಉದ್ಯಮಿ ಸ್ವಾತಿ ಗೌತಮ್‌ ಕೂಡ ಸಚಿವರ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದಾರೆ.

ಅಕ್ಬರ್‌ ವಿರುದ್ಧ 16 ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ಸರ್ಕಾರ ಕನಿಷ್ಠ ಪಕ್ಷ ಪ್ರಾಥಮಿಕ ತನಿಖೆಗೂ ಸೂಚಿಸದಿರುವುದು ವಿಪರ್ಯಾಸ ಎಂದು ಮಹಿಳಾ ಪತ್ರಕರ್ತರ ಸಂಘಟನೆ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅವರಿಗೆ ಪತ್ರ ಬರೆದಿದೆ.

**

ಮೂವರ ತಲೆದಂಡ

‘ಮೀ ಟೂ’ ಏಟಿಗೆ ಮಂಗಳವಾರ ಕೆಲವರ ತಲೆದಂಡವಾಗಿದೆ.

ಹಿಂದಿ ಚಿತ್ರರಂಗದ ಇಬ್ಬರು ಹಿರಿಯ ಸಿಬ್ಬಂದಿ ಉದ್ಯೋಗ ಕಳೆದುಕೊಂಡರೆ, ಕಾಂಗ್ರೆಸ್‌ ವಿದ್ಯಾರ್ಥಿ ವಿಭಾಗ ಎನ್‌ಎಸ್‌ಯುಐ ಅಧ್ಯಕ್ಷ ರಾಜೀನಾಮೆ ಸಲ್ಲಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ವೈ–ಫಿಲಂಸ್‌ ಕ್ರಿಯೇಟಿವ್‌ ಮತ್ತು ಬಿಸಿನೆಸ್‌ ಮುಖ್ಯಸ್ಥ ಆಶಿಶ್‌ ಪಾಟೀಲ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಯಶ್‌ ರಾಜ್‌ ಫಿಲಂಸ್‌ ಕೆಲಸದಿಂದ ವಜಾಗೊಳಿಸಿದೆ.

ಕ್ವಾನ್‌ ಎಂಟರ್‌ಟೇನ್‌ಮೆಂಟ್‌ ಸಂಸ್ಥಾಪಕ ಅನಿರ್ಬನ್‌ದಾಸ್‌ ಬ್ಲಾಹ ಅವರನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಲಾಗಿದೆ. ದಾಸ್‌ ವಿರುದ್ಧ ನಾಲ್ವರು ಮಹಿಳೆಯರು ಆರೋಪ ಮಾಡಿದ್ದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ಫೈರೋಜ್‌ ಖಾನ್‌ ಅವರ ರಾಜೀನಾಮೆ ಪಡೆದಿದ್ದಾರೆ. ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿತ್ತು.

**

ಮನುಷ್ಯ ಪರ್ವತದಿಂದ ಬಿದ್ದು ಕೂಡ ಎದ್ದು ನಿಲ್ಲಬಹುದು. ತನ್ನ ದೃಷ್ಟಿಯಲ್ಲಿಯೇ ಕುಸಿಯುವ ವ್ಯಕ್ತಿ ಜೀವನದಲ್ಲಿ ಎಂದಿಗೂ ಎದ್ದು ನಿಲ್ಲಲಾರ.

ಸಲೀಮ್‌ ಖಾನ್‌,ಚಿತ್ರಕಥೆ ಲೇಖಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT