ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಾಡಿದಷ್ಟು ನಂಬಿಕೆ ದ್ರೋಹ ಬೇರ್‍ಯಾರೂ ಮಾಡಿಲ್ಲ: ಸಾಹಿತಿ ದೇವನೂರ ಮಹಾದೇವ

Last Updated 15 ಡಿಸೆಂಬರ್ 2019, 9:46 IST
ಅಕ್ಷರ ಗಾತ್ರ

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯಷ್ಟು ನಂಬಿಕೆ ದ್ರೋಹವನ್ನು ಬೇರೆ ಇನ್ನಾರೂ ಮಾಡಿಲ್ಲ ಎಂದು ಸಾಹಿತಿ ದೇವನೂರ ಮಹಾದೇವ ಟೀಕಿಸಿದರು.

ಜನರು ಮೋದಿ ಅವರನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬಿರಲಿಲ್ಲ. ಆದರೆ, ಅವರ ನಂಬಿಕೆಗಳನ್ನು ಮೋದಿ ಹುಸಿಯಾಗಿಸಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಕಪ್ಪುಹಣ ವಾಪಸ್ ತಂದು ₹ 15 ಲಕ್ಷ ಎಲ್ಲರ ಖಾತೆಗೆ ಹಾಕುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ, ಈಗ ಬ್ಯಾಂಕಿನಲ್ಲಿರುವ ಹಣಕ್ಕೆ ಭದ್ರತೆ ಇಲ್ಲದಂತಾಗಿದೆ. ಉದ್ಯೋಗ ಸೃಷ್ಟಿಸುತ್ತೇನೆ ಎಂದರು. ಈಗ ಇರುವ ಕೆಲಸ ಉಳಿದರೆ ಸಾಕು ಎನ್ನುವ ಸ್ಥಿತಿ ಒದಗಿದೆ. ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದರು. ಈಗ ಅವರ ಆದಾಯ ಇಳಿಯುತ್ತಿದೆ. ಇವೆಲ್ಲವೂ ನಂಬಿಕೆ ದ್ರೋಹವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ಹೀಗಾಗಿಯೇ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಮಾಡಿದ ಮೇಲೆ ಜನರನ್ನು ಉದ್ದೇಶಿಸಿ ‘ಆತಂಕಕ್ಕೆ ಒಳಗಾಗಬೇಡಿ ನನ್ನನ್ನು ನಂಬಿ, ನಾನು ನಿಮ್ಮ ಸೇವಕ’ ಎಂದು ಟ್ವೀಟ್ ಮಾಡಿದ್ದಾರೆ. ಇದು ‘ಸಿಲ್ಲಿ ಲಲ್ಲಿ’ ಧಾರವಾಹಿಯಲ್ಲಿ ಬರುವ ಸಮಾಜ ಸೇವಕಿ ಲಲಿತಾಂಬ ಎನ್ನುವ ಪಾತ್ರದ ಹಾಗೆ ‘ನನ್ನ ನಂಬಿ ಪ್ಲೀಸ್’ ಎನ್ನುವ ಹಾಗಿದೆ ಎಂದು ಲೇವಡಿ ಮಾಡಿದರು.

ನೋಟುಗಳನ್ನು ಅಮಾನ್ಯೀಕರಣಗೊಳಿಸಿದ ಬಳಿಕ ಮೋದಿ ಅವರು ‘ನನ್ನದು ತಪ್ಪು ನಿರ್ಧಾರ ಎಂದು ಸಾಬೀತಾದರೆ, ನಾಕೂ ದಾರಿ ಸೇರುವ ಒಂದು ವೃತ್ತದಲ್ಲಿ ನನ್ನನ್ನು ನಿಲ್ಲಿಸಿ ನನಗೆ ಯಾವುದೇ ಶಿಕ್ಷೆ ವಿಧಿಸಿದರೂ ಆ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ’ ಎಂದು ಹೇಳಿದ್ದರು. ಈ ಮಾತಿಗೆ 3 ವರ್ಷಗಳು ತುಂಬುತ್ತಿವೆ. ಮೋದಿ ಅವರದು ಉತ್ತರನ ಪೌರುಷದ ಹಾಗೆ ಕಾಣುತ್ತಿದೆ ಎಂದು ಚಾಟಿ ಬೀಸಿದರು.

ನರೇಂದ್ರ ಮೋದಿ ಅವರು ಜನ ಸಮುದಾಯದಲ್ಲಿ ಮಲಗಿರುವ ಜಾತಿ, ಧರ್ಮ, ಭಾಷೆ ಮೊದಲಾದ ಭಾವನೆ, ನಂಬಿಕೆಗಳನ್ನು ಕೆರಳಿಸಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಪೌರತ್ವ ತಿದ್ದುಪಡಿ ಕಾಯ್ದೆ ಎಂದು ವಿಶ್ಲೇಷಿಸಿದರು.

ಭಾವನೆ, ನಂಬಿಕೆಗಳನ್ನು ಕೆರಳಿಸಿ ಛೂ ಬಿಟ್ಟರೆ ಅವು ಭೂತ ಪಿಶಾಚಿಗಳಾಗಿ ರಕ್ತ ಕೇಳುತ್ತವೆ. ಹೀಗಾಗಿ, ಜನಮುಖಿ ಸಂಘಟನೆಗಳು ಮಾತ್ರವಲ್ಲ, ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ಮಿತ್ರ ಪಕ್ಷಗಳಲ್ಲಿ ಇರವವರು ಹಾಗೂ ಜನರು ಇದರ ವಿರುದ್ಧ ಮಾತನಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಇದರ ಭಾಗವಾಗಿ ಡಿ. 19ರಂದು ಇಲ್ಲಿನ ಪುರಭವನದ ಮುಂಭಾಗ ಹಲವು ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ’ ಎಂದು ಹೋರಾಟಗಾರ ಪ‍.ಮಲ್ಲೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT