ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಸುಧೀಶ್ವರ್ ಹೊಸ ಮೇಯರ್‌

ತುಮಕೂರು ಮಹಾನಗರ ಪಾಲಿಕೆ: ಉಪ ಮೇಯರ್‌ ಆಗಿ ಜೆಡಿಎಸ್‌ ಎಂ.ಆರ್ ಜಯಲಕ್ಷ್ಮಿ ಅವಿರೋಧ ಆಯ್ಕೆ
Last Updated 26 ಮಾರ್ಚ್ 2018, 7:01 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ 9ನೇ ವಾರ್ಡಿನ ಸದಸ್ಯ ಕಾಂಗ್ರೆಸ್‌ನ ಸುಧೀಶ್ವರ್ ಮತ್ತು ಉಪ ಮೇಯರ್ ಆಗಿ 28ನೇ ವಾರ್ಡಿನ ಸದಸ್ಯೆ ಜೆಡಿಎಸ್‌ನ ಎಂ.ಆರ್ ಜಯಲಕ್ಷ್ಮಿ ಅವರು ಶನಿವಾರ  ಅವಿರೋಧವಾಗಿ ಆಯ್ಕೆಯಾದರು.

ಪಾಲಿಕೆ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರ ಅಧ್ಯಕ್ಷತೆಯಲ್ಲಿ ಮೇಯರ್, ಉಪ ಮೇಯರ್ ಹಾಗೂ 3 ಸ್ಥಾಯಿ ಸಮಿತಿಗಳ ಚುನಾವಣಾ ಪ್ರಕ್ರಿಯೆ ನಡೆಯಿತು.

ಕಾಂಗ್ರೆಸ್– ಜೆಡಿಎಸ್ ಮೈತ್ರಿ ಪ್ರಯುಕ್ತ ಪರಿಶಿಷ್ಟ ಜಾತಿಗೆ ಮೀಸಲಾದ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಸುಧೀಶ್ವರ್ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಎಂ.ಆರ್ ಜಯಲಕ್ಷ್ಮಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಪಾಲಿಕೆಯ 25 ಸದಸ್ಯರು ಹಾಗೂ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಡಾ.ರಫೀಕ್ ಅಹಮದ್, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಇದ್ದರು.

ಜೆಡಿಎಸ್‌ನ 13 ಸದಸ್ಯರ ಪೈಕಿ ಹನುಮಂತರಾಯಪ್ಪ ಮತ್ತು ಪ್ರೆಸ್ ರಾಜಣ್ಣ ಗೈರು ಎದ್ದು ಕಾಣುತ್ತಿತ್ತು. ಹನುಮಂತರಾಯಪ್ಪ ಮೇಯರ್ ಸ್ಥಾನ ಆಕಾಂಕ್ಷಿಯಾಗಿದ್ದರೆ, ಪ್ರೆಸ್ ರಾಜಣ್ಣ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

ಸ್ಥಾಯಿ ಸಮಿತಿಗೆ ನೇಮಕ: ಲೆಕ್ಕಪತ್ರ ಸ್ಥಾಯಿ ಸಮಿತಿ ಹೊರತುಪಡಿಸಿ ಉಳಿದ 3 ಸ್ಥಾಯಿ ಸಮಿತಿಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ತಲಾ 7 ಸದಸ್ಯರು ಆಯ್ಕೆಯಾದರು.

ಜೆಡಿಎಸ್‌ನ ಲೋಕೇಶ್ ನಾಮಪತ್ರಕ್ಕೆ ಅನುಮೋದಕರಿಲ್ಲದೇ ಇದ್ದುದರಿಂದ ಹಾಗೂ ಕಾಂಗ್ರೆಸ್‌ನ ಸದಸ್ಯೆ ಧನಲಕ್ಷ್ಮಿ ಅವರು ಅವರು ಮತ್ತೊಬ್ಬರ ನಾಮಪತ್ರಕ್ಕೆ ಒಬ್ಬರೇ ಸೂಚಕರಾಗಿದ್ದರಿಂದ ಇವರ ನಾಮಪತ್ರಗಳು ತಿರಸ್ಕೃತಗೊಂಡವು.

ಇದರಿಂದ ಮತ್ತೆ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಅವಕಾಶ ಮಾಡಿಕೊಟ್ಟರು. ಬಳಿಕ ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯಿತು.

ಜಿಲ್ಲಾಧಿಕಾರಿ ಕೆ.ಪಿ ಮೋಹನ್‌ರಾಜ್, ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ಚುನಾವಣಾ ವಿಶೇಷ ಸಭೆಯ ವೇದಿಕೆಯಲ್ಲಿದ್ದರು.

**

ಸ್ಥಾಯಿ ಸಮಿತಿಗೆ ಆಯ್ಕೆಯಾದವರು

ತೆರಿಗೆ ಮತ್ತು ಹಣಕಾಸು ಸ್ಥಾಯಿಸಮಿತಿಗೆ ಮರಿಗಂಗಯ್ಯ, ಯೂಸೂಫ್ ಖಾನ್, ಮುಜೀದಾ ಖಾನಂ, ಫರ್ಜಾನಾ ಖಾನಂ, ರೆಹಮತ್ ಉನ್ನೀಸಾ (ಎಲ್ಲರೂ ಕಾಂಗ್ರೆಸ್), ಎಂ.ಎಚ್.ಜಯಲಕ್ಷ್ಮಿ, ಟಿ.ಎಚ್.ಬಾಲಕೃಷ್ಣ (ಜೆಡಿಎಸ್) ಆಯ್ಕೆಯಾದರು. ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿಗೆ ರಾಮಕೃಷ್ಣ, ಎಚ್.ರವಿಕುಮಾರ್, ಟಿ.ಆರ್.ನಾಗರಾಜ್, ಜಿ.ಎಚ್. ಲೋಕೇಶ್ (ಜೆಡಿಎಸ್), ಎನ್.ಮಹೇಶ್, ಧನಲಕ್ಷ್ಮಿ, ಮಹಮ್ಮದ್ ಹಫೀಜ್ (ಕಾಂಗ್ರೆಸ್) ಆಯ್ಕೆಯಾದರು.

ಪಟ್ಟಣ ಯೋಜನೆ, ಸುಧಾರಣೆ ಸ್ಥಾಯಿ ಸಮಿತಿಗೆ ಎನ್.ಆರ್.ನಾಗರಾಜರಾವ್, ಯಶೋದಮ್ಮ, ನಯಾಜ್ ಅಹ್ಮದ್, ನದೀಂಪಾಷ, ಗೀತಾ ರುದ್ರೇಶ್ (ಕಾಂಗ್ರೆಸ್), ಲಲಿತಾ, ಜಯಮ್ಮ (ಜೆಡಿಎಸ್) ಆಯ್ಕೆಗೊಂಡರು.

**

ಹೊರಗುಳಿದ ಬಿಜೆಪಿ ಸದಸ್ಯರು

ಮೇಯರ್ ಮತ್ತು ಉಪಮೇಯರ್ ಚುನಾವಣೆಯಿಂದ ಬಿಜೆಪಿಯ ಎಂಟೂ ಸದಸ್ಯರು ಹೊರಗುಳಿದರು.

ಜೆಡಿಎಸ್‌ಗೆ ಬೆಷರತ್ತಾಗಿ ಬೆಂಬಲ ನೀಡುವುದಾಗಿ ಒಪ್ಪಿದ್ದರೂ ಕಾಂಗ್ರೆಸ್‌ ಜತೆ ಕೈ ಜೋಡಿಸಿದ್ದೇ ಮೇಯರ್ ಮತ್ತು ಉಪಮೇಯರ್ ಚುನಾವಣೆಯಿಂದ ಹೊರಗುಳಿಯಲು ಕಾರಣ ಎಂದು ಬಿಜೆಪಿ ಸದಸ್ಯರೊಬ್ಬರು ಹೇಳಿದರು.

ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆಯೂ ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT