ಸೋಮವಾರ, ನವೆಂಬರ್ 18, 2019
25 °C
ದೋಷಾರೋಪ ಹೊರಿಸಿದ ಜನಪ್ರತಿನಿಧಿಗಳ ಕೋರ್ಟ್‌

ಸಂಸದ ಅನಂತ ಕುಮಾರ್ ಹೆಗಡೆ ಅರ್ಜಿ ವಜಾ

Published:
Updated:
Prajavani

ಬೆಂಗಳೂರು: ‘ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತೆ ಭಾಷಣ ಮಾಡಿದ ಆರೋಪದಿಂದ ನನ್ನನ್ನು ಕೈಬಿಡಬೇಕು’ ಎಂದು ಕೋರಿ ಸಂಸದ ಅನಂತ ಕುಮಾರ ಹೆಗಡೆ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ಕೋರ್ಟ್‌ ವಜಾಗೊಳಿಸಿದೆ.

ಈ ಕುರಿತ ಅರ್ಜಿಯನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ ಶುಕ್ರವಾರ ವಿಚಾರಣೆ ನಡೆಸಿ, ಆರೋಪಿ ಅನಂತ ಕುಮಾರ್ ವಿರುದ್ಧ ದೋಷಾರೋಪ ಹೊರಿಸಿದರು. ಪ್ರಕರಣದ ಸಾಕ್ಷಿಗಳಿಗೆ ಸಮನ್ಸ್‌ ಜಾರಿಗೊಳಿಸಲಾಗಿದ್ದು ಡಿಸೆಂಬರ್ 16ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಪ್ರಕರಣವೇನು?: ‘2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಅನಂತ ಕುಮಾರ್ ಅವರು ಶಿರಸಿಯ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದ ವೇಳೆ ಪ್ರಚೋದನಕಾರಿ ಅಂಶಗಳನ್ನು ಪ್ರಸ್ತಾಪಿಸಿದ್ದರು’ ಎಂದು ಆರೋಪಿಸಿದ ಪ್ರಕರಣ ಇದಾಗಿದೆ.

ಈ ಕುರಿತಂತೆ ಚುನಾವಣಾ ಅಧಿಕಾರಿಗಳು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)