ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಗಿರಿ, ಕಾಂಚಾಣ ಯಾರಿಗೆ?

ಮೊಗಸಾಲೆಯಲ್ಲಿ ಬಿಜೆಪಿ ಶಾಸಕರ ಸ್ವಾರಸ್ಯಕರ ಚರ್ಚೆ
Last Updated 15 ಜುಲೈ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಮಂತ್ರಿಗಿರಿ ಯಾರಿಗೆ? ಕಾಂಚಾಣ ಎಷ್ಟು ಶಾಸಕರಿಗೆ? ವಲಸಿಗರಿಗೆ ಸ್ಥಾನ ಬಿಟ್ಟುಕೊಟ್ಟು ‘ತ್ಯಾಗರಾಜ’ ಪಟ್ಟ ಎಷ್ಟು ಶಾಸಕರ ಕುತ್ತಿಗೆಗೆ ಬೀಳಲಿದೆ ಎಂಬ ಸ್ವಾರಸ್ಯಕರ ಚರ್ಚೆ ಸೋಮವಾರ ವಿಧಾನಸಭೆ ಮೊಗಸಾಲೆಯಲ್ಲಿ ನಡೆದಿತ್ತು.

ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ‘ರನ್ನಿಂಗ್ ರೇಸ್‌’ ಮಾಡಿ ರಾಜೀನಾಮೆ ಸಲ್ಲಿಸಿದ ಅತೃಪ್ತರಲ್ಲಿ ಏಳರಿಂದ ಎಂಟು ಜನ ಶಾಸಕರಿಗೆ ಸಚಿವ ಸ್ಥಾನ ‘ಉಡುಗೊರೆ’ಯಾಗಿ ಸಿಗಬಹುದು. ಇವರ ನಿಷ್ಠೆಯನ್ನು ಪಕ್ಷದ ವರಿಷ್ಠರು ಖಂಡಿತಾ ಗಣನೆಗೆ ತೆಗೆದುಕೊಳ್ಳುತ್ತಾರೆ ಎಂಬ ಮಾತು ಕೇಳಿ ಬಂತು.

‘ಬಂದ ಎಲ್ಲ ಶಾಸಕರಿಗೂ ಮಂತ್ರಿ ಸ್ಥಾನ ಸಿಗುವುದು ಕಷ್ಟ. ಕೆಲವರಿಗೆ ನಿಗಮ ಮಂಡಳಿ, ಕೆಲವರಿಗೆ ಹಣದ ಗಂಟೂ ಸಿಗಬಹುದು. ಚುನಾವಣೆ ಎದುರಿಸಲು ಹಣ ಬೇಕಾಗುತ್ತದೆ ಎಂಬ ಕಾರಣಕ್ಕೆ ಹಣ ಕೇಳುವ ಶಾಸಕರೂ ಇರುತ್ತಾರೆ. ಜತೆಗೆ ವಿಧಾನಸಭಾ ಕ್ಷೇತ್ರಗಳಿಗೆ ಅಭಿವೃದ್ಧಿಗೆ ಅನುದಾನವನ್ನೂ ಕೇಳಬಹುದು. ಈ ವಿಚಾರದಲ್ಲಿ ಇತರ ರಾಜಕಾರಣಿಗಳಿಗಿಂತ ‘ಸಾಹೇಬ್ರು’(ಬಿಎಸ್‌ವೈ) ಉದಾರಿ’ ಎಂಬ ಮಾತೂ ಕೇಳಿ ಬಂತು.

‘ಒಂದಿಬ್ಬರಿಗಾದರೂ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕರೂ ಅಚ್ಚರಿ ಇಲ್ಲ. ಇವೆಲ್ಲದರ ಪರಿಣಾಮ ಕೆಲವು ದಿನಗಳಿಂದ ಯಡಿಯೂರಪ್ಪ ಸುತ್ತಮುತ್ತ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಾಸಕರು ‘ತ್ಯಾಗ’ ಜೀವಿಗಳಾಗುವ ಅನಿವಾರ್ಯತೆ ಇದೆ. ಅದಕ್ಕೆ ಸಿದ್ಧರಾಗಲೇಬೇಕು ಎಂಬ ಸೂಚನೆಯೂ ಇದೆ. ಅಂತಹ ‘ತ್ಯಾಗಿ’ಗಳು ಯಾರಾಗಬಹುದು’ ಎಂಬ ಚರ್ಚೆ ಶಾಸಕರ ಮಧ್ಯೆ ನಡೆದಿತ್ತು.

ಆಪರೇಷನ್‌ ಪೋಸ್‌ ಕೊಟ್ಟವರು:‘ದೋಸ್ತಿ’ ಪಕ್ಷಗಳ ಡಜನ್‌ಗೂ ಹೆಚ್ಚು ಶಾಸಕರ ‘ಆಪರೇಷನ್‌’ ಯಶಸ್ವಿ ಆದ ಬಳಿಕ ಕೆಲವು ನಾಯಕರು ತಾವೇ ಇದಕ್ಕೆ ಕಾರಣ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ನಿಜವಾಗಿ ‘ಆಪರೇಷನ್’ ನಡೆಸಿರುವವರು ತಣ್ಣಗೆ ಕುಳಿತ್ತಿದ್ದು, ತಮ್ಮದೇ ಪಕ್ಷದ ಕೆಲವು ನಾಯಕರು ನಡೆಸುತ್ತಿರುವ ಸರ್ಕಸ್‌ ನೋಡಿ ಮುಸಿ ಮುಸಿ ನಗುತ್ತಿದ್ದಾರೆ.

ಇಡೀ ವಿದ್ಯಮಾನಗಳನ್ನು ಬಲ್ಲ ಶಾಸಕರೊಬ್ಬರು ತಮ್ಮ ಪಕ್ಷದ ಕೆಲವು ನಾಯಕರು ಟಿ.ವಿ ಕ್ಯಾಮೆರಾಗಳ ಮುಂದೆ ಮಹಾನ್‌ ನಾಯಕರು ಎಂಬಂತೆ ಬಿಂಬಿಸಿಕೊಳ್ಳಲು ತಿಣುಕಾಡುತ್ತಿರುವುದನ್ನು ತಮ್ಮದೇ ಶೈಲಿಯಲ್ಲಿ ಕಾಲೆಳೆದು ಮನಸಾರೆ ನಕ್ಕರು.

‘ಟಿ.ವಿ ಚಾನೆಲ್‌ಗಳಲ್ಲಿ ಪ್ರತಿ ದಿನ ಬಂದು ಹೇಳಿಕೆಗಳನ್ನು ಕೊಡುತ್ತಿರುವ ಯಾರೂ ಆಪರೇಷನ್‌ನಲ್ಲಿ ಇರಲಿಲ್ಲ. ಅಷ್ಟೇ ಅಲ್ಲ ಕನಿಷ್ಠ ಮಾಹಿತಿಯೂ ಇರಲಿಲ್ಲ. ಕಾಂಗ್ರೆಸ್‌ ಶಾಸಕ ರಾಮಲಿಂಗಾರೆಡ್ಡಿ ಮೂಲಕ ಬೆಂಗಳೂರಿನ ನಾಲ್ಕು ಶಾಸಕರ ಆಪರೇಷನ್‌ ನಡೆದಿದೆ. ಆಪರೇಷನ್‌ ನಡೆಸಿ ರಾಮಲಿಂಗಾರೆಡ್ಡಿಯವರನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ನೇರ ಕಾರ್ಯಾಚರಣೆಗೆ ಇಳಿದವರು ಕೆಲವು ವಾಣಿಜ್ಯೋದ್ಯಮಿಗಳು. ರಾಜ್ಯ ಬಿಜೆಪಿಯ ಒಂದಿಬ್ಬರಿಗೆ ಮಾತ್ರ ಕಾರ್ಯಾಚರಣೆಯ ಪೂರ್ಣ ಮಾಹಿತಿ ಇತ್ತು’ ಎಂದು ಶಾಸಕರೊಬ್ಬರು ಹೇಳಿದರು.

ಸದಾ ಕ್ಯಾಮೆರಾಗಳ ಮುಂದೆ ಕಾಣಿಸಿಕೊಳ್ಳುವ ಅರವಿಂದ ಲಿಂಬಾವಳಿ, ಆರ್‌.ಆಶೋಕ್, ಸಿ.ಟಿ.ರವಿ ಅವರ ಮಾತು ಹಾಗಿರಲಿ, ಬಿ.ಎಸ್‌.ಯಡಿಯೂರಪ್ಪ ಅವರಿಗೂ ಒಂದು ಹಂತದವರೆಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಬಳಿಕ ಅವರಿಗೆ ತಿಳಿಸಲಾಗುತ್ತಿತ್ತು.

ಅಬಾರ್ಷನ್‌ಗೆ ಬ್ರೇಕ್‌

ಈ ಹಿಂದೆ ಮೂರು ಬಾರಿ ‘ಆಪರೇಷನ್‌’ ಆಗದೇ ‘ಅಬಾರ್ಷನ್‌’ ಆಗಿದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಮುಜುಗರಕ್ಕೆ ಒಳಗಾಗಿತ್ತು. ಆದರೆ, ಈ ಬಾರಿ ಪಕ್ಕಾ ಯೋಜನೆ ರೂಪಿಸಿಕೊಂಡು, ಎರಡು– ಮೂರು ಗುಂಪುಗಳಲ್ಲಿ ಪ್ರತ್ಯೇಕ ಆಪರೇಷನ್‌ ನಡೆಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಇನ್ನೊಂದಿಬ್ಬರು ವ್ಯಕ್ತಿಗಳು ಮಾತ್ರ ಕಾರ್ಯಾಚರಣೆಗೆ ಇಳಿದಿದ್ದರು.

ಆಪರೇಷನ್‌ ಕಾರ್ಯಗತಗೊಳಿಸುವ ಅಂತಿಮ ಹಂತದಲ್ಲಿ ಅರವಿಂದ್‌ ಲಿಂಬಾವಳಿ, ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಇನ್ನು ಕೆಲವರನ್ನು ಬಳಸಿಕೊಳ್ಳಲಾಯಿತು. ಇವರನ್ನು ಬಿಟ್ಟು ಈಗ ಕ್ಯಾಮೆರಾಗಳ ಮುಂದೆ ಕಾಣಿಸಿಕೊಳ್ಳುವ ನಾಯಕರಿಗೆ ಯಾರೆಲ್ಲ ಬರುತ್ತಾರೆ, ಏನೆಲ್ಲ ಆಗುತ್ತಿದೆ ಎಂಬ ಸುಳಿವೇ ಇರಲಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT