ಬಿಜೆಪಿಯವರಿಗೆ ಮುತ್ತು ನೀಡಿ ಆಹ್ವಾನಿಸಬೇಕಿತ್ತೇ?: ಸಚಿವ ರೇವಣ್ಣ ಪ್ರಶ್ನೆ

7

ಬಿಜೆಪಿಯವರಿಗೆ ಮುತ್ತು ನೀಡಿ ಆಹ್ವಾನಿಸಬೇಕಿತ್ತೇ?: ಸಚಿವ ರೇವಣ್ಣ ಪ್ರಶ್ನೆ

Published:
Updated:

ನವದೆಹಲಿ: ‘ಪ್ರಧಾನಿ ಭೇಟಿಗಾಗಿ ತೆರಳುತ್ತಿರುವ ನಿಯೋಗದಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಮುಖಂಡರನ್ನು ಕರೆಯುವ ರೀತಿಯಲ್ಲೇ ಕರೆದಿದ್ದೇವೆ. ಆದರೂ, ಸೂಕ್ತ ರೀತಿಯಲ್ಲಿ ಆಹ್ವಾನ ನೀಡಿಲ್ಲ ಎಂದು ಆ ಪಕ್ಷದ ಮುಖಂಡರು ಆರೋಪಿಸಿದ್ದಾರೆ. ಹಾಗಿದ್ದರೆ, ಅವರನ್ನು ಮುತ್ತಿಕ್ಕಿ ಆಹ್ವಾನಿಸಬೇಕಿತ್ತೇ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಪ್ರಶ್ನಿಸಿದರು.

‘ಅನೇಕ ವರ್ಷಗಳಿಂದ ಬಿಜೆಪಿ ಶಾಸಕರು ಮತ್ತು ಸಂಸದರನ್ನೇ ಕೊಡಗಿನ ಜನ ಆಯ್ಕೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೀಲ್‌ ಹಾಕುವಂತೆ ಅವರ ಹೆಸರಿಗೇ ಮತ ನೀಡುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ ಜಿಲ್ಲೆಗಳ ಜನತೆ ಸಮಸ್ಯೆಗೆ ಒಳಗಾಗಿದ್ದಾರೆ. ಅಲ್ಲೆಲ್ಲ ಬಿಜೆಪಿ ಸಂಸದರೇ ಇದ್ದಾರೆ. ಆದರೂ ತಮಗೆ ಮತ ನೀಡಿದ ಜನತೆಗೆ ನೆರವು ಕೋರಲು ಬಾರದೆ ಅವರು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ತೀವ್ರ ಮಳೆಯಿಂದ 2,910 ಕಿಲೋಮೀಟರ್‌ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಮತ್ತು ಸೇತುವೆಗಳ ಮರು ನಿರ್ಮಾಣಕ್ಕೆ ₹ 2,078 ಕೋಟಿ ನೆರವು ನೀಡುವಂತೆ ಪ್ರಧಾನಿಯವರಿಗೆ ಪ್ರತ್ಯೇಕವಾದ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

‘ದುರುದ್ದೇಶದಿಂದ ಬಿಸ್ಕೆಟ್‌ ಎಸೆಯಲಿಲ್ಲ’
ಇತ್ತೀಚೆಗೆ ನಾನು ಪ್ರವಾಹಪೀಡಿತ ಪ್ರದೇಶಕ್ಕೆ ತೆರಳಿ ಸಂತ್ರಸ್ತರಿಗೆ ಬಿಸ್ಕೆಟ್‌ ಎಸೆದಿದ್ದನ್ನು ತೀವ್ರವಾಗಿ ಟೀಕಿಸಲಾಯಿತು. ನಾನಂತೂ ದುರುದ್ದೇಶದಿಂದ ಜನತೆಗೆ ಬಿಸ್ಕೆಟ್‌ ಎಸೆದಿರಲಿಲ್ಲ. ಹಸಿವಿನಿಂದ ಬಳಲುತ್ತಿದ್ದ ಚಿಕ್ಕಮಕ್ಕಳ ಬಳಿ ಹೋಗಲಾಗದೆ ವಿಧಿ ಇಲ್ಲದೆ ಬಿಸ್ಕೆಟ್‌ ಎಸೆದಿದ್ದೆ. ಅದಕ್ಕೆ ಕ್ಷಮೆಯನ್ನು ಯಾಚಿಸಿದ್ದೆ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಸ್ಪಷ್ಟಪಡಿಸಿದರು.

ಹಾಸನ ಜಿಲ್ಲಾ ಹಾಲು ಉತ್ಪಾದಕರ ಮಹಾಮಂಡಳಿಯಿಂದ ಒಂದು ಲಾರಿಯಷ್ಟು ಅಕ್ಕಿ, ತೊಗರಿಬೇಳೆ, ಒಳ್ಳೆಣ್ಣೆ, 5,000 ಲೀಟರ್‌ ಹಾಲು, 5,000 ಪ್ಯಾಕೆಟ್‌ ಬಿಸ್ಕೆಟ್‌ ಅನ್ನು ಸಂತ್ರಸ್ತರಿಗೆ ತ್ವರಿತವಾಗಿ ವಿತರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅಂತೆಯೇ ಎಲ್ಲ ಸಾಮಗ್ರಿಗಳ ಜೊತೆ ಪ್ರವಾಹ ಪೀಡಿತ ಗ್ರಾಮಕ್ಕೆ ತೆರಳಿದಾಗ ಅಚಾತುರ್ಯದಿಂದ ಆ ಘಟನೆ ನಡೆಯಿತು. ಬಿಸ್ಕೆಟ್‌ ಎಸೆದಿದ್ದರಲ್ಲಿ ದುರುದ್ದೇಶ ಅಥವಾ ದರ್ಪ ಇರಲಿಲ್ಲ ಎಂದು ಅವರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !