ದಾರುಣ ಸ್ಥಿತಿ ಕಂಡು ಮರುಗುವ ಅಪರಾಧಿ ಪ್ರಜ್ಞೆ ಅಗತ್ಯ

7
ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಸಾಮಾಜಿಕ ಕಾರ್ಯಕರ್ತ ಡಾ.ಪ್ರಕಾಶ್ ಆಮ್ಟೆ

ದಾರುಣ ಸ್ಥಿತಿ ಕಂಡು ಮರುಗುವ ಅಪರಾಧಿ ಪ್ರಜ್ಞೆ ಅಗತ್ಯ

Published:
Updated:
Deccan Herald

ಸಾಗರ: ‘ಸಮಾಜದಲ್ಲಿ ತೀರಾ ದಾರುಣ ಸ್ಥಿತಿಯಲ್ಲಿ ಇರುವವರನ್ನು ಕಂಡು ಮರುಗುವ ಅಪರಾಧಿ ಪ್ರಜ್ಞೆಯನ್ನು ನಮ್ಮ ಇಂದಿನ ಶಿಕ್ಷಣ ಮೂಡಿಸುವ ಅಗತ್ಯವಿದೆ’ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಡಾ.ಪ್ರಕಾಶ್ ಆಮ್ಟೆ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಬುಧವಾರ ಸಂವಾದಕ್ಕೆ ತೆರೆದುಕೊಂಡರು. ಮಹಾರಾಷ್ಟ್ರದ ಕುಗ್ರಾಮದಲ್ಲಿ ಆದಿವಾಸಿಗಳ ನಡುವೆ ಒಬ್ಬ ವೈದ್ಯರಾಗಿ ತುಂಡುಡುಗೆಯಲ್ಲಿ ಕೆಲಸ ಮಾಡಲು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಶಿಬಿರಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ, ‘ಆದಿವಾಸಿಗಳಿಗೆ ಉಡಲು ಬಟ್ಟೆಯೇ ಇಲ್ಲ ಎಂಬುದನ್ನು ನೋಡಿ ನನ್ನಲ್ಲಿ ಮೂಡಿದ ಅಪರಾಧಿ ಪ್ರಜ್ಞೆ ಈ ಕ್ರಿಯೆಗೆ ಇಳಿಸಿತು’ ಎಂದು ಉತ್ತರಿಸಿದರು.

ಸರ್ಕಾರ ಇಂದು ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಆದರೆ, ಹಳ್ಳಿಗಳಲ್ಲಿ ಕೆಲಸ ಮಾಡಲು ಇಂದಿನ ವೈದ್ಯರು ಮುಂದಕ್ಕೆ ಬಾರದೇ ಇರುವುದು ದುರದೃಷ್ಟಕರ. ವೈದ್ಯಕೀಯ ಪದವಿ ಪಡೆದವರು ಆರಂಭದಲ್ಲಿ ಕನಿಷ್ಠ ಒಂದು ವರ್ಷ ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು ಎಂದರು.

ನಾಗರಿಕ ಜಗತ್ತಿನ ಸಂಪರ್ಕದಿಂದ ದೂರವೇ ಉಳಿದಿದ್ದ ಆದಿವಾಸಿಗಳು ನೆಲೆಸಿದ್ದ ಮಹಾರಾಷ್ಟ್ರದ ಕುಗ್ರಾಮಕ್ಕೆ ತಂದೆ ಬಾಬಾ ಆಮ್ಟೆ ಅವರು ತಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ಜನರ ದಾರುಣ ಪರಿಸ್ಥಿತಿಯ ದರ್ಶನವಾಯಿತು. ಈ ಜನರ ಪರವಾಗಿ ಏನಾದರೂ ಮಾಡಲು ಸಾಧ್ಯವಿದೆಯೇ ಎಂದು ತಂದೆಯವರು ಕೇಳಿದ್ದೇ ಅಲ್ಲಿಯೇ ನೆಲೆಸಿ ಕೆಲಸ ಮಾಡಲು ಪ್ರೇರಣೆ ನೀಡಿತು ಎಂಬುದನ್ನು ಅವರು ನೆನಪಿಸಿಕೊಂಡರು.

‘ಸಾಧಾರಣವಾಗಿ ಆದಿವಾಸಿಗಳು ನಗರ ಪ್ರದೇಶದಿಂದ ಬಂದವರನ್ನು ಸುಲಭವಾಗಿ ನಂಬುವುದಿಲ್ಲ. ಆರಂಭದಲ್ಲಿ ನಮ್ಮನ್ನೂ ಅವರು ಅನುಮಾನದಿಂದಲೇ ನೋಡುತ್ತಿದ್ದರು. ನಿಧಾನವಾಗಿ ಅವರ ಆರೋಗ್ಯದ ಸಮಸ್ಯೆಗಳಿಗೆ ಮೌಢ್ಯದ ವಿಧಾನಗಳ ಬದಲಾಗಿ ವೈದ್ಯಕೀಯ ಸೇವೆಯ ಮೂಲಕ ಸ್ಪಂದಿಸಲು ಆರಂಭಿಸಿದಾಗ ಅವರಲ್ಲಿ ವಿಶ್ವಾಸ ಮೂಡಿತು’ ಎಂದು ವಿವರಿಸಿದರು.

ಆದಿವಾಸಿಗಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲ. ಅವರ ಮುಗ್ಧತೆಯನ್ನು ಹಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಅವರು ನೆಲೆಸಿರುವ ಗ್ರಾಮಗಳಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಆರಂಭಿಸಿ ಜಾಗೃತಿ ಮೂಡಿಸಲು ಮುಂದಾದ ಪರಿಣಾಮ ಪೊಲೀಸ್ ಅಥವಾ ನ್ಯಾಯಾಲಯದ ನೆರವಿಲ್ಲದೆ ತಮ್ಮ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ವಿವೇಕ ಅವರಲ್ಲಿ ಮೂಡಿತು ಎಂದು ತಿಳಿಸಿದರು.

‘ಆದಿವಾಸಿಗಳು ಅರಣ್ಯದಲ್ಲಿ ವಾಸಿಸುತ್ತಿರುವುದರಿಂದ ಕೆಲವು ಅಧಿಕಾರಿಗಳು ಇದನ್ನೆ ನೆಪವಾಗಿಟ್ಟುಕೊಂಡು ಅರಣ್ಯ ಸರ್ಕಾರದ ಸ್ವತ್ತು, ಇದರ ಪ್ರಯೋಜನವನ್ನು ನೀವು ಪಡೆಯುತ್ತಿದ್ದೀರಿ ಎಂದು ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದರು. ಅಲ್ಲದೆ ಉದ್ಯೋಗ ಖಾತ್ರಿ ಯೋಜನೆ ಹೆಸರಿನಲ್ಲಿ ಆದಿವಾಸಿಗಳ ಸಹಿ ಪಡೆದು ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಆದಿವಾಸಿಗಳು ಶಿಕ್ಷಣ ಪಡೆದ ನಂತರ ಇದು ನಿಂತಿತು’ ಎಂಬುದನ್ನು ಅವರು ವಿವರಿಸಿದರು.

ಆದಿವಾಸಿಗಳ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ನಂತರ ಆಧುನಿಕ ನಾಗರಿಕತೆಯ ಪ್ರಭಾವ ಅವರ ಮೇಲೆ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಳೆದ 30 ವರ್ಷಗಳಲ್ಲಿ ನಾನು ನೆಲೆಸಿರುವ ಹಳ್ಳಿಗಳಲ್ಲಿ ಆದಿವಾಸಿಗಳು ಕಳ್ಳತನ, ಅತ್ಯಾಚಾರ ಮಾಡಿರುವ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ.ಪ್ರಕಾಶ್ ಆಮ್ಟೆ ಅವರ ಸಾಧನೆಗಳನ್ನು ಪರಿಚಯಿಸುವ ‘ಡಿವೈನ್ ಮೆಸೆಂಜರ್ಸ್’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಡಾ.ಮಂದಾಕಿನಿ ಆಮ್ಟೆ ಹಾಜರಿದ್ದರು. ಜಯರಾಮ್ ಪಾಟೀಲ್ ಗೋಷ್ಠಿಯನ್ನು ನಿರ್ವಹಿಸಿದರು.

‘ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಬೂಟು ಧರಿಸಲು ನಿರಾಕರಣೆ

ಮಹಾರಾಷ್ಟ್ರದ ಕುಗ್ರಾಮಗಳ ಆದಿವಾಸಿಗಳ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದ ಕಾರಣಕ್ಕೆ ’ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮಕ್ಕೆ ಡಾ.ಪ್ರಕಾಶ್ ಆಮ್ಟೆ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದ ಆಯೋಜಕರು ಅಲ್ಲಿನ ನಡವಳಿಕೆಯಂತೆ ಆಮ್ಟೆ ಅವರಿಗೆ ಬೂಟು ಧರಿಸಲು ತಿಳಿಸಿದ್ದರು. ಆದರೆ ಅದಕ್ಕೆ ನಿರಾಕರಿಸಿದ ಆಮ್ಟೆ ಅವರು ಬೂಟು ಧರಿಸಲೇಬೇಕು ಎಂದು ಒತ್ತಾಯ ಮಾಡಿದರೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಇಲ್ಲ ಎಂದು ಹೇಳಿದ ನಂತರ ಆಯೋಜಕರು ಬೂಟು ಧರಿಸದೆ ಭಾಗವಹಿಸಲು ಒಪ್ಪಿಗೆ ನೀಡಿದರಂತೆ. ಈ ಪ್ರಸಂಗವನ್ನು ಗೋಷ್ಠಿಯನ್ನು ನಿರ್ವಹಿಸಿದ ಜಯರಾಮ್ ಪಾಟೀಲ್ ಉಲ್ಲೇಖಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !