ಶನಿವಾರ, ಜುಲೈ 2, 2022
20 °C
ಪ್ರವೇಶಕ್ಕೆ ಅರ್ಹತೆ ಪಡೆದ ರಾಜ್ಯದ 64,982 ಅಭ್ಯರ್ಥಿಗಳು

ನೀಟ್‌ ಫಲಿತಾಂಶ: ‘ರಾಜ್ಯಕ್ಕೇ ಡಿ.ಆರ್‌.ಫಣೀಂದ್ರ ಟಾಪರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನೀಟ್‌ನಲ್ಲಿ ಅಧಿಕ ಅಂಕ ಸಿಕ್ಕೇ ಸಿಗುತ್ತದೆ ಎಂಬುದು ಗೊತ್ತಿತ್ತು. ಆದರೆ ರಾಜ್ಯಕ್ಕೇ ಟಾಪರ್ ಎಂದು ತಿಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ವೈದ್ಯನಾಗಿ ಸಮಾಜದ ಸೇವೆ ಮಾಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ..’

ನೀಟ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ 36ನೇ ರ‍್ಯಾಂಕ್‌ ಗಳಿಸಿದ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ರಾಮನಾಥಪುರದ ಡಿ.ಆರ್‌.ಫಣೀಂದ್ರ ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಸಂತಸ ಇದು. 

‘ನನ್ನ ತಮ್ಮ ಸಹ ನಾನು ಓದಿದ ಶಾಲೆಯಲ್ಲೇ ಓದುತ್ತಿದ್ದಾನೆ. ಕಷ್ಟಪಟ್ಟು ಓದಿದರೆ ಖಂಡಿತ ಯಶಸ್ಸು ಇದೆ ಎಂಬ ವಿಶ್ವಾಸ ನನಗೆ ಮೊದಲೇ ಇತ್ತು. ಅದು ಇಂದು ನಿಜವಾಗಿದೆ. ಪುಣೆಯಲ್ಲಿನ ನನ್ನ ತರಗತಿಯಲ್ಲಿದ್ದ ಎಷ್ಟು ಮಂದಿ ನೀಟ್‌ ಯಶಸ್ವಿಯಾಗಿ ಮುಗಿಸಿದ್ದಾರೆ ಎಂಬ ಕುತೂಹಲ ಇದೆ. ಸರ್ವರ್‌ ಸ್ಲೋ ಇದ್ದ ಕಾರಣ ನೋಡಲು ಸಾಧ್ಯವಾಗಿಲ್ಲ’ ಎಂದರು.

ನವದೆಹಲಿಯ ‘ಏಮ್ಸ್‌’ ಅಥವಾ ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಲು ಯೋಚಿಸಿರುವ ಫಣೀಂದ್ರ ಹಾಸನದ ಜವಾಹರ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಅಲ್ಲೇ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪುಣೆಯ ಕೇಂದ್ರಕ್ಕೆ ಎರಡು ವರ್ಷಗಳ ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಿದ್ದರು.

ಫಣೀಂದ್ರ ಅವರ ತಂದೆ ಆಲೂರು ಸಿದ್ಧಾಪುರದಲ್ಲಿ ಪ್ರೌಢಶಾಲಾ ಶಿಕ್ಷಕರು, ತಾಯಿ ಕೆಪಿಟಿಸಿಎಲ್‌ನಲ್ಲಿ ಕಿರಿಯ ಎಂಜಿನಿಯರ್‌.

ವೈದ್ಯಕೀಯ ಶುಲ್ಕ– ಇನ್ನೂ ಸ್ಪಷ್ಟತೆ ಇಲ್ಲ

ನೀಟ್‌ ಫಲಿತಾಂಶ ಬಂದರೂ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಾಖಲೆಗಳ ಪರಿಶೀಲನೆಗೆ ಸಿದ್ಧತೆ ನಡೆಸಿಕೊಂಡಿದ್ದರೂ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕದ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ.

ಚುನಾವಣಾ ನೀತಿ ಸಂಹಿತೆ ಕೊನೆಗೊಂಡ ನಂತರ ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಸಭೆ ನಡೆಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಸಭೆ ಇನ್ನೂ ನಡೆದಿಲ್ಲ.

ಶೇ 15ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳು ಬೇಡಿಕೆ ಮುಂದಿಟ್ಟಿವೆ. ಕಳೆದ ವರ್ಷ ಸರ್ಕಾರ ಶೇ 10ರಷ್ಟು ಶುಲ್ಕ ಹೆಚ್ಚಳಕ್ಕೆ ಸಮ್ಮತಿಸಿ ಬಳಿಕ ಅದನ್ನು ಶೇ 8ಕ್ಕೆ ತಗ್ಗಿಸಿತ್ತು. 

ಕಳೆದ ವರ್ಷ ಸರ್ಕಾರಿ ಸೀಟಿಗೆ ₹ 50 ಸಾವಿರ,  ಖಾಸಗಿ ಕಾಲೇಜುಗಳ ಸರ್ಕಾರಿ ಸೀಟಿಗೆ ₹ 97,350 ಹಾಗೂ ಮ್ಯಾನೇಜ್‌ಮೆಂಟ್‌ ಕೋಟಾ ಸೀಟಿಗೆ ₹ 6.83 ಲಕ್ಷ ಇತ್ತು.

ಶೀಘ್ರ ಸೀಟ್‌ ಮ್ಯಾಟ್ರಿಕ್ಸ್‌

ಇದೀಗ ಕೆಇಎ ಸರ್ಕಾರದ ಸೀಟ್‌ ಮ್ಯಾಟ್ರಿಕ್ಸ್‌ ಮತ್ತು ರ‍್ಯಾಂಕ್‌ ಪಟ್ಟಿಗಾಗಿ ಕಾಯಲಿದೆ. ರ‍್ಯಾಂಕ್‌ ಪಟ್ಟಿಯಂತೆ ದಾಖಲೆಗಳ ಪರಿಶೀಲನೆ ಮತ್ತು ಸೀಟು ಹಂಚಿಕೆಯ ದಿನಾಂಕ ನಿಗದಿಯಾಗಲಿದೆ. ನೀಟ್‌ ಅಖಿಲ ಭಾರತ ಪರೀಕ್ಷೆಯಾಗಿರುವುದರಿಂದ ಯಾವುದೇ ರಾಜ್ಯದ ವಿದ್ಯಾರ್ಥಿಗಳು ಯಾವುದೇ ರಾಜ್ಯದಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ.

ನೀಟ್‌: ಫಣೀಂದ್ರಗೆ 36ನೇ ರ‍್ಯಾಂಕ್‌

ಕೊಣನೂರು (ಹಾಸನ ಜಿಲ್ಲೆ): ‘ನೀಟ್’ ಪರೀಕ್ಷೆಯಲ್ಲಿ ಮಾವಿನಕೆರೆ ಗ್ರಾಮ ಸಮೀಪವಿರುವ ಜವಾಹರ್‌ ನವೋದಯ ವಿದ್ಯಾಲಯ ವಿದ್ಯಾರ್ಥಿ ಡಿ.ಆರ್.ಫಣೀಂದ್ರ ಅವರು 36ನೇ ರ‍್ಯಾಂಕ್‌ ಪಡೆದಿದ್ದಾರೆ.

ಅವರು ರಾಮನಾಥಪುರದ ಶಿಕ್ಷಕ ಡಿ.ಬಿ.ರಮೇಶ್ ಮತ್ತು ಕೆ.ಎಸ್‌.ಮಧುರ ಅವರ ಪುತ್ರ.

ದಕ್ಷಿಣ ಫೌಂಡೇಷನ್‌ ವತಿಯಿಂದ ನೀಟ್‌ ಪರೀಕ್ಷೆಗೆ ಪುಣೆಯ ನವೋದಯ ವಿದ್ಯಾಲಯದಲ್ಲಿ ತರಬೇತಿ ಪಡೆದಿದ್ದರು. ಅವರು 720 ಅಂಕಗಳಿಗೆ 686 ಅಂಕ ಪಡೆದಿದ್ದಾರೆ. ‘ಪುಣೆಯಲ್ಲಿ ಪಡೆದ ಕೋಚಿಂಗ್ ಸಹಕಾರಿಯಾಯಿತು. ಅಖಿಲ ಭಾರತ ಮಟ್ಟದಲ್ಲಿ 50 ರ‍್ಯಾಂಕ್‌ನೊಳಗೆ ಬರಬಹುದು ಎಂದು ನಿರೀಕ್ಷಿಸಿದ್ದೆ. 36ನೇ ರ‍್ಯಾಂಕ್‌ ಸಿಕ್ಕಿರುವುದು ಖುಷಿಯಾಗಿದೆ. ಪ್ರತಿದಿನ 9 ತಾಸು ಓದುತ್ತಿದೆ. ಸರ್ಜನ್‌ ಆಗಬೇಕು ಅಂದುಕೊಂಡಿದ್ದೇನೆ’ ಎಂದು ಫಣೀಂದ್ರ ಸಂತಸ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.