ಶನಿವಾರ, ಫೆಬ್ರವರಿ 22, 2020
19 °C
ಸಾಹಿತಿ ಕೆ.ಶಿವರಾಮ್ ಐತಾಳ್ ಅವರ ಮೊಮ್ಮಗ ಅಭಿಷೇಕ್ ಮೃತಪಟ್ಟ ಯುವಕ

ಮೈಸೂರಿನ ಯುವಕನಿಗೆ ಅಮೆರಿಕದಲ್ಲಿ ಗುಂಡೇಟು; ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾಹಿತಿ ಕೆ.ಶಿವರಾಮ ಐತಾಳ್ ಅವರ ಮೊಮ್ಮಗ ಹಾಗೂ ಇಲ್ಲಿನ ಕುವೆಂಪುನಗರದ ನಿವಾಸಿ ಸುದೇಶ್‌ ಚಂದ್‌ ಅವರ ಪುತ್ರ ಅಭಿಷೇಕ್‌ ಸುದೇಶ್‌ ಭಟ್‌ (25) ಅಮೆರಿಕದ ಸ್ಯಾನ್‌ಬರ್ನಾಡಿಯೊದಲ್ಲಿ ಗುಂಡಿನೇಟಿನಿಂದ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ‘ಥ್ಯಾಂಕ್ಸ್ ಗೀವಿಂಗ್ ಡೇ’ ಆಚರಣೆ ಹಾಗೂ ಸ್ಯಾನ್‌ಬರ್ನಾಡಿಯೊದಲ್ಲಿನ ಭಾರಿ ಹಿಮಪಾತದಿಂದ ಮೃತದೇಹ ತರಲು ತೊಡಕಾಗಿದೆ.

‘ಇವರು ಎಂ.ಎಸ್‌ ವಿದ್ಯಾಭ್ಯಾಸಕ್ಕಾಗಿ ಕಳೆದ 20 ತಿಂಗಳಿಂದ ಅಮೆರಿಕದಲ್ಲಿ ವಾಸವಿದ್ದರು. ಬಿಡುವಿನ ವೇಳೆಯಲ್ಲಿ ಹೋಟೆಲ್‌ವೊಂದರಲ್ಲಿ ರಿಸಪ್ಷನಿಸ್ಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಮಧ್ಯರಾತ್ರಿ 11.30ರ ವೇಳೆಗೆ ವ್ಯಕ್ತಿಯೊಬ್ಬ ಇವರಿಗೆ ಗುಂಡು ಹಾರಿಸಿದ್ದಾನೆ. ಇವರ ಮೃತದೇಹವು ಹೋಟೆಲ್‌ನ ರೂಂವೊಂದರ ಬಾಗಿಲಿನ ಮುಂಭಾಗ ಪತ್ತೆಯಾಗಿದೆ’ ಎಂದು ಇವರ ಸಂಬಂಧಿ ರಂಗಾಯಣದ ಕಲಾವಿದ ರಾಮನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಸದ ಪ್ರತಾಪಸಿಂಹ ಹಾಗೂ ಜಿಲ್ಲಾಧಿಕಾರಿ ಅವರಿಗೆ ಇ–ಮೇಲ್‌ ಮೂಲಕ ಸಹಾಯ ಕೋರಲಾಗಿದೆ. ಪ್ರತಾಪಸಿಂಹ ಅವರು ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಅಭಿಷೇಕ್ ತಮ್ಮ ತಂದೆಯೊಂದಿಗೆ 2 ದಿನಗಳ ಹಿಂದೆಯಷ್ಟೇ ಮಾತನಾಡಿದ್ದರು. ರಾತ್ರಿ 11.15ಕ್ಕೂ ಇವರು ಕಳುಹಿಸಿದ ಸಂದೇಶವೊಂದನ್ನು ನೋಡಿದ್ದರು. ಇದಾದ 15 ನಿಮಿಷಕ್ಕೆ ಇವರು ಮೃತಪಟ್ಟಿರುವ ಸುದ್ದಿ ಬಂದಿದೆ. ಇದರಿಂದ ತಂದೆ ಮತ್ತು ತಾಯಿ ಇಬ್ಬರೂ ಆಘಾತಕ್ಕೆ ಒಳಗಾಗಿದ್ದಾರೆ.

ಸದ್ಯ, ‘ಥ್ಯಾಂಕ್ಸ್ ಗೀವಿಂಗ್ ಡೇ’ ಆಚರಣೆಯಿಂದ ಅಮೆರಿಕದಲ್ಲಿ ರಜೆ ಇದೆ. ಜತೆಗೆ, ಬೀಸುತ್ತಿರುವ ಶೀತ ಮಾರುತಗಳು, ಹಿಮಪಾತಗಳಿಂದ ಸ್ಯಾನ್‌ಬರ್ನಾಡಿಯೊಕ್ಕೆ ತಲುಪುವ ಎಲ್ಲ ರಸ್ತೆಗಳೂ ಬಂದ್‌ ಆಗಿರುವುದು ಮೃತದೇಹ ತರುವುದಕ್ಕೆ ತೊಡಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು