ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸಲಾಗುತ್ತಿದೆ: ದೇವೇಗೌಡ ಕಿಡಿ

Last Updated 23 ಜನವರಿ 2020, 9:46 IST
ಅಕ್ಷರ ಗಾತ್ರ

ಬೆಂಗಳೂರು: ದೇಶಕ್ಕೆ ಇಂದು ಗಂಡಾಂತರ ಎದುರಾಗಿದೆ, ಕಾಂಗ್ರೆಸ್ ನಿರ್ದಿಷ್ಟ ಕಾರ್ಯಕ್ರಮ ಹಾಕಿಕೊಳ್ಳಬೇಕು, ಜತೆಗೆ ಪ್ರಾದೇಶಿಕ ಪಕ್ಷಗಳನ್ನು ಜನತೆ ಬಲಪಡಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಪಕ್ಷದ ರಾಜ್ಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಎಡವಿದ್ದರಿಂದಾಗಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಇದನ್ನು ಸವಾಲಾಗಿ ತೆಗೆದುಕೊಳ್ಳಬೇಕಾಗಿದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಬಲ ಕಡಿಮೆ ಇರುವ ಕಾರಣ ಸಿಎಎ ಕಾಯ್ದೆ ಜಾರಿಗೆ ಬರುವಂತಾಗಿದೆ. ಮುಸ್ಲಿಂ ಸಮುದಾಯದವರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಪರಿಗಣಿಸಲಾಗುತ್ತಿದೆ. ಕಾಶ್ಮೀರದಲ್ಲಿ ಮುಖಂಡರನ್ನು ಆರು ತಿಂಗಳಿಂದ ಗೃಹಬಂಧನದಲ್ಲಿ ಇಟ್ಟಿದ್ದಾರೆ. ಕೇಂದ್ರ ಸರ್ಕಾರದ ಅತ್ಯಂತ ಕೆಟ್ಟ ನಿರ್ಣಯ. ಇದನ್ನು ಪಕ್ಷ ಉಗ್ರವಾಗಿ ಖಂಡಿಸುತ್ತದೆ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಕ್ಷದಲ್ಲಿ ಮಹಿಳೆಯರಿಗೆ ಅಧಿಕಾರ ಕೊಟ್ಟ ತೃಪ್ತಿ ಇದೆ. ಮುಸ್ಲಿಂ ಮಹಿಳೆಗೇ ಮೇಯರ್ ಸ್ಥಾನ ಕೊಟ್ಟು ಅವರಿಗೆ ಗೌರವ ಕೊಡಲಾಗಿದೆ, ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕರುಣಿಸುವ ಮಸೂದೆಯನ್ನು ನಾನು 1996ರಲ್ಲಿ ಮಂಡಿಸಿದೆ, ಆದರೆ ಅದಕ್ಕೆ ಇದುವರೆಗೂ ಮುಕ್ತಿ ಸಿಕ್ಕಿಲ್ಲ‘ ಎಂದರು.

ಕುಮಾರಸ್ವಾಮಿ ತಮ್ಮ ಆರೋಗ್ಯವನ್ನು ಕಡೆಗಣಿಸಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಆದರೂ ಉಪಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ, ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸುವ ಸಲುವಾಗಿ ಇದೀಗ ಮೊದಲ ಸಭೆ ನಡೆಸಲಾಗಿದೆ ಎಂದರು.

ಪಕ್ಷ ಕೈಗೊಂಡ ನಿರ್ಣಯಗಳ ಜಾರಿಗಾಗಿ ದೆಹಲಿಯ ಜಂತರ್ ಮಂತರ್‌ಗೆ ಹೋಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT