ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಸಿಂಚನ: ರಾಜ್ಯಕ್ಕೆ ಮುಂಗಾರು ಪ್ರವೇಶ

8ರ ಬಳಿಕ ಭಾರಿ ಮಳೆ ಸಾಧ್ಯತೆ
Last Updated 4 ಜೂನ್ 2020, 20:47 IST
ಅಕ್ಷರ ಗಾತ್ರ

ಮಂಗಳೂರು: ನಿರೀಕ್ಷೆಯಂತೆ ನೈರುತ್ಯ ಮುಂಗಾರು ಗುರುವಾರ ಮಧ್ಯಾಹ್ನ ಕರಾವಳಿ ಮೂಲಕ ರಾಜ್ಯ ಪ್ರವೇಶಿಸಿದೆ.

ವಾಡಿಕೆಯಂತೆ ಜೂನ್‌ 1ರಂದು ಕೇರಳ ಪ್ರವೇಶಿಸಿದ್ದ ನೈರುತ್ಯ ಮುಂಗಾರು ರಾಜ್ಯಕ್ಕೂ ಕಾಲಿಟ್ಟಿದ್ದು, ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಗಾಲದ ಚಿತ್ರಣ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಮೋಡ ಕವಿದಿದ್ದು, 2.83 ಸೆಂ.ಮೀ. ಮಳೆಯಾಗಿದೆ. ಘಟ್ಟದ ತಪ್ಪಲಿನ ಸುಳ್ಯ ತಾಲ್ಲೂಕಿನಲ್ಲಿ 4.5 ಸೆಂ.ಮೀ. ಮಳೆಯಾಗಿದೆ.

ಗಾಳಿಗೆ ಅಲ್ಲಲ್ಲಿ ಮರದ ರೆಂಬೆ–ಕೊಂಬೆಗಳು ಬಿದ್ದಿವೆ. ಸಮುದ್ರದ ಅಬ್ಬರ ಹೆಚ್ಚಿದೆ. ಉಳಿದಂತೆ ಭಾರಿ ಹಾನಿ ವರದಿಯಾಗಿಲ್ಲ.

‘ಮುಂಗಾರು ರಾಜ್ಯ ಪ್ರವೇಶಿಸಿದರೂ ಮುಂದಿನ ನಾಲ್ಕೈದು ದಿನ ಭಾರಿ ಮಳೆಯ ಸಾಧ್ಯತೆಗಳಿಲ್ಲ. ಆದರೆ, ಇದೇ 8ರ ಬಳಿಕ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಭಾರಿ ಮಳೆ ಸುರಿಯಬಹುದು’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ನಿಸರ್ಗ ಚಂಡಮಾರುತವು ಬುಧವಾರವೇ ಉತ್ತರ ದಿಕ್ಕಿಗೆ ಚಲಿಸಿದ್ದು, ಕರಾವಳಿಯಲ್ಲಿ ಕ್ಷೀಣಿಸಿದೆ. ಆದರೆ, ಮುಂಗಾರಿನ ಪರಿಣಾಮ ಅರಬ್ಬೀ ಸಮುದ್ರದಲ್ಲಿ ಉಬ್ಬರ–ಇಳಿತ ಹೆಚ್ಚಿದೆ. ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಡೀ ದಿನ ಚಳಿಯ ವಾತಾವರಣ ಇತ್ತು. ಬೆಳಿಗ್ಗೆಯಿಂದಲೂ ಆಗಾಗ್ಗೆ ಮಳೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಗಿರಿ ಶ್ರೇಣಿ, ಚಿಕ್ಕಮಗಳೂರು, ಶೃಂಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಎರಡು ದಿನಗಳಿಂದ ಅಬ್ಬರಿಸಿದ್ದ ಮಳೆಯು, ಗುರುವಾರ ಕ್ಷೀಣಿಸಿತ್ತು. ಬೆಳಿಗ್ಗೆ ಹದ ಮಳೆಯಾಗಿದ್ದು, ಮಧ್ಯಾಹ್ನದ ನಂತರ ಬಿಸಿಲು ಕಾಣಿಸಿಕೊಂಡಿತು.ಶಿರಸಿ, ಸಿದ್ದಾಪುರ, ಯಲ್ಲಾಪುರ ಸುತ್ತಮುತ್ತ ಬೆಳಿಗ್ಗೆ ಜೋರಾಗಿ ಮಳೆ ಸುರಿಯಿತು. ಸಂಜೆಯವರೆಗೂ ಆಗಾಗ ಜಿಟಿಜಿಟಿ ಹನಿಯುತ್ತಿತ್ತು.

ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT