ಸೋಮವಾರ, ಜೂನ್ 1, 2020
27 °C

ಸರ್ಕಾರದ ತಲೆ ಕೆಡಿಸಿವೆ ಈ ನಿಗೂಢ ಕೋವಿಡ್‌ ಪ್ರಕರಣಗಳು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ 10ಕ್ಕೂ ಹೆಚ್ಚು ಕೋವಿಡ್‌ 19 ಪ್ರಕರಣಗಳು ನಿಗೂಢವಾಗಿಯೇ ಉಳಿದಿವೆ. ರೋಗಿಗಳು ಸೋಂಕಿನಿಂದ ಆಸ್ಪತ್ರೆಗೆ ದಾಖಲಾದರೂ, ಸೋಂಕಿನ ಮೂಲ ಈ ವರೆಗೆ ಪತ್ತೆಯಾಗಿಲ್ಲ. ಇದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. 

ಅಂತರರಾಷ್ಟ್ರೀಯ ಅಥವಾ ದೇಶೀಯ ಪ್ರಯಾಣದ ಇತಿಹಾಸವಿಲ್ಲದ, ಸೋಂಕಿತರೊಂದಿಗೆ ಯಾವುದೇ ಸಂಪರ್ಕವಿಲ್ಲದ, ಸೋಂಕಿತರೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಪರ್ಕಗೊಳ್ಳದ ಕನಿಷ್ಠ 10 ಪ್ರಕರಣಗಳು ರಾಜ್ಯದಲ್ಲಿ ಕಂಡುಬಂದಿವೆ. ಹೀಗಿದ್ದರೂ, ರಾಜ್ಯ ಸರ್ಕಾರ ಮಾತ್ರ ಸಮುದಾಯ ಹಂತದ ಸೋಂಕು ಪ್ರಸರಣವನ್ನು ನಿರಾಕರಿಸುತ್ತಿದೆ.

ಬಿಬಿಎಂಪಿ 

ಉದಾಹರಣೆಗೆ, ಗುರುವಾರ ವರದಿಯಾದ 16 ಪ್ರಕರಣಗಳಲ್ಲಿ, ಉಸಿರಾಟದ ತೀವ್ರ ತೊಂದರೆ (ಎಸ್‌ಎಆರ್‌ಐ) ಇರುವ ಸೋಂಕಿತ–196(42 ವರ್ಷ) ಮತ್ತು ಸೋಂಕಿತ–197 (27 ವರ್ಷ) ಯಾವುದೇ ಪ್ರಯಾಣದ ಇತಿಹಾಸ ಅಥವಾ ಸೋಂಕಿತರ ಸಂಪರ್ಕ ಹೊಂದಿಲ್ಲ. ಎಸ್‌ಎಆರ್‌ಐನ ಹಲವು ಪ್ರಕರಣಗಳ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ,  ಇವುಗಳನ್ನು ಸಮುದಾಯ ಹಂತದ ಪ್ರಸರಣಕ್ಕೆ ಉದಾಹರಣೆಗಳೆಂದು ಪರಿಗಣಿಸಬಹುದೇ ಎಂಬ ಪ್ರಶ್ನೆ ಉತ್ತರಿಸಿರುವ ಕರ್ನಾಟಕದ ಕೋವಿಡ್‌ 19 ವಕ್ತಾರ ಸಚಿವ ಎಸ್.ಸುರೇಶ್ ಕುಮಾರ್, ಇಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರಿನ ಸೋಂಕಿತರು–101 (62 ವರ್ಷದ ಮಹಿಳೆ) ಸದ್ಯ ಇನ್ನೂ ವೆಂಟಿಲೇಟರ್‌ ವ್ಯವಸ್ಥೆಯಲ್ಲಿದ್ದು, ಅವರೂ ಯಾವುದೇ ಪ್ರಯಾಣದ ಇತಿಹಾಸ ಹೊಂದಿಲ್ಲ. ಅವರ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ. 

ಗದಗ

ಗದಗದ ಸೋಂಕಿತರು–166 (80 ವರ್ಷದ ಮಹಿಳೆ) ಗುರುವಾರ ಮೃತಪಟ್ಟಿದ್ದು, ತೀವ್ರ ಉಸಿರಾಟದ ತೊಂದರೆ ಹೊಂದಿದ್ದರು ಎಂದು ಹೇಳಲಾಗಿದೆ. ಅವರಿಗೆ ಸೋಂಕು ಯಾವ ಮೂಲದಿಂದ ತಗುಲಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಅವರು ಸಂಪರ್ಕದಲ್ಲಿದ್ದ 42 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಯಾರಲ್ಲಿಯೂ ಸೋಂಕು ದೃಢಪಟ್ಟಿಲ್ಲ. ಇನ್ನೂ 11 ಮಂದಿಯ ಮಾದರಿ ಪರೀಕ್ಷೆಯ ಫಲಿತಾಂಶ ಬರಬೇಕಾಗಿದೆ. 

ಮೈಸೂರು

ಮೈಸೂರಿನ ಸೋಂಕಿತ–158 (26 ವರ್ಷ) ಮಾಹಿತಿ ಇನ್ನಷ್ಟೇ ಖಚಿತವಾಗಬೇಕಿ. ಈ ಮಧ್ಯೆ ನಂಜನಗೂಡಿನ ಔಷಧ ಕಂಪನಿಯ ಉದ್ಯೋಗಿ ಬಗ್ಗೆ ಈಗಾಗಲೇ ಪೂರ್ಣ ತನಿಖೆ ನಡೆದಿದೆ. ಆದರೆ, ಸೋಂಕಿನ ಮೂಲ ಇನ್ನಷ್ಟೇ ಗೊತ್ತಾಗಬೇಕಿದೆ. ‘36 ವರ್ಷದ ಈ ಸೋಂಕಿತರು ಯಾವುದೇ ಪ್ರಯಾಣದ ಇತಿಹಾಸ ಹೊಂದಿಲ್ಲ. ಮಾರ್ಚ್‌ 26ರಂದು ಅವರಿಗೆ ಸೋಂಕು ದೃಢಪಟ್ಟಿತ್ತು,’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದರು.
ಸೋಂಕಿತ–52 ತನ್ನ ಪತ್ನಿ, ಸಂಬಂಧಿ ಮತ್ತು ಇತರ ಸಹೋದ್ಯೋಗಿಗಳಿಗೂ ಸೋಂಕು ಹರಿಡಿದ್ದರು. ಸೋಂಕಿತ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಚೀನಾದಿಂದ ಬಂದ ಪ್ಯಾಕೇಜ್‌ಗಳನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಅವುಗಳಲ್ಲಿ ಸೋಂಕಿನ ಅಂಶಗಳು ಕಂಡು ಬಂದಿಲ್ಲ. 

ಮೈಸೂರಿನ ಸೋಂಕಿತರು–137, 139 ಇವರ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 

ಬಾಗಲಕೋಟೆ 

ಸೋಂಕಿತ 125(75 ವರ್ಷ) ಈಗಾಗಲೇ ಮೃತಪಟ್ಟಿದ್ದು, ಅವರಿಗೆ ಸೋಂಕು ತಗುಲಿದ ಬಗೆಯನ್ನು ತನಿಖೆಯ ಮೂಲಕ ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ. 

ಬೆಂಗಳೂರು ನಗರ

ಬೆಂಗಳೂರಿನ ಸೋಂಕಿತ–102 (24 ವರ್ಷ) ಇವರಿಗೆ ಸೋಂಕು ತಗುಲಿದ ಮೂಲದ ಬಗ್ಗೆ ಈ ವರೆಗೆ ಮಾಹಿತಿ ಲಭ್ಯವಾಗಿಲ್ಲ. ಸೋಂಕಿತನನ್ನು ಇತ್ತೀಚೆಗಷ್ಟೇ ವೆಂಟಿಲೇಟರ್‌ನಿಂದ ಹೊರತೆಗೆಯಲಾಗಿದೆ. ರಾಜ್ಯದಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾದ ಅತ್ಯಂತ ಕಿರಿಯ ಕೋವಿಡ್‌ 19 ಸೋಂಕಿತ ಈತ ಎಂದು ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು