ಸೋಮವಾರ, ಸೆಪ್ಟೆಂಬರ್ 16, 2019
24 °C
ಕೊಡಗು ಜಿಲ್ಲಾಡಳಿತ ಸಜ್ಜು

ಮುಂಗಾರು ಮಳೆ: ಕೊಡಗಿಗೆ ಎನ್‌ಡಿಆರ್‌ಎಫ್‌ ನಿಯೋಜನೆ

Published:
Updated:

ಮಡಿಕೇರಿ: ಕೊಡಗಿನಲ್ಲಿ ಕಳೆದ ವರ್ಷದ ಪ್ರಾಕೃತಿಕ ವಿಕೋಪ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು ಈ ಬಾರಿ ಮುಂಗಾರು ಪ್ರವೇಶಿಸುವ ಮೊದಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಗೆ ಶುಕ್ರವಾರ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದರು. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಡಾ.ರಾಜ್‌ಕುಮಾರ್‌ ಖತ್ರಿ ಮಾತನಾಡಿ, ‘ಮಳೆಗಾಲ ಸಮೀಪಿಸುತ್ತಿದ್ದು ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರ ಆರಂಭಿಸಲಾಗಿದೆ. ನೆರವು ಬೇಕಾದವರು 1077ಕ್ಕೆ ಕರೆ ಮಾಡಬಹುದು. ಅದು ದಿನದ 24 ಗಂಟೆಯೂ ಕಾರ್ಯ ನಿರ್ವಹಣೆ ಮಾಡಲಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯ ನೈಸರ್ಗಿಕ ವಿಕೋಪದ ಉಸ್ತುವಾರಿ ಕೇಂದ್ರದಿಂದ ಮಳೆಗಾಲದಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಲಾಗುವುದು. ‘ವರುಣ ಮಿತ್ರ’ ಸಹಾಯವಾಣಿಯಿಂದಲೂ ರೈತರು ಜಿಲ್ಲೆಯ ಹವಾಮಾನ ಪರಿಸ್ಥಿತಿ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಿದೆ’ ಎಂದು ತಿಳಿಸಿದರು.

‘ಅಗ್ನಿಶಾಮಕ ದಳ, ಗೃಹರಕ್ಷಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆಗೆ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ. ಇದೇ ತಿಂಗಳಾಂತ್ಯಕ್ಕೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್‌ಡಿಆರ್‌ಎಫ್‌) ಒಂದು ತಂಡವು ಕೊಡಗಿಗೆ ಬರಲಿದ್ದು ಮುಂಗಾರು ಮಳೆ ಬಿಡುವು ನೀಡುವ ತನಕವೂ ಆ ತಂಡವು ಜಿಲ್ಲೆಯಲ್ಲೇ ಇರಲಿದೆ’ ಎಂದು ಹೇಳಿದರು.

‘ಹೆದ್ದಾರಿಗಳಲ್ಲಿ ಭೂಕುಸಿತವಾದರೆ ಮಣ್ಣು ತೆರವು ಮಾಡಲು 20 ಜೆಸಿಬಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಒಂದುವೇಳೆ ಈ ವರ್ಷವೂ ಮತ್ತೆ ದುರಂತ ಸಂಭವಿಸಿದರೆ ಸಂತ್ರಸ್ತರಿಗೆ ನೆರವಾಗಲು ಪರಿಹಾರ ಕೇಂದ್ರಕ್ಕೆ ಸ್ಥಳ ಗುರುತಿಸಲಾಗಿದೆ. ಕೆರೆ, ಕಾಲುವೆ ಹಾಗೂ ಒಳಚರಂಡಿಗಳಲ್ಲಿ ಹೂಳು ತೆರವು ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಮಳೆಗಾಲಕ್ಕೂ ಮುನ್ನ ದುರಂತದ ಸೂಕ್ಷ್ಮ ಪ್ರದೇಶಗಳಿಗೆ ಅಧಿಕಾರಿಗಳ ತಂಡವು ಭೇಟಿ ಅಲ್ಲಿನ ಸ್ಥಿತಿಗತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ರಾಜ್‌ಕುಮಾರ್‌ ಖತ್ರಿ ತಿಳಿಸಿದರು.   

‘ಹಳೆಯ ಖಾಸಗಿ ಬಸ್‌ ನಿಲ್ದಾಣದ ಬಳಿ ಗುಡ್ಡ ಕುಸಿದಿದ್ದ ಸ್ಥಳದಲ್ಲಿ ತಕ್ಷಣವೇ ತಡೆಗೋಡೆ ನಿರ್ಮಿಸಲಾಗುವುದು. ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ’ ಎಂದು ತಿಳಿಸಿದರು.

 

Post Comments (+)