ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಾಲು ಖರೀದಿ ದರ ಇಳಿಕೆ, ಆರ್ಥಿಕ ಸಂಕಷ್ಟಕ್ಕೆ ಒಳಗಾದ ಬೆಮುಲ್‌

Last Updated 3 ಜೂನ್ 2020, 1:58 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್‌) ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ತನ್ನ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ನೀಡುವ ಖರೀದಿ ದರವನ್ನು ಕಡಿತಗೊಳಿಸಿದೆ.

ಆಕಳು ಹಾಲಿಗೆ ಲೀಟರ್‌ಗೆ ₹ 1 ಕಡಿಮೆ ಮಾಡಲಾಗಿದ್ದು, ₹ 26.50ಕ್ಕೆ ಖರೀದಿಸಲಾಗುತ್ತಿದೆ. ಇದಕ್ಕೆ ಮುನ್ನ ₹ 27.50 ಇತ್ತು. ಎಮ್ಮೆ ಹಾಲಿಗೆ ₹ 1.25 ಇಳಿಸಲಾಗಿದೆ. ಹಿಂದೆ ₹ 36 ನೀಡಲಾಗುತ್ತಿತ್ತು. ಸರ್ಕಾರದಿಂದ ಲೀಟರ್‌ ಹಾಲಿಗೆ ₹ 5 ಪ್ರೋತ್ಸಾಹಧನ ಮುಂದುವರಿದಿದೆ.

ಕೆಲವು ತಿಂಗಳುಗಳ ಹಿಂದೆ ಆಕಳು ಹಾಲಿಗೆ ₹ 28.50 ದರ ನೀಡಿ ದಾಖಲೆ ನಿರ್ಮಿಸಲಾಗಿತ್ತು. ಬಳಿಕ ಹಂತ ಹಂತವಾಗಿ ದರ ಇಳಿಸಲಾಗಿದೆ. ಇದರಿಂದಾಗಿ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ತವರಲ್ಲೇ ಹೈನುಗಾರರ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಸಮಾರಂಭಗಳು ನಡೆಯಲು ಹಾಗೂ ಹೋಟೆಲ್‌ಗಳ ಆರಂಭಕ್ಕೆ ಅನುಮತಿ ದೊರೆತರೆ ಪರಿಸ್ಥಿತಿ ಸುಧಾರಿಸಬಹುದು ಎನ್ನಲಾಗುತ್ತಿದೆ.

ಒಕ್ಕೂಟಕ್ಕೆ ಈಗ ನಿತ್ಯ 2.05 ಲಕ್ಷ ಲೀಟರ್‌ ಹಾಲು ಸಂಗ್ರಹವಿದೆ. ಇದರಲ್ಲಿ 60 ಸಾವಿರ ಲೀಟರ್‌ ಮಾತ್ರವೇ ಮಾರಾಟವಾಗುತ್ತಿದೆ. 30ರಿಂದ 40ಸಾವಿರ ಲೀಟರ್‌ ಅನ್ನು ಹೆಚ್ಚು ದಿನಗಳವರೆಗೆ ಬಾಳಿಕೆ ಬರುವಂತಹ ಫ್ಲೆಕ್ಸಿ ಪ್ಯಾಕ್ ಮಾಡಿ ಆಂಧ್ರಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಒಂದು ಲಕ್ಷ ಲೀಟರ್‌ ಅನ್ನು ಹಾಲಿನ ಪುಡಿ ತಯಾರಿಕೆಗೆಂದು ಸಂಬಂಧಿಸಿದ ಘಟಕಗಳಿಗೆ ರವಾನಿಸಲಾಗುತ್ತಿದೆ. ಕುಂದಾ, ಬೆಣ್ಣೆ ಮೊದಲಾದ ಉಪ ಉತ್ಪನ್ನಗಳಿಗೂ ಬೇಡಿಕೆ ಕುಸಿದಿರುವುದರಿಂದಾಗಿ ವರಮಾನ ಖೋತಾ ಆಗುತ್ತಿದೆ.

ಪರಿಸ್ಥಿತಿ ನಿರ್ವಹಣೆಗಾಗಿ

‘ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. ಇದರಿಂದಾಗಿ ಹಾಲು ನೀಡಿದ ರೈತರಿಗೆ ಹಣ ಕೊಡುವುದಕ್ಕೆ ತೊಂದರೆ ಆಗುತ್ತಿದೆ. ಪರಿಸ್ಥಿತಿ ನಿರ್ವಹಣೆಗೋಸ್ಕರ ಹಾಲು ಖರೀದಿ ದರವನ್ನು ಮೇ 21ರಿಂದಲೇ ಅನ್ವಯವಾಗುವಂತೆ ಕಡಿಮೆ ಮಾಡಲಾಗಿದೆ’ ಎಂದು ಬೆಮುಲ್ ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್–19 ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಿಗೆ ಅವಕಾಶವಿಲ್ಲ. ಸಿಹಿ ತಿನಿಸು ತಯಾರಕರಿಂದಲೂ ಹಾಲಿಗೆ ಬೇಡಿಕೆ ಇಲ್ಲ. ಮದುವೆ ಮತ್ತಿತರ ಸಮಾರಂಭಗಳು ನಡೆಯುತ್ತಿಲ್ಲ. ಪ್ರವಾಸೋದ್ಯಮ ಚಟುವಟಿಕೆಗಳು ಕೂಡ ನಿಂತು ಹೋಗಿವೆ. ಇವೆಲ್ಲ ಕಾರಣಗಳಿಂದಾಗಿ ಹಾಲಿಗೆ ಬೇಡಿಕೆ ಕುಸಿದಿದೆ. ಹಾಲಿನ ಉತ್ಪನ್ನಗಳ ಮಾರಾಟವೂ ಚೇತರಿಕೆ ಕಂಡಿಲ್ಲ. ಹೀಗಾಗಿ, ಪರಿಸ್ಥಿತಿ ಸುಧಾರಿಸುವವರೆಗೆ ದರ ಏರಿಕೆ ಕಷ್ಟವಾಗುತ್ತದೆ. ರೈತರಿಂದ ಹಾಲು ಖರೀದಿಸಿ ಹಣವನ್ನೇ ಕೊಡದಿದ್ದರೆ ಏನು ಪ್ರಯೋಜನ? ಹೀಗಾಗಿ, ದರ ಇಳಿಕೆ ನಿರ್ಧಾರಕ್ಕೆ ಬರಲಾಗಿದೆ’ ಎನ್ನುತ್ತಾರೆ ಅವರು.

ದಾಖಲೆಯಾಗಿತ್ತು

‘ಒಕ್ಕೂಟದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೆಲ ತಿಂಗಳ ಹಿಂದೆ ಆಕಳು ಹಾಲಿಗೆ ಲೀಟರ್‌ಗೆ ₹ 28.50 ದರ ನೀಡಿದ್ದೆವು. ಆಗ, ಹಾಲಿಗೆ ಬೇಡಿಕೆ ಜಾಸ್ತಿ ಇತ್ತು; ಮಾರಾಟವೂ ಆಗುತ್ತಿತ್ತು. ಲಾಭವನ್ನು ಹೈನುಗಾರರೊಂದಿಗೆ ಹಂಚಿಕೊಂಡಿದ್ದೆವು. ಆದರೆ, ಈಗ ಕೊರೊನಾ ಬಿಕ್ಕಟ್ಟು ಸೃಷ್ಟಿಸಿದೆ. ಆದರೆ, ರೈತರಿಗೆ ಹಣ ಬಾಕಿ ಉಳಿಸಿಕೊಳ್ಳದಂತೆ ನಿರ್ವಹಿಸುತ್ತಿದ್ದೇವೆ’ ಎಂದು ಹೇಳಿದರು.

‘ಒಕ್ಕೂಟದಿಂದ ಮಹಾರಾಷ್ಟ್ರ, ಗೋವಾ, ಹೈದರಾಬಾದ್, ಗುಜರಾತ್‌ ಮೊದಲಾದ ರಾಜ್ಯಗಳಿಗೆ ಹಾಲು ಪೂರೈಸಲಾಗುತ್ತಿತ್ತು. ಕೊರೊನಾ ಸೋಂಕಿನ ಭೀತಿ ಕಾಣಿಸಿಕೊಂಡ ನಂತರ ಅಲ್ಲಿ ಬೇಡಿಕೆ ಇಲ್ಲ. ಪ್ರಸ್ತುತ ಗೋವಾದಲ್ಲಿನ ಬೇಡಿಕೆ ಶೇ 50ರಷ್ಟು ಕುಸಿದಿದೆ. ನೆರೆಯ ಮಹಾರಾಷ್ಟ್ರಕ್ಕೆ ನಿತ್ಯ 35ಸಾವಿರ ಲೀಟರ್ ಹಾಲು ರವಾನಿಸುತ್ತಿದ್ದೆವು. ಈಗ ಕೇವಲ 3ಸಾವಿರ ಲೀಟರ್‌ ಹೋಗುತ್ತಿದೆ’ ಎಂದು ಅಂಕಿ–ಅಂಶ ನೀಡಿದರು.

ಜೂನ್‌ 9ರಂದು ಸಭೆ

‘ಜೂನ್‌ 9ರಂದು ಒಕ್ಕೂಟದ ಆಡಳಿತ ಮಂಡಳಿಯ ಸಭೆ ಇದೆ. ಅಲ್ಲಿ ಮಾರುಕಟ್ಟೆಯ ಪರಿಸ್ಥಿತಿ ಬಗ್ಗೆ ಚರ್ಚಿಸಲಾಗುವುದು. ಮತ್ತಷ್ಟು ದರ ಕಡಿಮೆ ಮಾಡಲು ಮಂಡಳಿ ನಿರ್ಧರಿಸಿದರೆ ಅದರಂತೆ ಕ್ರಮ ಕೈಗೊಳ್ಳಲಾಗುವುದು. ಇಲ್ಲವಾದಲ್ಲಿ ಯಥಾಸ್ಥಿತಿ ಮುಂಧುವರಿಯಲಿದೆ. ಆದರೆ, ದರ ಹೆಚ್ಚಿಸುವ ಪ್ರಸ್ತಾವ ಸದ್ಯಕ್ಕಿಲ್ಲ’ ಎಂದು ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT