ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಪ್ರಾಕೃತಿಕ ವಿಪತ್ತು ಘಟಿಸದಿರಲಿ: ಪ್ರಭಾಕರ್‌ ಭಟ್‌

ಮಡಿಕೇರಿಯ ‘ಸ್ನೇಹ ಮಿಲನ’ ಕಾರ್ಯಕ್ರಮ
Last Updated 20 ಏಪ್ರಿಲ್ 2019, 10:33 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಮತ್ತೆಂದೂ ಪ್ರಾಕೃತಿಕ ವಿಪತ್ತು ಘಟಿಸದಿರಲಿ’ ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್‌ ಭಟ್‌ ಆಶಿಸಿದರು.

ನಗರದ ಭಾಲಭವನದಲ್ಲಿ ಶನಿವಾರ ನಡೆದ ‘ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಕೃತಿ ಮತ್ತೊಮ್ಮೆ ಪರೀಕ್ಷೆ ಮಾಡಬಾರದು. ನೋವು ನುಂಗಿಕೊಳ್ಳಿ; ಕಷ್ಟಬಂದಾಗ ಧೈರ್ಯವಾಗಿ ಎದುರಿಸಬೇಕು. ಬದುಕಲು ನೂರು ದಾರಿಗಳಿವೆ. ವಿಶ್ವಾಸ ಇಟ್ಟುಕೊಂಡು ಸಂತ್ರಸ್ತರು ಮುನ್ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಪ್ರಕೃತಿಯನ್ನೇ ಆರಾಧಿಸುವವರು ನಾವು. ಕೆಲವೊಮ್ಮೆ ಪ್ರಕೃತಿ ಎಚ್ಚರಿಸುವ ಕೆಲಸ ಮಾಡುತ್ತದೆ. ಅದು ಶಾಪವಾಗಿಯೂ ಪರಿಣಮಿಸಲಿದೆ. ಕಳೆದ ವರ್ಷ ಕೊಡಗಿನ ಜನರಿಗೆ ಭಾರೀ ದೊಡ್ಡ ಅನ್ಯಾಯವಾಗಿದೆ. ಇಷ್ಟು ದೊಡ್ಡ ರೀತಿಯಲ್ಲಿ ಪ್ರಕೃತಿಯೂ ಮುನಿಸಿಕೊಳ್ಳಬಾರದಿತ್ತು’ ಎಂದು ನೋವು ತೋಡಿಕೊಂಡರು.

‘ಪ್ರಕೃತಿ ವಿಕೋಪದ ವೇಳೆ ಹಲವರು ನೆರವು ನೀಡಿದ್ದರು. ಆರ್‌ಎಸ್‌ಎಸ್‌ ಚಿಂತನೆಯೇ ಸಮಾಜ ಸೇವೆ. ಆ ಮೂಲಕ ತ್ಯಾಗ ಮಾಡುವುದು. ಪ್ರಕೃತಿ ವಿಕೋಪದ ವೇಳೆಯೂ ಅದೇ ಕೆಲಸ ಮಾಡಿದ್ದೆವು. ರಾಜಕೀಯ ಕಾರಣಕ್ಕೆ ಸಂಘವನ್ನು ಬೇರೆ ಬೇರೆ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ವಿಷಾದಿಸಿದರು.

‘ದೇಶದ ಮಕ್ಕಳು ನಾವೆಲ್ಲರೂ ಒಂದೇ. ಸಣ್ಣಪುಟ್ಟ ವ್ಯತ್ಯಾಸ ಮರೆತು ತಾಯಿ ಸೇವೆಗೆ ಬದ್ಧವಾಗಿರಬೇಕು. ಭಾರತ ಸರ್ವಶ್ರೇಷ್ಠ ಆಗಬೇಕೆಂಬ ಹಿನ್ನೆಲೆಯಲ್ಲೇ ಸಂಘವು 93 ವರ್ಷಗಳಿಂದ ಕೆಲಸ ಮಾಡುತ್ತಿದೆ’ ಎಂದು ಮಾಹಿತಿ ನೀಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದರೂ ಇನ್ನೂ ಮೂಲಸೌಲಭ್ಯಗಳ ಕೊರತೆ ಕಾಡುತ್ತಿದೆ. ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿದೆ. ಕೆಲವು ವರ್ಷಗಳ ಹಿಂದೆ ಸಂಘಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿತ್ತು. ಈಗ ಮತ್ತೆ ಸಂಘದ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ’ ಎಂದು ಭಟ್‌ ಹೇಳಿದರು.

‘ರಾಜಸ್ತಾನದಲ್ಲಿ ಈ ಹಿಂದೆ ಎರಡು ವಿಮಾನಗಳು ಡಿಕ್ಕಿಯಾಗಿ ಹಲವರು ಸಾವನ್ನಪ್ಪಿದರು. ಆ ಸ್ಥಳಕ್ಕೆ ಮೊದಲು ತೆರಳಿ ನೆರವಾದವರು ಆರ್‌ಎಸ್‌ಎಸ್ ಸ್ವಯಂ ಸೇವಕರು. ವಿಮಾನದಲ್ಲಿ ಇದ್ದವರು ಬಹುತೇಕರು ಮುಸ್ಲಿಮರು. ಈ ಕೆಲಸವನ್ನು ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ಸಹ ಶ್ಲಾಘಿಸಿದ್ದರು’ ಎಂದು ಪ್ರಭಾಕರ್‌ ಭಟ್‌ ಹೇಳಿದರು.

‘ಪ್ರಕೃತಿ ವಿಕೋಪದ ವೇಳೆ ಸೇವಾ ಭಾರತಿ ಹೆಸರಿನಲ್ಲಿ ಪರಿಹಾರ ಕೇಂದ್ರ ತೆರೆದು ತಕ್ಷಣದ ನೆರವು ನೀಡಲಾಯಿತು. ನಮ್ಮ ಕಾಲೇಜಿನಲ್ಲಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನೂ ನೀಡಲಾಗುತ್ತಿದೆ. ಆರ್ಥಿಕ ತೊಂದರೆಯ ನಡುವೆಯೂ ಈ ವರ್ಷವೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಎಲ್ಲರಿಗೂ ಆರೋಗ್ಯ, ಸಂಸ್ಕಾರ, ಶಿಕ್ಷಣ ಮುಖ್ಯ. ಆ ರೀತಿ ಮೂರು ವಿಷಯಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಮುಖಂಡ ಚಂದ್ರನ್‌ ಮಾತನಾಡಿ, ಕೊಡಗಿನ ಜನರು ಕಹಿ ಮರೆತು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಪ್ರಕೃತಿ ವಿಕೋಪದ ವೇಳೆ 10ಕ್ಕೂ ಹೆಚ್ಚು ಪರಿಹಾರ ಕೇಂದ್ರ ತೆರೆದು ನೆರವು ಕಲ್ಪಿಸಲಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಕೃಷ್ಣಭಟ್‌, ಗಣಪತಿ ಹೆಗ್ಡೆ, ಸೀತಾರಾಂ, ಉಡೋತ್‌ ಚಂದ್ರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT