ಒಬ್ಬನಿಗೆ ಗಲ್ಲು, ಇನ್ನಿಬ್ಬರಿಗೆ ಸಾಯುವವರೆಗೂ ಜೈಲು ಶಿಕ್ಷೆ

ಜಮಖಂಡಿ: ಚಾಲಕನನ್ನು ಕೊಲೆ ಮಾಡಿ ಕಾರು ಅಪಹರಿಸಿದ್ದ ಮೂವರ ಪೈಕಿ ಒಬ್ಬನಿಗೆ ಗಲ್ಲು ಶಿಕ್ಷೆ ಹಾಗೂ ಇನ್ನಿಬ್ಬರಿಗೆ ಜೀವ ಇರುವವರೆಗೂ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ. ಮೂವರಿಗೂ ತಲಾ ₹2 ಲಕ್ಷ ದಂಡ ವಿಧಿಸಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಂದಗಿ ಗ್ರಾಮದ ಶರಣಬಸವ ದೇಗಿನಾಳಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅದೇ ಗ್ರಾಮದ ರೇಬಣ್ಣ ಬೀರಪ್ಪ ಸೀತಿಮನಿ, ಅಯಾಳಸಿದ್ದ ಶಂಕ್ರೆಪ್ಪ ದೊಡಮನಿ ಜೀವಾವಧಿ ಶಿಕ್ಷೆಗೆ ಗುರಿಯಾದವರು.
ಕಾರು ಅಪಹರಿಸಿ ಮಾರಾಟ ಮಾಡುವ ಉದ್ದೇಶದಿಂದ ಬಾಡಿಗೆ ನೆಪದಲ್ಲಿ ಜಮಖಂಡಿ ನಗರದ ಅವಟಿ ಗಲ್ಲಿಯ ರಾಘವೇಂದ್ರ ಚನ್ನಪ್ಪ ಸಂಗೊಳ್ಳಿ (29) ಎಂಬುವರನ್ನು 2012ರ ಆಗಸ್ಟ್ 13ರಂದು ಮೂವರೂ ಕರೆದೊಯ್ದಿದ್ದರು. ರಾತ್ರಿ ರಾಘವೇಂದ್ರ ತೊಟ್ಟಿದ್ದ ಬಟ್ಟೆಯಿಂದಲೇ ಕೈಕಾಲು ಕಟ್ಟಿ ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೋಲ್ಹಾರ ಸೇತುವೆಯ ಮೇಲಿನಿಂದ ಕೃಷ್ಣಾ ನದಿಗೆ ಎಸೆದು ಕೊಲೆ ಮಾಡಿದ್ದರು.
ಮತ್ತೊಂದು ಪ್ರಕರಣದಲ್ಲಿ ಹೊಸಪೇಟೆಯಿಂದ ರಮೇಶ ಎಂಬುವವರನ್ನು ನಂಬಿಸಿ ಟವೆರಾ ಕಾರನ್ನು ಬಾಡಿಗೆಗೆ ಪಡೆದಿದ್ದರು. ಅವರನ್ನು ಆಲಮಟ್ಟಿ ಸೇತುವೆಯ ಮೇಲಿಂದ ನದಿಗೆ ಎಸೆದು ಆತನನ್ನು ಸಹ ಕೊಲೆ ಮಾಡಿದ್ದರು ಎನ್ನಲಾಗಿದೆ. ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶೆ ಎ.ಕೆ. ನವೀನ ಕುಮಾರಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕ ವಿ.ಜಿ. ಹೆಬಸೂರ ಸರ್ಕಾರದ ಪರವಾಗಿ ವಕಾಲತ್ತುವಹಿಸಿದ್ದರು. ರಮೇಶ ಕೊಲೆ ಪ್ರಕರಣದಲ್ಲಿ ಹೊಸಪೇಟೆ ನ್ಯಾಯಾಲಯದಲ್ಲಿ ಮೂವರ ವಿರುದ್ಧ ವಿಚಾರಣೆ ಮುಂದುವರೆದಿದೆ.
ಬರಹ ಇಷ್ಟವಾಯಿತೆ?
3
0
0
0
0
0 comments
View All