ಗುರುವಾರ , ಫೆಬ್ರವರಿ 27, 2020
19 °C
ರಾಷ್ಟ್ರೀಯ ನೇಮಕಾತಿ ಸಂಸ್ಥೆ ರಚನೆ– ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾವ

ಕನ್ನಡಿಗರಿಗೆ ಉದ್ಯೋಗ ನಷ್ಟದ ಭೀತಿ

ಪಿ.ವಿ. ಪ್ರವೀಣ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನಾನ್‌ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ಕೇಂದ್ರೀಕೃತಗೊಂಡು, ಕನ್ನಡಿಗರಿಗೆ ಉದ್ಯೋಗಾವಕಾಶ ಕಡಿಮೆಯಾಗುವ ಆತಂಕ ಎದುರಾಗಿದೆ.

ಬಜೆಟ್‌ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಒಂದೇ ತೆರನಾದ ಹುದ್ದೆಗಳಿಗೆ ಬೇರೆ ಬೇರೆ ಸಂಸ್ಥೆಗಳು ಬೇರೆ ಬೇರೆ ಅವಧಿಯಲ್ಲಿ ನಡೆಸುವ ಅನೇಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಬೇಕಾದ ಸ್ಥಿತಿ ಇದೆ. ಸಮಯ, ಪ್ರಯತ್ನ ಹಾಗೂ ವೆಚ್ಚದ ಹೊರೆ ತಗ್ಗಿಸಲು ಎನ್‌ಆರ್‌ಎ ಸ್ಥಾಪಿಸುವ ಉದ್ದೇಶವಿದೆ. ಕಂಪ್ಯೂಟರ್‌ ಆಧರಿತ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸುವ ಸ್ವತಂತ್ರ, ವೃತ್ತಿಪರ ಹಾಗೂ ಪರಿಣಿತ ಸಂಸ್ಥೆ ಇದಾಗಲಿದೆ’ ಎಂದು ತಿಳಿಸಿದ್ದಾರೆ.

ಎನ್‌ಆರ್‌ಎಯಿಂದ ಅಭ್ಯರ್ಥಿಗಳಿಗೆ ನೆರವಾಗಲಿದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ ಇದು ಕನ್ನಡಿಗರು ಸೇರಿದಂತೆ ಹಿಂದಿಯೇತರ ರಾಜ್ಯಗಳ ಜನರ ಉದ್ಯೋಗಾವಕಾಶ ಕಿತ್ತುಕೊಳ್ಳಲಿದೆ ಎನ್ನುತ್ತಾರೆ ಕನ್ನಡ ಹೋರಾಟಗಾರರು.

‘ನೇಮಕಾತಿ ಕುರಿತಂತೆ ಕೇಂದ್ರ ಸರ್ಕಾರದ ನಡವಳಿಕೆಗಳು ಆಶಾದಾಯಕವಾಗಿಲ್ಲ. ಬ್ಯಾಂಕಿಂಗ್‌ ಹುದ್ದೆಗಳನ್ನು ಸ್ಥಳೀಯ ಮಟ್ಟದಲ್ಲೇ ಭರ್ತಿ ಮಾಡುತ್ತಿದ್ದಾಗ ಕನ್ನಡಿಗರಿಗೆ ಆದ್ಯತೆ ಸಿಗುತ್ತಿತ್ತು. ಬ್ಯಾಂಕ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್‌) ರಚಿಸಿ, ಸ್ಥಳೀಯರಿಗೆ ಆದ್ಯತೆ ನೀಡುವ ವ್ಯವಸ್ಥೆ ಕೈಬಿಟ್ಟ ಬಳಿಕ ಬ್ಯಾಂಕ್‌ಗಳಲ್ಲಿ ಕನ್ನಡಿಗ ಅಧಿಕಾರಿಗಳೇ ಇಲ್ಲದಂತಾಗಿದೆ’ ಎಂದು ಬನವಾಸಿ ಬಳಗದ ಅರುಣ್‌ ಜಾವಗಲ್‌ ದೂರಿದರು.

‘ಕೇಂದ್ರೀಯ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಹಾಗೂ ರೈಲ್ವೆ ನೇಮಕಾತಿ ಮಂಡಳಿಗಳು ನಡೆಸುವ ನೇಮಕಾತಿಗಳಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಐಬಿಪಿಎಸ್‌ ಹಾಗೂ ಎಸ್‌ಎಸ್‌ಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲ. ಅವರು ಅರ್ಜಿಯನ್ನೂ ಕನ್ನಡದಲ್ಲಿ
ಕರೆಯುವುದಿಲ್ಲ’ ಎಂದು ಬೊಟ್ಟುಮಾಡಿದರು.

ಉದ್ಯೋಗ ನಷ್ಟದ ಆತಂಕ ಏಕೆ?

*ಕೇಂದ್ರದ ಬಹುತೇಕ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವನ್ನೇ ನೀಡುತ್ತಿಲ್ಲ.

*ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಆನ್‌ಲೈನ್‌ ಪರೀಕ್ಷೆ ಎದುರಿಸುವಾಗ ರಾಜ್ಯದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ.

*ಕನ್ನಡದಲ್ಲಿ ಪರೀಕ್ಷೆ ಎದುರಿಸಲು ಅವಕಾಶ ಕಲ್ಪಿಸಿದರೂ, ಪ್ರಶ್ನೆಗಳನ್ನು ಅನ್ಯಭಾಷೆಯಿಂದ ತರ್ಜುಮೆ ಮಾಡಬೇಕಾಗುತ್ತದೆ. ಆರ್‌ಆರ್‌ಬಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಲ್ಲಿ ಭಾಷಾಂತರ ದೋಷದಿಂದ ಕನ್ನಡದ ಅಭ್ಯರ್ಥಿಗಳು ಗಲಿಬಿಲಿಗೊಳಗಾದ ನಿದರ್ಶನಗಳಿವೆ

***

ಎನ್‌ಆರ್‌ಎ ನಡೆಸುವ ಪರೀಕ್ಷೆಗಳಲ್ಲಿ ಆಯಾ ರಾಜ್ಯಗಳ ಭಾಷೆಗಳಿಗೂ ಹಿಂದಿಯಷ್ಟೇ ಪ್ರಾಧಾನ್ಯತೆ, ಹುದ್ದೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗಬೇಕು. ಆಗ ಎನ್‌ಆರ್‌ಎಯನ್ನು ಒಪ್ಪಬಹುದು

– ಅರುಣ್‌ ಜಾವಗಲ್‌, ಬನವಾಸಿ ಬಳಗ

ಎನ್‌ಆರ್‌ಎ ಸ್ಥಾಪನೆ ಸಮಂಜಸವಲ್ಲ. ಕೇಂದ್ರೀಕೃತ ವ್ಯವಸ್ಥೆ ಜಾರಿಯಾದರೆ ಭಾಷಾ ವೈವಿಧ್ಯ ನಶಿಸಲಿದೆ. ರಾಜ್ಯ ಸರ್ಕಾರ ಈ ಪ್ರಸ್ತಾವವನ್ನು ಒಪ್ಪಬಾರದು

– ಟಿ.ಎಸ್‌.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು