ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಪದವಿ ಪಡೆದವರಿಗೆ ಹಾಡಲು ಬಾರದು: ರಾಜೀವ ತಾರಾನಾಥ

ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ವಿಷಾದ
Last Updated 1 ಸೆಪ್ಟೆಂಬರ್ 2018, 9:20 IST
ಅಕ್ಷರ ಗಾತ್ರ

ಮೈಸೂರು: ‘ಸಂಗೀತದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆಲ್ಲಾ ಒಂದು ಸಾಲು ಹಾಡಲು ಬರುವುದಿಲ್ಲ’ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ರಾಜೀವ ತಾರಾನಾಥ ವಿಷಾದ ವ್ಯಕ್ತಪಡಿಸಿದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎನ್‌ಸಿಇಆರ್‌ಟಿ 58ನೇ ಸಂಸ್ಥಾಪನಾ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಣದಲ್ಲಿ ಲಲಿತಕಲೆಗಳ ಅಳವಡಿಕೆ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಗೀತವನ್ನು ಗುರುವಿನಿಂದಲೇ ಕಲಿಯಬೇಕು. ಪಠ್ಯವನ್ನು ಅಧ್ಯಯನ ಮಾಡಿ ಸಂಗೀತ ಕಲಿಯಲಾಗದು. ಗುರುವು ಹಾಡುವುದನ್ನು ಅಥವಾ ವಾದ್ಯ ನುಡಿಸುವುದನ್ನು ಆಲಿಸಿ ವಿದ್ಯಾರ್ಥಿಯು ಕಲಿತುಕೊಳ್ಳಬೇಕು. ಇದು ಸಂಗೀತ ಕಲಿಯುವ ವಿಧಾನ. ಆದರೆ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪಠ್ಯಾಧಾರಿತವಾಗಿ ಸಂಗೀತ ಕಲಿಸುತ್ತಿರುವುದರಿಂದ ಸಂಗೀತ ಕಲಿಕೆ ಕೇವಲ ಪ್ರಮಾಣಪತ್ರಕ್ಕೆ ಮಾತ್ರ ಸೀಮಿತಗೊಳ್ಳುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಂಗೀತದಲ್ಲಿ ಪದವಿ, ಪಿಎಚ್‌.ಡಿ ಪಡೆದಿರುವವರ ಅಡ್ಡ ಹೆಸರು ‘ಅಪಸ್ವರ’. ವಿಶ್ವವಿದ್ಯಾಲಯಗಳಿಂದ ಒಬ್ಬರಾದರೂ ಶ್ರೇಷ್ಠ ಗಾಯಕರು, ವಾದಕರು ಹೊರಬಂದಿರುವುದನ್ನು ನಾನು ಕಂಡಿಲ್ಲ. ತಾಳ, ಸ್ವರ ಪಕ್ವವಾಗಿ ಕಛೇರಿ ನೀಡುವ ಸಂಗೀತಗಾರರ ನಿರೀಕ್ಷೆಯಲ್ಲಿ ನಾನಿದ್ದೇನೆ’ ಎಂದರು.

ಹೆಚ್ಚಿನ ಟೇಬಲ್‌ ಕೆಳಗಿನ ವ್ಯವಹಾರ:‘ವಿಶ್ವವಿದ್ಯಾಲಯಗಳಲ್ಲಿ ಟೇಬಲ್‌ ಕೆಳಗಿನ ವ್ಯವಹಾರ ಹೆಚ್ಚಿದೆ. ಪದವಿ ಬೇಕೆಂದರೆ ಸಂಜೆ ಮನೆಗೆ ಬಾ ಎಂದು ಹೇಳುವ ಶಿಕ್ಷಕರು ಹೆಚ್ಚಾಗಿದ್ದಾರೆ. ಪ್ರಮಾಣಪತ್ರಗಳು ಹಾಡುವುದಿಲ್ಲ, ಕಾರಣ ನಮ್ಮ ಗಂಟಲಿಗೆ ಲಂಚ ಕೊಟ್ಟರೆ ಅದು ಹಾಡುವುದಿಲ್ಲ. ನಮ್ಮ ಪ್ರಾಮಾಣಿಕತೆಯನ್ನು ಪರೀಕ್ಷೆ ಮಾಡುವ ಸಾಧನ ಸಂಗೀತ. ಸಂಗೀತಕ್ಕೆ ಮೋಸ ಮಾಡಿ ಸಾಧಿಸುವುದು ಅಸಾಧ್ಯದ ವಿಚಾರ’ ಎಂದು ಹೇಳಿದರು.

‘ನಮಗೆ ಕಷ್ಟದ ದುಡಿಮೆ ಇಷ್ಟವಿಲ್ಲ. ನಮ್ಮೆಲ್ಲರಿಗೂ ಅತಿ ಕಡಿಮೆ ಪ್ರಾಮಾಣಿಕತೆ ಹಾಗೂ ಪರಿಪೂರ್ಣತೆಯಿದೆ. ಆದರೆ, ಇದನ್ನೊಪ್ಪಿಕೊಳ್ಳಲು ನಾವು ತಯಾರಿಲ್ಲ. ವಿದೇಶಿ ವ್ಯವಸ್ಥೆಯನ್ನು ಹೊಗಳುತ್ತ, ನಮ್ಮ ವ್ಯವಸ್ಥೆಯನ್ನು ವಿಮರ್ಶಿಸುತ್ತ, ಹೊಸತನಕ್ಕೆ ಒಗ್ಗಿಕೊಳ್ಳುವುದನ್ನು ತಿರಸ್ಕರಿಸುತ್ತ ಕಾಲ ಕಳಯುತ್ತೇವೆ’ ಎಂದು ವಿಷಾದಿಸಿದರು.

ಪಿಟೀಲು ವಾದಕ ಡಾ.ಮೈಸೂರು ಮಂಜುನಾಥ್, ನಟ ಎಸ್.ಎನ್‌.ಸೇತುರಾಮ್, ರಂಗಕರ್ಮಿ ಎಚ್.ಜನಾರ್ದನ ಮಾತನಾಡಿದರು. ಕರ್ನಾಟಕ ರಾಜ್ಯ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಉಪನ್ಯಾಸಕಿ ಡಾ.ಸಂತೋಷಿ ಮಂಜುನಾಥ್, ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್, ಸಂಶೋಧನಾ ಡೀನ್ ಸಿ.ಜಿ.ವೆಂಕಟೇಶ್‌ ಭಾಗವಹಿಸಿದ್ದರು.

ಚೌಡಯ್ಯ, ಶೇಷಣ್ಣ ಹೆಸರಿರಲಿಲ್ಲವೇ?

‘ಮೈಸೂರಿನಲ್ಲಿರುವ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಡಾ.ಗಂಗೂಬಾಯಿ ಹಾನಗಲ್ ಅವರ ಹೆಸರಿಟ್ಟಿರುವುದೇ ತಪ್ಪು. ಮೈಸೂರಿನ ಪಿಟೀಲು ಚೌಡಯ್ಯ ಹಾಗೂ ವೀಣೆ ಶೇಷಣ್ಣ ಅವರ ಹೆಸರು ನೆನಪಾಗಲಿಲ್ಲವೇ’ ಎಂದು ತಾರಾನಾಥ ಪ್ರಶ್ನಿಸಿದರು.

ಹಾನಗಲ್‌ ಅವರ ಹೆಸರನ್ನು ಹುಬ್ಬಳ್ಳಿ, ಧಾರವಾಡ ಭಾಗದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಇಟ್ಟಿದ್ದರೆ ಸಮಂಜಸವಾಗಿರುತ್ತಿತ್ತು. ಮೈಸೂರಿನ ವಿಶ್ವವಿದ್ಯಾಲಯಕ್ಕೆ ಇಲ್ಲಿನ ಸ್ಥಳೀಯ ಸಾಧಕರ ಹೆಸರನ್ನೇ ಇಡಬೇಕಿತ್ತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT