ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌ ಉಚಿತ ಊಟ ಸ್ಥಗಿತಕ್ಕೆ ವಿರೋಧ ಪಕ್ಷಗಳ ಆಕ್ಷೇಪ

ಸರ್ಕಾರದ ತೀರ್ಮಾನ ಮರುಪರಿಶೀಲಿಸುವ ಬಗ್ಗೆ 2–3 ದಿನಗಳಲ್ಲಿ ತೀರ್ಮಾನ– ಮುಖ್ಯಮಂತ್ರಿ ಯಡಿಯೂರಪ್ಪ
Last Updated 5 ಏಪ್ರಿಲ್ 2020, 2:21 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ವಿತರಿಸುತ್ತಿರುವ ಊಟ, ಉಪಾಹಾರ ದುರ್ಬಳಕೆಯಾಗುತ್ತಿದ್ದು, ಆರ್ಥಿಕ ಹೊರೆಯೂ ಹೆಚ್ಚುತ್ತಿದೆ ಎಂಬ ಕಾರಣಕ್ಕೆ ಅದನ್ನು ನಿಲ್ಲಿಸುವ ಸರ್ಕಾರದ ಕ್ರಮಕ್ಕೆ ವಿರೋಧ ಪಕ್ಷಗಳ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ಅದಕ್ಕೆ ಮುಖ್ಯಮಂತ್ರಿ ಬಿ.ಸ್‌. ಯಡಿಯೂರಪ್ಪ, ‘ಉಚಿತವಾಗಿ ಊಟ ನೀಡಬೇಕೆನ್ನುವುದು ಸರ್ಕಾರದ ನಿಲುವು ಕೂಡಾ ಹೌದು. ಈ ಬಗ್ಗೆ 2–3 ದಿನಗಳಲ್ಲಿ ತೀರ್ಮಾನಿಸಲಾಗುವುದು‘ ಎಂದಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ನಡೆದ ಬೆಂಗಳೂರಿನ ಶಾಸಕರು, ಸಂಸದರು ಮತ್ತು ಸಚಿವರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಜಮೀರ್‌ ಅಹಮದ್‌ ಖಾನ್, ಜೆಡಿಎಸ್‌ನ ಆರ್‌. ಮಂಜುನಾಥ, ‘ಇಂದಿರಾ ಕ್ಯಾಂಟೀನ್‌ ಮೂಲಕ ವಿತರಿಸುವ ಉಚಿತ ಊಟ ನಿಲ್ಲಿಸಬೇಡಿ‘ ಎಂದು ಮನವಿ ಮಾಡಿದರು.

‘ಪಾಲಿಕೆ ವತಿಯಿಂದ ಇನ್ನೂ ಹೆಚ್ಚಿನ ಊಟ ಕೊಡಿಸಬೇಕು. ಶೇ 30ರಷ್ಟು ದುರ್ಬಳಕೆ ಆಗುತ್ತಿದೆ ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಮುಚ್ಚುವುದು ಬೇಡ’ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಸಲಹೆ ನೀಡಿದರು.

‘ಸಂಚಾರಿ ವ್ಯಾನ್‌ ಮೂಲಕ ಊಟದ ವ್ಯವಸ್ಥೆ ಮಾಡಬೇಕು. ಆಗ ಜನ ಹೊರಗೆ ಬರಲ್ಲ’ ಎಂದು ಜೆಡಿಎಸ್‌ನ ಟಿ.ಎ. ಶರವಣ ಸಲಹೆ ನೀಡಿದರೆ, ‘ಇಂದಿರಾ ಕ್ಯಾಂಟೀನ್ ತೆರೆದರೆ ಜನ ಸೇರಿ ಸಮಸ್ಯೆ ಆಗುತ್ತದೆ’ ಎಂದು ಅರವಿಂದ ಲಿಂಬಾವಳಿ ದೂರಿದರು.

‘ಕೋವಿಡ್‌–19 ಸೋಂಕಿನ ನಂತರ ಆರ್ಥಿಕ ಪರಿಸ್ಥಿತಿ ಏನಾಗುತ್ತದೆ ಎಂಬ ಬಗ್ಗೆ ಪರಿಶೀಲನೆಗೆ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಬೇಕು’ ಎಂದು ಶಾಸಕ ಕೆ.ಜೆ. ಜಾರ್ಜ್‌ ಸಲಹೆ ನೀಡಿದರು.

ಕರಗ ಆಚರಣೆಗೆ ಷರತ್ತುಬದ್ಧ ಅನುಮತಿ

ಐತಿಹಾಸಿಕ ಬೆಂಗಳೂರು ಕರಗ ಸಂಪ್ರದಾಯ ಮುರಿಬಾರದು ಎಂಬ ಕಾರಣಕ್ಕೆ ಸಾಂಕೇತಿಕವಾಗಿ ಆಚರಿಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದು, ‘ರಾಜ್ಯದಲ್ಲಿ ಕೊರೊನಾ ಸೋಂಕಿನ ಭೀತಿಯಿದೆ. ಹೆಚ್ಚು ಜನರು ಸೇರದಂತೆ ಆಚರಿಸುವುದಾದರೆ ಸರ್ಕಾರದಿಂದ ಯಾವ ಅಡ್ಡಿಯೂ ಇಲ್ಲ’ ಎಂದರು

ಕಾಂಗ್ರೆಸ್ ಮುಖಂಡ ಪಿ. ಆರ್. ರಮೇಶ್, ‘ಕರಗ ಪೂಜೆಗೆ ಅವಕಾಶ ನೀಡಬೇಕು. ಯಾವ ಕಾಲದಿಂದಲೂ ಬೆಂಗಳೂರು ಕರಗ ನಿಲ್ಲಿಸಿಲ್ಲ. ಟಿಪ್ಪು ಸುಲ್ತಾನ್ ಕಾಲದಿಂದಲೂ ಆಚರಣೆ ಮಾಡಲಾಗುತ್ತದೆ. ಹಿಂದೆ ಪ್ಲೇಗ್ ರೋಗ ಬಂದಾಗಲೂ ಆಚರಣೆ ಮಾಡಲಾಗಿತ್ತು. ನಾಲ್ಕೈದು ಜನ ಸೇರಿ ಸರಳವಾಗಿ ಪೂಜೆ ಮಾಡಲು ಅನುಮತಿ ನೀಡಿ, ಟಿ.ವಿ. ನೇರಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸಬೇಕು‘ ಎಂದು ಮನವಿ ಮಾಡಿದರು.

ಅದಕ್ಕೆ ಒಪ್ಪಿದ ಮುಖ್ಯಮಂತ್ರಿ, ‘ಸಂಪ್ರದಾಯ ಮುರಿಯುವುದು ಬೇಡ, ಸರಳವಾಗಿ ಬೆಂಗಳೂರು ಕರಗ ಆಚರಿಸಿ. ನಾಲ್ಕೈದು ಜನರಿಗೆ ಮಾತ್ರ ಅವಕಾಶ ನೀಡಲಾಗುವುದು‘ ಎಂದರು.

ವಿರೋಧ ಪಕ್ಷಗಳ ಬೇಸರ: ಸಚಿವರಾದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ನಡುವೆ ಹೊಂದಾಣಿಕೆ ಇಲ್ಲದಿರುವ ಬಗ್ಗೆ ವಿರೋಧ ಪಕ್ಷಗಳ ಶಾಸಕರು ಬೇಸರ ವ್ಯಕ್ತಪಡಿಸಿದರು.

‘ಉಚಿತ ಆಹಾರ ನೀಡಲೇಬೇಕು’

ಬೆಂಗಳೂರು: ‘ಕೊರೊನಾ ಸೋಂಕಿನ ಸಮಸ್ಯೆ ಕಡಿಮೆಯಾಗುವವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಡವರಿಗೆ ಉಚಿತ ಊಟ, ತಿಂಡಿ ನೀಡಲೇಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ‘ಹಸಿದವರಿಗೆ ಅನ್ನ ನೀಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಬೇಕು’ ಎಂದು ಹೇಳಿದ್ದಾರೆ.

‘ಕೂಲಿ ಕಾರ್ಮಿಕರು, ವಲಸಿಗರು, ಬಡವರು ಹಸಿವೆಯಿಂದ ನರಳಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿತ್ತು. ಲಾಕ್‌ಡೌನ್‌ನ ಈ ಅವಧಿಯಲ್ಲಿ ಹಸಿವು ನೀಗಿಸಲು ಇವುಗಳನ್ನು ಸಮರ್ಥವಾಗಿ ಬಳಸಬಹುದಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT