ಶನಿವಾರ, ಸೆಪ್ಟೆಂಬರ್ 18, 2021
21 °C

ನರೇಗಾ, ನೀರಾವರಿ ಯೋಜನೆಗಳಿಗೆ ಹಿನ್ನಡೆ: ಕೃಷ್ಣಭೈರೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಕೇಂದ್ರ ಸರ್ಕಾರದಿಂದ ₹ 1,800 ಕೋಟಿ ಬಾಕಿ ಬಿಡುಗಡೆ ಆಗಿಲ್ಲ. 2016ರಿಂದ ಬಾಕಿ ಹಣ ನೀಡಬೇಕಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಮೈಸೂರಿನಲ್ಲಿ ಬುಧವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

2015–16ರಲ್ಲಿ ರಾಜ್ಯದಲ್ಲಿ ಬರಗಾಲವಿತ್ತು. ಕೇಂದ್ರ ಸರ್ಕಾರ 6 ತಿಂಗಳು ಅನುದಾನ ನೀಡಿರಲಿಲ್ಲ. ಹಣ ಪಾವತಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕೇಂದ್ರದ ಅನುಮತಿ ಪಡೆದು ರಾಜ್ಯ ಸರ್ಕಾರ ₹ 2,175 ಕೋಟಿ ಬಿಡುಗಡೆ ಮಾಡಿತ್ತು. ಈ ಮೊತ್ತದಲ್ಲಿ ಕೇಂದ್ರ ₹ 935 ಕೋಟಿಯನ್ನು ಇನ್ನೂ ಮರುಪಾವತಿ ಮಾಡಿಲ್ಲ ಎಂದರು.

ಈ ವರ್ಷದ ಚಾಲ್ತಿ ಬಾಕಿ ಮತ್ತು ಹಿಂದಿನ ವರ್ಷಗಳ ಬಾಕಿ ಸೇರಿದಂತೆ ಒಟ್ಟು ₹ 1,800 ಕೋಟಿಯನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಕೇಂದ್ರ ಸರ್ಕಾರವು ಕುಡಿಯುವ ನೀರಿನ ಯೋಜನೆಗಳಿಗೆ ನೀಡುವ ಅನುದಾನವನ್ನೂ ಕಡಿತಗೊಳಿಸಿದೆ. ರಾಜ್ಯ ಸರ್ಕಾರ ಈ ವರ್ಷ ಕುಡಿಯುವ ನೀರಿನ ಯೋಜನೆಗಳಿಗೆ ₹ 2,600 ಕೋಟಿ ಖರ್ಚು ಮಾಡಿದೆ. ಇದರಲ್ಲಿ ಕೇಂದ್ರದ ಪಾಲು ₹1,460 ಕೋಟಿಯಾಗಿದ್ದು, ಇದುವರೆಗೆ ಕೇವಲ ₹ 312 ಕೋಟಿ ಮಾತ್ರ ನೀಡಿದೆ ಎಂದರು.

2018ರ ಮಾರ್ಚ್‌ ವರೆಗೆ ವಿವಿಧ ಯೋಜನೆಗಳಿಗೆ ₹ 95 ಸಾವಿರ ಕೋಟಿ ಬಿಡುಗಡೆ ಮಾಡಬೇಕಿತ್ತು. ಆದರೆ ₹ 80 ಸಾವಿರ ಕೋಟಿ ಮಾತ್ರ ನೀಡಿದೆ ಎಂದು ಹೇಳಿದರು.

646 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ರಾಜ್ಯದಲ್ಲಿ ಒಟ್ಟು 646 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರಲ್ಲಿ 284 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ 490 ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದ್ದು, ಪ್ರತಿದಿನ ಸುಮಾರು 1,376 ಟ್ಯಾಂಕ್‌ ನೀರು ಸರಬರಾಜು ಆಗುತ್ತಿದೆ ಎಂದು ಮಾಹಿತಿ ನೀಡಿದರು.

362 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

‘ಶಾಶ್ವತ ಕುಡಿಯುವ ನೀರಿನ ಯೋಜನೆಗಳಿಗಾಗಿ ಈ ವರ್ಷ ಜಿ.ಪಂ.ಗಳಿಗೆ ₹ 2,600 ಕೋಟಿ ಅನುದಾನ ಕೊಟ್ಟಿದ್ದೇವೆ. ಬರ ಘೋಷಣೆಯಾದ ಬಳಿಕ ಹೆಚ್ಚುವರಿಯಾಗಿ ₹ 134 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಹಲ್ಲೆಗೆ ವೈಯಕ್ತಿಕ ವಿಚಾರ ಕಾರಣ’

‘ಶಾಸಕರಾದ ಆನಂದ್‌ ಸಿಂಗ್‌, ಜೆ.ಎನ್‌.ಗಣೇಶ್ ಪ್ರಕರಣದಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ವೈಯಕ್ತಿಕ ಮತ್ತು ಸ್ಥಳೀಯ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದೆ ಎಂಬುದು ನನಗೆ ದೊರೆತಿರುವ ಮಾಹಿತಿ’ ಎಂದು ಕೃಷ್ಣಭೈರೇಗೌಡ ಹೇಳಿದರು.

ಈ ಘಟನೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷದಲ್ಲಿ ಒಡಕು ಇಲ್ಲ. ಯಾವುದೇ ಶಾಸಕರನ್ನು ಬಿಟ್ಟುಕೊಡುವಂತಹ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ಗಣೇಶ್ ಅವರನ್ನು ಅಮಾನತು ಮಾಡಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು