ಶನಿವಾರ, ಆಗಸ್ಟ್ 15, 2020
26 °C

ಕಲಪಳ್ಳಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ನಾಡರ ಅಂತ್ಯ ಸಂಸ್ಕಾರವನ್ನು ಅವರ ಅಪೇಕ್ಷೆಯಂತೆಯೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಆಪ್ತ ಮತ್ತು ಚಿತ್ರ ನಿರ್ದೇಶಕ ಕೆ.ಎಂ. ಚೈತನ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾರ್ನಾಡರ ಪಾರ್ಥಿವ ಶರೀರ ಹೊತ್ತ ವಾಹನ ಇದೀಗ ಚಿತಾಗಾರದತ್ತ ಹೊರಟಿದೆ.

‘ಮನೆಯ ಬಳಿ ಕಾರ್ನಾಡರ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅಂತ್ಯಕ್ರಿಯೆಯು ಬೈಯಪ್ಪನಹಳ್ಳಿಯ (ಕಲಪಳ್ಳಿ) ವಿದ್ಯುತ್‌ ಚಿತಾಗಾರದಲ್ಲಿ ನಡೆಯಲಿದ್ದು. ಅಂತಿಮ ದರ್ಶನ ಪಡೆಯಲು ಇಚ್ಛಿಸುವ ಮಿತ್ರರು, ಒಡನಾಡಿಗಳು, ಬಂಧುಗಳು ಮಧ್ಯಾಹ್ನ 2 ಗಂಟೆಗೆ ಅಲ್ಲಿಗೇ ಬರಬೇಕು’ ಎಂದು ಕೆ.ಎಂ.ಚೈತನ್ಯ ತಿಳಿಸಿದ್ದಾರೆ.

ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ಅಂತ್ಯ ಸಂಸ್ಕಾರ ನಡೆಯಬೇಕು ಎಂಬುದು ಕಾರ್ನಾಡರ ಅಪೇಕ್ಷೆಯಾಗಿತ್ತು. ವಿದ್ಯುತ್ ಚಿತಾಗಾರದಲ್ಲೇ ಸಂಸ್ಕಾರ ಮಾಡಬೇಕು ಎಂಬುದು ಕುಟುಂಬದ ಇಂಗಿತ ಎನ್ನಲಾಗಿದೆ.

ಕಲಪಳ್ಳಿ ಚಿತಾಗಾರಕ್ಕೆ ಮಧ್ಯಾಹ್ನ 2 ಗಂಟೆಗೆ ಆಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರ ಕೊಂಡೊಯ್ಯಲಾಗುವುದು. ಲ್ಯಾವೆಲ್ಲೆ ರಸ್ತೆಯಲ್ಲಿರುವ ಪುರವಂಕರ ಅಪಾರ್ಟ್‌ಮೆಂಟ್ ಸಮುಚ್ಚಯದಿಂದ ಮಧ್ಯಾಹ್ನ 1ಕ್ಕೆ ಶವ ತೆಗೆದುಕೊಂಡು ಹೋಗಲಾಗುತ್ತದೆ. ಪ್ರೇಜರ್ ಟೌನ್ ಮಾರ್ಗವಾಗಿ ಆಂಬುಲೆನ್ಸ್ ಸಾಗಲಿದೆ.


ಕಲಪಳ್ಳಿ ವಿದ್ಯುತ್ ಚಿತಾಗಾರ

‘ಅವರ ಅಭಿಮಾನಿಗಳು, ಹಿತೈಷಿಗಳು ಚಿತಾಗಾರ ಸಮೀಪ ಅಂತಿಮ ದರ್ಶನ ಪಡೆಯಬಹುದು. ಯಾವುದೇ ಹೂಗುಚ್ಛ, ಹೂವಿನ ಹಾರ, ಗಂಧದ ಹಾರ ಕೊಂಡೊಯ್ಯುವಂತಿಲ್ಲ. ಇದು ಕಾರ್ನಾಡರ ಕೊನೆಯ ಆಸೆ ಆಗಿತ್ತು’ ಎಂದು ಕಾರ್ನಾಡ್ ಪುತ್ರ ನೀಡಿರುವ ಮಾಹಿತಿಯನ್ನು ಡಿಸಿಪಿ ದೇವರಾಜ್ ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ಅಂತ್ಯ ಸಂಸ್ಕಾರದ ವೇಳೆ ಯಾವುದೇ ಮೆರವಣಿಗೆ, ಸರ್ಕಾರಿ ಗೌರವ ಇರುವುದಿಲ್ಲ. ಮನೆ ಬಳಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ. ಕಲ್ಪಹಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಬೆಳಿಗ್ಗೆಯಿಂದ ಸಿದ್ಧತೆಗಳು ಆರಂಭವಾಗಿವೆ. ಸಿಬ್ಬಂದಿ ಸ್ವಚ್ಚತಾ ಕೆಲಸದಲ್ಲಿ ನಿರತರಾಗಿದ್ದಾರೆ.

ಮಧ್ಯಾಹ್ನ 3 ಗಂಟೆಯಿಂದ ಸಂಜೆ 4 ಗಂಟೆ ಅವಧಿಯವರೆಗೆ ಗಿರೀಶ್ ಕಾರ್ನಾಡ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರಕ್ಕೆ ಚಿತಾಗಾರವನ್ನು ಕಾಯ್ದಿರಿಸಲಾಗಿದೆ ಎಂದು ಚಿತಾಗಾರದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು