ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತ ಶಾಸಕರು ಉಳಿದುಕೊಂಡಿರುವ ಹೋಟೆಲ್‌ ಕೊಠಡಿ ಬಾಡಿಗೆ ₹23 ಸಾವಿರ

Last Updated 7 ಜುಲೈ 2019, 20:00 IST
ಅಕ್ಷರ ಗಾತ್ರ

ಮುಂಬೈ: ಶಾಸಕರು ಉಳಿದುಕೊಂಡಿರುವ ಇಲ್ಲಿನ ಸೋಫಿಟೆಲ್ ಹೋಟೆಲ್‌ ಎಂದರೆ ಐಷಾರಾಮಕ್ಕೆ ಮತ್ತೊಂದು ಹೆಸರು.

ಸ್ವೀಟ್ ದರ:ಒಂದು ದಿನದ ಸ್ವೀಟ್‌ನಲ್ಲಿ (ವಿಶಾಲವಾದ ಐಷಾರಾಮಿ ಕೊಠಡಿ) ಒಬ್ಬರು ಇಲ್ಲಿ ಉಳಿದುಕೊಳ್ಳಲು ತೆರಿಗೆ ಬಿಟ್ಟು ಸುಮಾರು ₹23 ಸಾವಿರ ತಗಲುತ್ತದೆ. ಇನ್ನು ಊಟ ಇತ್ಯಾದಿ ಖರ್ಚುಗಳು ಸೇರಿ ಏನಿಲ್ಲವೆಂದರೂ ಮತ್ತೆ ₹5 ಸಾವಿರ ಆಗುತ್ತದೆ. ದಿನಕ್ಕೆ ₹30 ಸಾವಿರ ಎಂದರೆ, 10 ಮಂದಿ ಶಾಸಕರಿಗೆ ಸರಿಸುಮಾರು ₹3 ಲಕ್ಷ ಖರ್ಚಾಗುತ್ತದೆ.

ಈಜುಕೊಳ, ಬಾರ್‌, ಸ್ಪಾ ಸೌಲಭ್ಯಗಳೂ ಇದ್ದು, ಇದಕ್ಕೆಲ್ಲಾ ಹೆಚ್ಚುವರಿ ಹಣ ತೆರಬೇಕು.

ಸೋಫಿಟೆಲ್‌ ಹೋಟೆಲ್‌:
* ಮುಂಬೈನ ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಹೋಟೆಲ್ ಇದೆ. ಈ ಐಷಾರಾಮಿ ಹೋಟೆಲ್‌ನಲ್ಲಿ 300ಕ್ಕೂ ಹೆಚ್ಚು ಕೊಠಡಿಗಳಿವೆ. ಈ ಹೋಟೆಲ್‌ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ.
* ಈ ಹಿಂದೆಯೂ ರಾಜಕೀಯದ ಹಲವು ಚಟುವಟಿಕೆಗಳಿಗೆ ಹೋಟೆಲ್‌ ಕೇಂದ್ರವಾಗಿತ್ತು.
* ಲೋಕಸಭಾ ಚುನಾವಣೆಗೆ ಮೊದಲು ಶಿವಸೇನಾದ ಜತೆಗೆ ಮೈತ್ರಿ ಮಾತುಕತೆಗೆ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಈ ಹೋಟೆಲ್‌ನಲ್ಲಿಯೇ ಇದ್ದರು.
*2014ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ–ಶಿವಸೇನಾ ನಡುವಣ ಮೈತ್ರಿಯು ಈ ಹೋಟೆಲ್‌ನಲ್ಲಿ ನಡೆದ ಮಾತುಕತೆಯಲ್ಲಿಯೇ ಮುರಿದು ಬಿದ್ದಿತ್ತು.

ಶಾಸಕರ ವಾಸ್ತವ್ಯ: ಮುಂಬೈ ಬಿಜೆಪಿಗೆ ಗೊತ್ತೇ ಇಲ್ಲ!
ಮುಂಬೈ: ಕರ್ನಾಟಕದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ರಾಜೀನಾಮೆ ನೀಡಿರುವ ಹತ್ತು ಶಾಸಕರು ಮುಂಬೈನ ಹೋಟೆಲ್‌ನಲ್ಲಿ ಇರುವ ಬಗ್ಗೆ ಮಾಹಿತಿ ಇಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಹೇಳಿದೆ. ಆದರೆ, ಮಹಾರಾಷ್ಟ್ರದ ಬಿಜೆಪಿ ಮುಖಂಡರೊಬ್ಬರು ಈ ಹೋಟೆಲ್‌ಗೆ ಭೇಟಿ ನೀಡಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಮುಂಬೈಗೆ ಬಂದಿರುವ ಬೆಳವಣಿಗೆಯಲ್ಲಿ ಬಿಜೆಪಿಯ ಪಾತ್ರ ಏನೂ ಇಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ ಹೇಳಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ಶಾಸಕ ಪ್ರಸಾದ್‌ ಲಾಡ್‌ ಅವರು ಕಾಂಗ್ರೆಸ್‌–ಜೆಡಿಎಸ್‌ ಶಾಸಕರು ತಂಗಿರುವ ಹೋಟೆಲ್‌ನಲ್ಲಿ ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದರು.

‘ಶಾಸಕರು ಬಂದಿದ್ದಾರೆ ಎಂಬುದು ಮಾಧ್ಯಮ ವರದಿಯಿಂದ ತಿಳಿಯಿತು. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಕೊಂಡಿರುವುದರಿಂದ ಬೇರೆ ವಿಚಾರಗಳು ಗೊತ್ತಿಲ್ಲ’ ಎಂದು ಲಾಡ್‌ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಲಾಡ್‌ ಅವರು ಆಪ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT