ಆಲಮಟ್ಟಿ, ತುಂಗಭದ್ರಾ ಒಳಹರಿವು ಹೆಚ್ಚಳ

ಭಾನುವಾರ, ಜೂಲೈ 21, 2019
25 °C
ಕರಾವಳಿ, ಮಲೆನಾಡಿನಲ್ಲಿ ಮುಂಗಾರು ದುರ್ಬಲ l ‌19ರಿಂದ ಕೊಡಗಿನಲ್ಲಿ ಭಾರಿ ಮಳೆ ಸಂಭವ

ಆಲಮಟ್ಟಿ, ತುಂಗಭದ್ರಾ ಒಳಹರಿವು ಹೆಚ್ಚಳ

Published:
Updated:
Prajavani

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ದುರ್ಬಲವಾಗಿದೆ. ಆದರೆ ಎರಡು–ಮೂರು ದಿನಗಳ ಹಿಂದೆ ಸುರಿದ ಪರಿಣಾಮ ಕೆಲವು ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ಹಾಗೂ ಉಪನದಿಗಳ ಮೂಲಕ ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವು ಒಂದು ಲಕ್ಷ ಕ್ಯುಸೆಕ್‌ ದಾಟಿದೆ. ಆಲಮಟ್ಟಿ ಜಲಾಶಯಕ್ಕೆ 1.06 ಲಕ್ಷ ಕ್ಯುಸೆಕ್‌ ಹಾಗೂ ತುಂಗಭದ್ರಾ ಜಲಾಶಯಕ್ಕೆ 20 ಸಾವಿರ ಕ್ಯುಸೆಕ್‌ ಒಳಹರಿವು ಇತ್ತು. ಕಾರವಾರ, ಅಂಕೋಲಾ, ಗೋಕರ್ಣದಲ್ಲಿ ಬೆಳಿಗ್ಗೆಯಿಂದಲೇ ಮಳೆಯಾಯಿತು. ಭಟ್ಕಳ, ಶಿರಸಿ, ಮುಂಡಗೋಡ, ಯಲ್ಲಾಪುರ, ಹಳಿಯಾಳ, ಜೊಯಿಡಾದಲ್ಲಿ ಆಗಾಗ ಸಾಧಾರಣ ಮಳೆ ಸುರಿಯಿತು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಿಂಡಲಗಿ, ಚಿಕ್ಕಮುನವಳ್ಳಿ, ಇಟಗಿ, ಜೈನಕೊಪ್ಪ, ಲಕ್ಕಬೈಲ, ಬಲೋಗಾ ಹಾಗೂ ಹಿತ್ತಲಹೊಂಡದಲ್ಲಿ ತಲಾ ಒಂದೊಂದು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕೊಡಗು ಜಿಲ್ಲೆಯಲ್ಲಿಯೂ ಮಳೆ ಕಡಿಮೆಯಾಗಿದ್ದು, ಮಡಿಕೇರಿ ನಗರವೂ ಸೇರಿದಂತೆ ಸುತ್ತಮುತ್ತ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಉತ್ತಮ ಮಳೆಯಾಗಿದೆ. ಕಳೆದ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕು ಪಡೆಯುವ ಲಕ್ಷಣ ಕಾಣಿಸುತ್ತಿದೆ. ಇದೇ 19ರಿಂದ ಕೊಡಗಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುನ್ನೆಚ್ಚರಿಕೆ ನೀಡಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಅರಕೆರೆ ಗ್ರಾಮದ ಸುತ್ತ ಶುಕ್ರವಾರ ಸಂಜೆ 45 ನಿಮಿಷಕ್ಕೂ ಹೆಚ್ಚು ಕಾಲ ರಭಸದ ಮಳೆ ಸುರಿಯಿತು.

ಕ್ಷೀಣಿಸಿದ ಮಳೆ: ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆ ಕ್ಷೀಣಿಸಿದೆ. ಶಿವಮೊಗ್ಗ ನಗರ ಹಾಗೂ ತೀರ್ಥಹಳ್ಳಿಯಲ್ಲಿ ತುಂತುರು ಮಳೆಯಾಗಿದೆ. ಸಾಗರ, ಶಿಕಾರಿಪುರ, ಸೊರಬ, ಭದ್ರಾವತಿ, ಹೊಸನಗರದಲ್ಲಿ ಸಾಧಾರಣ ಮಳೆಯಾಗಿದೆ.

ಕಲಬುರ್ಗಿ ನಗರದಲ್ಲಿ ಶುಕ್ರವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆಯಾಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು.

ಕೆಆರ್‌ಎಸ್‌: ವಾರದಲ್ಲಿ 8.40 ಅಡಿ ನೀರು
ಶ್ರೀರಂಗಪಟ್ಟಣ: ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಕಾರಣ ಕಳೆದೊಂದು ವಾರದಿಂದ ಕೆಆರ್‌ಎಸ್‌ ಜಲಾಶಯಕ್ಕೆ 8.40 ಅಡಿ ನೀರು ಹರಿದು ಬಂದಿದೆ. ಶುಕ್ರವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 88.80 ಅಡಿಗೆ ತಲುಪಿದೆ.

ಜುಲೈ 5ರಂದು ಜಲಾಶಯದ ನೀರಿನ ಮಟ್ಟ 80.40 ಅಡಿ ಇತ್ತು. ಕೊಡಗಿನಲ್ಲಿ ಮಳೆ ಆರಂಭವಾದ ನಂತರ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಯಿತು. ಶುಕ್ರವಾರ ಒಳಹರಿವು 7,675 ಕ್ಯುಸೆಕ್‌, ಹೊರಹರಿವು 394 ಕ್ಯುಸೆಕ್‌ ಇತ್ತು.

ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 119.10 ಅಡಿ ಇದ್ದರೆ, ಒಳಹರಿವು 41,583 ಕ್ಯುಸೆಕ್‌, ಹೊರಹರಿವು 3,768 ಕ್ಯುಸೆಕ್‌ ಇತ್ತು.


ಚಿಕ್ಕೋಡಿ ತಾಲ್ಲೂಕಿನ ಜನವಾಡ ಮತ್ತು ಶಮನೇವಾಡಿಯ ಹಜರತ್ ಚಾಂದ್‌ಪೀರ್‌ ದರ್ಗಾ ಮೂಲಕ ಚಿಕ್ಕೋಡಿ–ಇಚಲಕರಂಜಿ ಮುಖ್ಯ ರಸ್ತೆಗೆ ಸಂಪರ್ಕ ಸೇತುವೆಯೂ ದೂಧ್‌ಗಂಗಾ ನದಿ ನೀರಿನಿಂದ ಜಲಾವೃತಗೊಂಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !