ಭಾನುವಾರ, ಏಪ್ರಿಲ್ 11, 2021
26 °C

ಕಾಂಗ್ರೆಸ್, ಜೆಡಿಎಸ್ ಸಚಿವರಿಂದ ಸಾಮೂಹಿಕ ರಾಜೀನಾಮೆ | ಮಂತ್ರಿಗಳೇ ಇಲ್ಲದ ಮಂಡಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈತ್ರಿ ಸರ್ಕಾರದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಚಿವರು ಸೋಮವಾರ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯನ್ನು ಹೊರತುಪಡಿಸಿ ಮಂತ್ರಿಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಇತಿಹಾಸದಲ್ಲಿ ಎಂದೂ ಇಂತಹದೊಂದು ಶೂನ್ಯ ಸ್ಥಿತಿ ತಲೆದೋರಿರಲಿಲ್ಲ. ಇದೊಂದು ವಿಚಿತ್ರ ರಾಜಕೀಯ ವಾತಾವರಣ ನಿರ್ಮಾಣವಾಗಿದೆ ಎಂದು ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ಸಚಿವರು ಸಿದ್ದರಾಮಯ್ಯ ಅವರಿಗೂ, ಜೆಡಿಎಸ್ ಸಚಿವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಭಾಗವಾಗಿ ಉಭಯ ಪಕ್ಷಗಳ ನಾಯಕರು ತಮ್ಮ ಸಚಿವರಿಂದ ರಾಜೀನಾಮೆ ಪಡೆದುಕೊಂಡಿದ್ಡು, ಈ ಮೂಲಕ ಅತೃಪ್ತರಿಗೆ ಅಧಿಕಾರದ ಸಂದೇಶವನ್ನು ನೀಡಿ ಅವರನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿದ್ದಾರೆ.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಮನೆಯಲ್ಲಿ ಕಾಂಗ್ರೆಸ್ ಸಚಿವರು, ಮುಖಂಡರಿಗೆ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಜೆಡಿಎಸ್ ಪರವಾಗಿ ಎಚ್.ಡಿ.ಕುಮಾರಸ್ವಾಮಿ ಸಹ ಭಾಗವಹಿಸಿದ್ದರು.

‘ಸಚಿವರಾದ ಆರ್.ವಿ.ದೇಶಪಾಂಡೆ, ಶಿವಾನಂದ ಪಾಟೀಲ ವೈಯಕ್ತಿಕ ಕಾರಣದಿಂದಾಗಿ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ರಾಜೀನಾಮೆ ಕೊಡುವುದಾಗಿ ದೂರವಾಣಿಯಲ್ಲಿ ತಿಳಿಸಿದ್ದಾರೆ. ಉಳಿದ ಎಲ್ಲ ಕಾಂಗ್ರೆಸ್ ಸಚಿವರು ಭಾಗವಹಿಸಿದ್ದರು’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸಚಿವರ ರಾಜೀನಾಮೆ ನಿರ್ಧಾರ ಹೊರಬೀಳುತ್ತಿದ್ದಂತೆ ಜೆಡಿಎಸ್ ಕೂಡ ಅದೇ ರೀತಿಯ ನಿರ್ಧಾರ ಕೈಗೊಂಡಿತು. ‘ಜೆಡಿಎಸ್ ಸಚಿವರು ರಾಜೀನಾಮೆ ನೀಡಿದ್ದಾರೆ. ಶೀಘ್ರ ಸಚಿವ ಸಂಪುಟ ಪುನರ್ ರಚಿಸಲಾಗುವುದು’ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸರ್ಕಾರ ಅಲ್ಪಮತಕ್ಕೆ ಕುಸಿಯುವತ್ತ ಸಾಗಿದ್ದರೂ, ಉಳಿಸಿಕೊಳ್ಳಲು ಇಡೀ ದಿನ ಉಭಯ ಪಕ್ಷಗಳ ನಾಯಕರು ಕಸರತ್ತು ನಡೆಸಿದರು. ಕಳೆದ ಎರಡು ದಿನಗಳಿಂದ ಇಂಥ ಪ್ರಯತ್ನ ನಡೆಯುತ್ತಲೇ ಇದ್ದು, ಇಂದೂ ಸಹ ಅದು ಮುಂದುವರಿಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು