ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಡೋಂಗಿ ವ್ಯಕ್ತಿ: ಸುದರ್ಶನ

ಸಾಲಮನ್ನಾಕ್ಕೆ ರಾಷ್ಟ್ರೀಯ ನೀತಿ ರೂಪಿಸುವಲ್ಲಿ ಬಿಜೆಪಿ ವಿಫಲ: ಆರೋಪ
Last Updated 19 ಏಪ್ರಿಲ್ 2019, 13:27 IST
ಅಕ್ಷರ ಗಾತ್ರ

ಬೀದರ್: ‘ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸಾಲಮನ್ನಾಕ್ಕೆ ರಾಷ್ಟ್ರೀಯ ನೀತಿ ರೂಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮೋದಿ ಒಬ್ಬ ಡೋಂಗಿ ವ್ಯಕ್ತಿ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ ಆರೋಪಿಸಿದರು.

‘ಒಂದು ರಾಜ್ಯದ ರೈತರ ಸಾಲಮನ್ನಾ ಆದಾಗ ಮತ್ತೊಂದು ರಾಜ್ಯದವರಿಗೆ ನಿರಾಸೆಯಾಗುತ್ತದೆ. ಹಾಗಾಗಿ ಕೇಂದ್ರವೇ ಈ ವಿಷಯದಲ್ಲಿ ಸರಿಯಾದ ನಿಲುವು ತಳೆದಿದ್ದರೆ ರಾಷ್ಟ್ರದ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ, ರೈತರ ಆದಾಯ ದ್ವಿಗುಣಗೊಳಿಸುವ ಪ್ರಯತ್ನ ಮಾಡಲಿಲ್ಲ. ಕೃಷಿ ಹಾಗೂ ಬಡತನ ಮೋದಿ ಸರ್ಕಾರಕ್ಕೆ ಅಲರ್ಜಿಯಾಗಿದೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಟೀಕಿಸಿದರು.

‘ಬಸವಣ್ಣನನ್ನು ಸ್ಮರಿಸಿ ಅವರ ತತ್ವಗಳನ್ನು ಆಚರಣೆಗೆ ತಂದಿದ್ದೇನೆ ಎಂದು ರಾಯಚೂರು ಹಾಗೂ ಚಿಕ್ಕೋಡಿಯಲ್ಲಿ ಹೇಳಿಕೆ ನೀಡಿರುವ ನರೇಂದ್ರ ಮೋದಿ ಆಚಾರ, ವಿಚಾರಗಳು ಇಂದಿಗೂ ಹತ್ತಿರವಾಗಿಲ್ಲ. 2014ರಲ್ಲಿ ವಿಶ್ವಾಸಾರ್ಹತೆ ಗಳಿಸಿದರೂ ಇದೀಗ ಅದು ಕುಸಿಯುತ್ತಿದೆ’ ಎಂದು ಹೇಳಿದರು.

‘ಮನಮೋಹನ್‌ ಸಿಂಗ್‌ ಸರ್ಕಾರದ ಅವಧಿಯಲ್ಲಿ ಕೃಷಿ ಜಿಡಿಪಿ 5.2 ಇತ್ತು. ಮೋದಿ ಸರ್ಕಾರದ ಅವಧಿಯಲ್ಲಿ ಕೃಷಿ ಜಿಡಿಪಿ 2.5 ಗೆ ಇಳಿದಿದೆ. ಪ್ರಸ್ತುತ ರೈತರು ಸಂಕಷ್ಟದಲ್ಲಿ ಇದ್ದಾರೆ. ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಮೋದಿ ರಕ್ಷಣಾ ವ್ಯವಸ್ಥೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘2008ರಿಂದ 2013ರ ವರೆಗೆ ಎಂಟು ಬಾರಿ ಸರ್ಜಿಕಲ್‌ ದಾಳಿ ನಡೆದಿವೆ. ಆದರೆ, ಮನಮೋಹನ್‌ ಸಿಂಗ್‌ ಸರ್ಕಾರವು ಭದ್ರತೆ ದೃಷ್ಟಿಯಿಂದ ಬಹಿರಂಗ ಪಡಿಸಲಿಲ್ಲ. ಆದರೆ, ಮೋದಿ ಸರ್ಕಾರ ತನ್ನ ಅವಧಿಯಲ್ಲಿ ನಡೆದ ಸರ್ಜಿಕಲ್‌ ದಾಳಿಯನ್ನು ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಿದೆ’ ಎಂದು ಟೀಕಿಸಿದರು.

‘ಬಿಜೆಪಿ ಸರ್ಕಾರದಲ್ಲಿ ಆರ್ಥಿಕ ಚಿಂತಕರು ಹಾಗೂ ಮಾರ್ಗದರ್ಶಕರು ಇರಲಿಲ್ಲ. ಹೀಗಾಗಿ ನೋಟುಗಳ ಅಪಮೌಲ್ಯೀಕರಣ ನಡೆಯಿತು. ಇದರಿಂದ ಜನಸಾಮಾನ್ಯರು ಪರದಾಡುವಂತಾಯಿತು. ಅಷ್ಟೇ ಅಲ್ಲ ಜಿಎಸ್‌ಟಿ ಇಂದಿಗೂ ಗೊಂದಲಗಳಿಂದ ಕೂಡಿದೆ’ ಎಂದರು.

‘ಬಿಜೆಪಿ 27 ವರ್ಷಗಳಿಂದ ರಾಮ ಮಂದಿರ ವಿವಾದವನ್ನು ಜೀವಂತವಾಗಿಟ್ಟಿದೆ. ಮಂದಿರ ಕಟ್ಟಲು ಯಾರೂ ವಿರೋಧ ಮಾಡಿಲ್ಲ. ಯಾಕೆ ಮಂದಿರ ಕಟ್ಟುತ್ತಿಲ್ಲ. ವಿವಾದಾತ್ಮಕ ಸಮಸ್ಯೆಗಳು ಇತ್ಯರ್ಥಗೊಂಡರೆ ಬಿಜೆಪಿಯವರ ಡಬ್ಬಾ ಖಾಲಿಯಾಗಲಿದೆ ಎನ್ನುವ ಆತಂಕ ಅವರಿಗಿದೆ’ ಎಂದು ಗೇಲಿ ಮಾಡಿದರು.

‘ಯುಪಿಎ ಸರ್ಕಾರ ‘ಆಧಾರ್‌’ ಶುರು ಮಾಡಿದಾಗ ಹಂಗಿಸಿದ್ದ ಬಿಜೆಪಿ ಇಂದು ಅದನ್ನು ಪ್ರತಿಯೊಂದಕ್ಕೂ ಬಳಸಿಕೊಳ್ಳುತ್ತಿದೆ. ಮೋದಿ ಅವರಿಗೆ ಮಹಿಳಾ ಮೀಸಲಾತಿ ಹಾಗೂ ಲೋಕಪಾಲ ಜಾರಿಗೊಳಿಸುವ ಇಚ್ಛೆ ಇಲ್ಲ’ ಎಂದು ಆರೋಪಿಸಿದರು.

‘ಮೋದಿ ಅವರು ಒಮ್ಮೆಯೂ ಸಂಸತ್ತಿನಲ್ಲಿ ಸಮರ್ಪಕವಾದ ಉತ್ತರ ನೀಡಿಲ್ಲ. ಒಂದೇ ಒಂದು ಮಾಧ್ಯಮಗೋಷ್ಠಿ ನಡೆಸಿಲ್ಲ. ಗುಜರಾತಿನ ಅಧಿಕಾರಿಗಳನ್ನು ಕೇಂದ್ರಕ್ಕೆ ಕರೆಸಿಕೊಂಡು ದೇಶದ ಬೇರೆ ರಾಜ್ಯಗಳ ಐಎಎಸ್‌ ಶ್ರೇಣಿಯ ಅಧಿಕಾರಿಗಳು ಕೀಳರಿಮೆ ತಾಳುವಂತೆ ಮಾಡಿದ್ದಾರೆ. ಯುಪಿಎ ಸರ್ಕಾರದ 23 ಕಾರ್ಯಕ್ರಮಗಳ ಹೆಸರು ಬದಲಾಯಿಸಿದರೂ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT