ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟೂ ಅಭಿಯಾನ: ಸರ್ಜಾ ವಿರುದ್ಧ ದೂರಿಗೆ ಶ್ರುತಿ ಚಿಂತನೆ

ಚಂದನವನದಲ್ಲಿ ಹೊಸ ತಿರುವು ಪಡೆಯುತ್ತಿರುವ
Last Updated 26 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಟ ಅರ್ಜುನ್‌ ಸರ್ಜಾ ವಿರುದ್ಧ ದೂರು ದಾಖಲಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ನಟಿ ಶ್ರುತಿ ಹರಿಹರನ್‌ ಪರ ವಕೀಲ ಅನಂತ್ ನಾಯ್ಕ್ ತಿಳಿಸಿದರು.

ಸರ್ಜಾ ವಿರುದ್ಧ ‘ಮೀಟೂ’ ಆರೋಪ ಹೊರಿಸಿರುವ ಶ್ರುತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ನಡೆದ ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಹಿರಿಯರು ನೀಡಿದ ಸಲಹೆಯಂತೆ, ‘ಒಂದು ದಿನದ ಮಟ್ಟಿಗೆ ಕಾದು ನೋಡುವೆ’ ಎಂದು ಶ್ರುತಿ ಹೇಳಿದ್ದರು.

‘ಸರ್ಜಾ ಅವರ ವಿರುದ್ಧ ನಾವು ಕೂಡ ಮಾನನಷ್ಟ ಮೊಕದ್ದಮೆ ದಾಖಲಿಸುವ ಚಿಂತನೆ ನಡೆಸಿದ್ದೇವೆ. ಹಾಗೆಯೇ ಲೈಂಗಿಕ ಕಿರುಕುಳದ ದೂರು ದಾಖಲಿಸುವ ಚಿಂತನೆಯೂ ಇದೆ. ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಶ್ರುತಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರ ವಿರುದ್ಧವೂ ದೂರು ದಾಖಲಿಸಲು ಸಿದ್ಧತೆ ನಡೆದಿದೆ’ ಎಂದು ಅನಂತ್ ತಿಳಿಸಿದರು.

ಹಿತರಕ್ಷಣೆಗೆ ಸಮಿತಿ: ವಾಣಿಜ್ಯ ಮಂಡಳಿಯ ಅಡಿಯಲ್ಲಿ, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಚಿತ್ರರಂಗದ ಎಲ್ಲರ ಹಿತಕಾಯುವ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತರಲು ಚಿಂತನೆ ಆರಂಭವಾಗಿದೆ. ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನಿಡಿದ ಮಂಡಳಿಯ ಗೌರವ ಕಾರ್ಯದರ್ಶಿ ಬಾ.ಮ. ಹರೀಶ್, ‘ಹಿತರಕ್ಷಣಾ ಸಮಿತಿಯ ರೂಪುರೇಷೆಗಳು ಏನಿರಬೇಕು ಎನ್ನುವ ಚರ್ಚೆ ನಡೆದಿದೆ. ಮುಂದೆ ಕಿರುಕುಳ, ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ಕೇಳಿಬಂದಾಗ ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಳ್ಳುವ ಮೊದಲು ಈ ಸಮಿತಿಗೆ ದೂರು ನಿಡಬೇಕು ಎಂಬ ವ್ಯವಸ್ಥೆ ಜಾರಿಗೆ ತರುವ ಆಲೊಚನೆ ನಡೆದಿದೆ. ದೂರುಗಳನ್ನು ಇತ್ಯರ್ಥಪಡಿಸುವ ಯತ್ನವನ್ನು ಸಮಿತಿ ಮಾಡಬೇಕಾಗುತ್ತದೆ’ ಎಂದರು.

ಈ ಸಮಿತಿಯನ್ನು ಅಸ್ತಿತ್ವಕ್ಕೆ ತರುವ ಬಗ್ಗೆ ಇದೇ 31ರಂದು ನಡೆಯಲಿರುವ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಚಿರಂಜೀವಿ ಅಭಿಯಾನ
ಅರ್ಜುನ್‌ ಸರ್ಜಾ ಅವರಿಗೆ ಬೆಂಬಲ ಸೂಚಿಸಿ ನಟ ಚಿರಂಜೀವಿ ಸರ್ಜಾ ಅವರು ಟ್ವಿಟರ್ ಮೂಲಕ ಅಭಿಯಾನ ಆರಂಭಿಸಿದ್ದಾರೆ. ‘ನೀವೇನು ಹೇಳುತ್ತೀರಿ ಸ್ನೇಹಿತರೇ? ಈ ಸಂಭಾವಿತನ ಬೆಂಬಲಕ್ಕೆ ನಿಲ್ಲೋಣ’ ಎಂದು ಚಿರಂಜೀವಿ ಅವರು ಟ್ವೀಟ್‌ ಮಾಡಿದ್ದಾರೆ. ಇದನ್ನು 411 ಜನ ರಿ–ಟ್ವೀಟ್‌ ಮಾಡಿದ್ದು, 2,300 ಜನ ಲೈಕ್‌ ಮಾಡಿದ್ದಾರೆ.

**
ಶ್ರುತಿ ಮತ್ತು ಅರ್ಜುನ್ ಸರ್ಜಾ ಕ್ಷಮೆ ಕೋರಬೇಕು. ಅವರಿಬ್ಬರೂ ಕೇಳುವ ಕ್ಷಮೆ ಚಲನಚಿತ್ರ ರಂಗದ ಘನತೆಯನ್ನು ಹೆಚ್ಚಿಸುತ್ತದೆ ಎನ್ನುವ ಭಾವನೆ ನನ್ನದು‌
ಬಿ.ಎಸ್. ಲಿಂಗದೇವರು, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT