ಸಚಿವರು, ಶಾಸಕರೊಂದಿಗೆ ಸಿದ್ದರಾಮಯ್ಯ ಚರ್ಚೆ

7

ಸಚಿವರು, ಶಾಸಕರೊಂದಿಗೆ ಸಿದ್ದರಾಮಯ್ಯ ಚರ್ಚೆ

Published:
Updated:

ಮಂಗಳೂರು: ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಬ್ಬರು ಸಚಿವರು, ಹಲವು ಶಾಸಕರು ಬುಧವಾರ ಭೇಟಿ ಮಾಡಿದ್ದಾರೆ. ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರು ತಮ್ಮ ಆಪ್ತರೊಂದಿಗೆ ನಡೆಸಿರುವ ಮಾತುಕತೆಯ ವಿವರಗಳು ಬಹಿರಂಗಗೊಂಡಿಲ್ಲ. ಆದರೆ, ಮಾತುಕತೆ ಮುಗಿಸಿ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಸವಕಲ್ಯಾಣ ಶಾಸಕ ಬಿ.ನಾರಾಯಣ ರಾವ್‌, ‘ಸಿದ್ದರಾಮಯ್ಯ ಅವರನ್ನು ಕಡೆಗಣಿಸಿ ಈ ಸಮ್ಮಿಶ್ರ ಸರ್ಕಾರ ಉಳಿಯುತ್ತಾ’ ಎಂದು ಪ್ರಶ್ನೆ ಹಾಕಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಆರೋಗ್ಯ ಸಚಿವ ಶಿವಾನಂದ ಪಾಟೀಲ, ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ರಾಯಚೂರು ಸಂಸದ ಬಿ.ವಿ.ನಾಯಕ್‌, ಶಾಸಕರಾದ ಮಹೇಶ್‌ ಕುಮತಳ್ಳಿ, ಶ್ರೀಮಂತ್‌ ಬಾಳಾಸಾಹೇಬ್‌ ಪಾಟೀಲ, ಬಿ.ನಾರಾಯಣ ರಾವ್, ಬಿ.ನಾಗೇಂದ್ರ, ಬಸವನಗೌಡ ದಡ್ಡಲ್‌, ಪ್ರತಾಪಗೌಡ ಪಾಟೀಲ ಮತ್ತು ವಿಧಾನ ಪರಿಷತ್‌ ಸದಸ್ಯ ವಿವೇಕ್‌ ರಾವ್‌ ಪಾಟೀಲ ಮಧ್ಯಾಹ್ನ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಒಂದು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ, ರಾಜಕೀಯ ಬೆಳವಣಿಗೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಚಿವ ರಮೇಶ್‌ ಜಾರಕಿಹೊಳಿ, ಶಾಸಕರು ಮತ್ತು ಸಂಸದರ ತಂಡ ವಿಶೇಷ ವಿಮಾನದಲ್ಲಿ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಶಿವಾನಂದ ಪಾಟೀಲ ಬೇರೊಂದು ವಿಮಾನದಲ್ಲಿ ಬಂದರು. ಸಚಿವರು ಕಾರಿನಲ್ಲಿ ಉಳಿದವರು ಟೆಂಪೊ ಟ್ರಾವೆಲ್ಲರ್‌ನಲ್ಲಿ ಪ್ರಯಾಣಿಸಿ ಶಾಂತಿವನ ತಲುಪಿದರು.

ಸಚಿವರು ಶಾಸಕರ ಭೇಟಿ ವೇಳೆ ಬಿಗಿಭದ್ರತೆ ಕಲ್ಪಿಸಲಾಗಿತ್ತು. ಹೊರಗಿನ ವ್ಯಕ್ತಿಗಳು ಮಾತುಕತೆ ನಡೆಯುತ್ತಿದ್ದ ಸ್ಥಳಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಸಿದ್ದರಾಮಯ್ಯ, ಊಟದ ವಿರಾಮದ ವೇಳೆಗೆ ಅಲ್ಲಿಂದ ಚಿಕಿತ್ಸಾ ಕೊಠಡಿಗೆ ನಿರ್ಗಮಿಸಿದರು.

ಸಚಿವರು ಮತ್ತು ಬಹುತೇಕ ಶಾಸಕರು ಭೇಟಿಯ ಕುರಿತು ಹೆಚ್ಚೇನೂ ಮಾಹಿತಿ ಹಂಚಿಕೊಳ್ಳಲಿಲ್ಲ. ‘ಸಿದ್ದರಾಮಯ್ಯ ನಮ್ಮ ನಾಯಕರು. ಅವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಮಾತನಾಡಿಸಲು ಬಂದಿದ್ದೇವೆ’ ಎಂಬ ಉತ್ತರ ನೀಡಿ ನಿರ್ಗಮಿಸಿದರು.

‘ಕಡೆಗಣಿಸಿ ಸರ್ಕಾರ ಉಳಿಯುತ್ತಾ?’:

ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಬಿ.ನಾರಾಯಣ ರಾವ್‌, ‘ಸಿದ್ದರಾಮಯ್ಯ ಅವರನ್ನು ಯಾರೂ ಕಡೆಗಣಿಸಿಲ್ಲ. ಅವರು ನಮ್ಮ ನಾಯಕರು. ಅವರೊಬ್ಬ ಮಾಸ್‌ ಲೀಡರ್‌. ಈ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲು ಅವರೇ ಕಾರಣ. ಸಿದ್ದರಾಮಯ್ಯ ಅವರನ್ನು ಕಡೆಗಣಿಸಿ ಈ ಸಮ್ಮಿಶ್ರ ಸರ್ಕಾರ ಉಳಿಯಲು ಸಾಧ್ಯವಾ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ. ಅವರಿಗೆ ಯಾವ ಅಸಮಾಧಾನವೂ ಇಲ್ಲ. ಅಂತಹ ಯಾವುದೇ ಚರ್ಚೆಯೂ ನಡೆದಿಲ್ಲ ಎಂದರು.

ಸಮನ್ವಯ ಸಮಿತಿ ಇತ್ಯರ್ಥ:

ಸಚಿವರು ಶಾಸಕರು ಹೊರಡುತ್ತಿದ್ದಂತೆಯೇ ಮಾಜಿ ಸಚಿವ ಟಿ.ಬಿ.ಜಯಚಂದ್ರ ಶಾಂತಿವನಕ್ಕೆ ಬಂದರು. ಆದರೆ, ಅಷ್ಟರಲ್ಲಾಗಲೇ ಸಿದ್ದರಾಮಯ್ಯ ಅವರು ಮಧ್ಯಾಹ್ನದ ಊಟ ಮತ್ತು ಚಿಕಿತ್ಸೆಗಾಗಿ ಹೊರಟು ನಿಂತಿದ್ದರು. ಸಂಜೆ ಭೇಟಿಯಾಗುವಂತೆ ಜಯಚಂದ್ರ ಅವರಿಗೆ ಸೂಚಿಸಿ ಹೊರಟುಹೋದರು. ಮತ್ತೆ ಸಂಜೆ ಅಲ್ಲಿಗೆ ಬಂದ ಜಯಚಂದ್ರ ಅವರು ಭೇಟಿಮಾಡಿ ಕೆಲಕಾಲ ಚರ್ಚೆ ನಡೆಸಿದರು.

ಮಾತುಕತೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಜಯಚಂದ್ರ, ‘ಸಿದ್ದರಾಮಯ್ಯ ಅವರಿಗೆ ಯಾವುದೇ ರೀತಿಯ ಅಸಮಾಧಾನವೂ ಇಲ್ಲ. ಅವರೇ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಅಂತಿಮಗೊಳಿಸಲಾಗುತ್ತಿದೆ. ಅದರಂತೆ ಸಮ್ಮಿಶ್ರ ಸರ್ಕಾರ ಕೆಲಸ ಮಾಡುತ್ತದೆ. ಮುಂದಿನ ವಾರ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಬಜೆಟ್‌ ಮಂಡನೆ ಸೇರಿದಂತೆ ಎಲ್ಲ ವಿಚಾರಗಳೂ ಆ ಸಭೆಯಲ್ಲಿ ಇತ್ಯರ್ಥವಾಗುತ್ತವೆ’ ಎಂದರು.

ಇಂದು ನಿರ್ಗಮನ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸೆ ಮುಗಿಸಿ ಗುರುವಾರ ಬೆಳಿಗ್ಗೆ ಧರ್ಮಸ್ಥಳದ ಶಾಂತಿವನದಿಂದ ನಿರ್ಗಮಿಸುವರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಗುರುವಾರ ಬೆಳಿಗ್ಗೆ ಚಿಕಿತ್ಸೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಅಲ್ಲಿಂದ ಹೊರಡುವ ಸಿದ್ದರಾಮಯ್ಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ತೆರಳಿ ದರ್ಶನ ಪಡೆಯುವರು. ಬಳಿಕ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ಬೆಂಗಳೂರಿನತ್ತ ಪ್ರಯಾಣಿಸುವರು. ನಿರ್ಗಮನದ ಮುನ್ನ ವಿಮಾನ ನಿಲ್ದಾಣದಲ್ಲೇ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 21

  Happy
 • 3

  Amused
 • 2

  Sad
 • 3

  Frustrated
 • 7

  Angry

Comments:

0 comments

Write the first review for this !