ವಿಚಾರವಾದಿಗಳ ಹತ್ಯೆಯಲ್ಲಿ ಮುರಳಿ ಕೈವಾಡ!
ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ನಡೆದ ನಾಲ್ವರು ವಿಚಾರವಾದಿಗಳ ಹತ್ಯೆಯಲ್ಲೂ ನಿಹಾಲ್ ಅಲಿಯಾಸ್ ದಾದಾನಷ್ಟೇ ಪ್ರಮುಖ ಪಾತ್ರ ನಿರ್ವಹಿಸಿರುವವನು ಮುರಳಿ ಅಲಿಯಾಸ್ ಶಿವ!
ಪ್ರಕರಣದಲ್ಲಿ ಮುರಳಿಯ ಹೆಸರು ಬಹಿರಂಗಪಡಿಸಿರುವ ಮಹಾರಾಷ್ಟ್ರ ಎಸ್ಐಟಿ, ‘ಮುರಳಿ, ನಿಹಾಲ್ಗಿಂತಲೂ ಕುಖ್ಯಾತಿ ಹೊಂದಿದವನು ಎಂಬ ಮಾಹಿತಿ ಲಭ್ಯವಾಗಿದೆ. ಈತನನ್ನು ಬಂಧಿಸದೆ ಹೋದರೆ, ಜಾಲ ಮತ್ತೆ ಬೆಳೆಯುವುದಲ್ಲಿ ಅನುಮಾನವಿಲ್ಲ’ ಎಂದು ಹೇಳಿದೆ.
ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕರ್ನಾಟಕ ಎಸ್ಐಟಿ ಅಧಿಕಾರಿಯೊಬ್ಬರು, ‘ನಿಹಾಲ್ ಹಾಗೂ ಮುರಳಿ ಎಂಬುದು ಅವರ ಮೂಲ ಹೆಸರುಗಳಲ್ಲ. ಈಗ ನಮ್ಮ ವಶದಲ್ಲಿರುವವರ ಪೈಕಿ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್ಗೆ ಹೊರತುಪಡಿಸಿ ಇನ್ಯಾರಿಗೂ ಅವರ ಬಗ್ಗೆ ಏನೂ ಗೊತ್ತಿಲ್ಲ. ಆದರೆ, ಕಿಂಗ್ಪಿನ್ಗಳ ಬಗ್ಗೆ ಇವರಿಬ್ಬರೂ ಏನೂ ಹೇಳುತ್ತಿಲ್ಲ. ಮುರಳಿ ಮಹಾರಾಷ್ಟ್ರದವನಾಗಿದ್ದು, ಆತನ ಪೂರ್ವಾಪರದ ಬಗ್ಗೆ ನಾವೂ ಮಾಹಿತಿ ಸಂಗ್ರಹಿಸುತಿದ್ದೇವೆ’ ಎಂದರು.
ಮೆಕ್ಯಾನಿಕ್ ಬಂಧನ: ‘ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ವಾಸುದೇವ್ ಸೂರ್ಯವಂಶಿ ಅಲಿಯಾಸ್ ಮೆಕ್ಯಾನಿಕ್ ಎಂಬಾತನ ಬಂಧನವಾಗಿದೆ. ಆತ ಕುಖ್ಯಾತ ಬೈಕ್ ಕಳ್ಳ. ಅಮೋಲ್ ಕಾಳೆಯ ಡೈರಿಯಲ್ಲೂ ‘ಮೆಕ್ಯಾನಿಕ್’ ಎಂಬ ಕೋಡ್ವರ್ಡ್ ಇದೆ. ಹೀಗಾಗಿ, ನಾವೂ ವಾಸುದೇವ್ನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ಮಾಹಿತಿ ನೀಡಿದರು.
‘ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಬೈಕ್ ಶರದ್ ಕಳಾಸ್ಕರ್ ಬಳಿ ಜಪ್ತಿಯಾಗಿದೆ. ಆದರೆ, ಅದು ಆತನ ಹೆಸರಿನಲ್ಲಿಲ್ಲ. ವಾಸುದೇವ್ನೇ ಆ ಬೈಕ್ ಕದ್ದು ಶರದ್ಗೆ ಕೊಟ್ಟಿರುವ ಅನುಮಾನವಿದೆ’ಎಂದು ಹೇಳಿದರು. ಸಿ.ಸಿ ಟಿ.ವಿ ನೋಡಿ ಸುಮ್ಮನಾದ: ಗೌರಿ ಹತ್ಯೆ ನಡೆಯುವುದಕ್ಕೂ (2017 ಸೆ.5) ಮೂರು ತಾಸುಗಳ ಮುಂಚೆ ಅವರ ಮನೆ ಹತ್ತಿರ ಓಡಾಡಿದ್ದ ಸುಧನ್ವ ಗೊಂಧಾಳೇಕರ್, ‘ಆ ದಿನ ನಾನು ಬೆಂಗಳೂರಿಗೆ ಬಂದೇ ಇರಲಿಲ್ಲ’ ಎಂದು ವಾದಿಸುತ್ತಿದ್ದಾನೆ. ಆದರೆ, ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಆತನ ಚಹರೆ ತೋರಿಸಿದಾಗ ಸುಮ್ಮನೆ ಕೂರುತ್ತಾನೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.