ಕಾಗದದಲ್ಲೇ ಉಳಿದ ಕಾನೂನು: ಬಿಟ್ಟೇನೆಂದರೂ ಬಿಡದ ‘ಪ್ಲಾಸ್ಟಿಕ್‌ ಮಾಯೆ’

ಗುರುವಾರ , ಜೂನ್ 27, 2019
29 °C
ಉತ್ಪಾದಕರ ಕಪಿಮುಷ್ಟಿಯಲ್ಲಿ ಪ್ರಭುತ್ವ l ಕಸದಬುಟ್ಟಿಗಳಾಗುತ್ತಿವೆ ಹಳ್ಳಿಗಳು

ಕಾಗದದಲ್ಲೇ ಉಳಿದ ಕಾನೂನು: ಬಿಟ್ಟೇನೆಂದರೂ ಬಿಡದ ‘ಪ್ಲಾಸ್ಟಿಕ್‌ ಮಾಯೆ’

Published:
Updated:

ಬೆಂಗಳೂರು: ‘ಪ್ಲಾಸ್ಟಿಕ್‌’ ಮೋಹ ಜಾಲದಿಂದ ಬಿಡಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂಬುದು ಮನದಟ್ಟಾದ ಬಳಿಕ ಮಾಲಿನ್ಯಕಾರಕ ಪ್ಲಾಸ್ಟಿಕ್‌ ಉತ್ಪಾದನೆ ಮತ್ತು ಬಳಕೆಯನ್ನು ಸರ್ಕಾರ ನಿಷೇಧಿಸಿದೆ. ಆದರೆ, ಈ ನಿರ್ಬಂಧ ಕಡತದಲ್ಲೇ ಉಳಿದು, ಅನುಷ್ಠಾನ ಮರೀಚಿಕೆಯಾಗಿದೆ.

ಹಲ್ಲುಜ್ಜುವ ಟೂತ್‌ಬ್ರಷ್‌ನಿಂದ ರಾತ್ರಿ ಮಲಗಲು ಬಳಸುವ ಚಾಪೆತನಕ ಪ್ಲಾಸ್ಟಿಕ್ ಪರಿಕರಗಳು ದೈನಂದಿನ ಜೀವನದನಲ್ಲಿ ಹಾಸುಹೊಕ್ಕಾಗಿವೆ. ಬದುಕನ್ನು ‘ಸರಳ‘ಗೊಳಿಸುವ ನೆಪದಲ್ಲಿ ನಾನಾ ರೂಪ ಪಡೆದ ಪ್ಲಾಸ್ಟಿಕ್ ಇವತ್ತು ಜೀವಜಗತ್ತಿಗೆ ಸವಾಲಾಗಿ ಆಧುನಿಕ ಭಸ್ಮಾಸುರನಂತಾಗಿದೆ. ಈ ಪಿಡುಗಿನ ‘ಕಬಂಧ ಬಾಹು’ವಿನಿಂದ ತಪ್ಪಿಸಿಕೊಳ್ಳಲಾಗದೆ ಚಡಪಡಿಸುವ ಸ್ಥಿತಿ ನಿರ್ಮಾಣವಾಗಿದೆ. ನಗರ ಮತ್ತು ಪಟ್ಟಣಗಳ ಸುತ್ತಲಿನ ಹಳ್ಳಿಗಳು ಪ್ಲಾಸ್ಟಿಕ್ ಹಾವಳಿಯ ನೇರ ಪರಿಣಾಮ ಎದುರಿಸುತ್ತಿದ್ದು ಕಸದ ಬುಟ್ಟಿಗಳಂತಾಗಿ ಬದುಕು ನರಕವಾಗಿದೆ.

ಎಲ್ಲ ಬಗೆಯ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ನಿಷೇಧಿಸುವ ಸ್ಥಿತಿಯಲ್ಲಿ ಸರ್ಕಾರಗಳಿಲ್ಲ. ಉದ್ದಿಮೆಗಳಿಗೆ ಪರವಾನಗಿ ನೀಡು ವಾಗ ಒಂದಿಷ್ಟು ಹೊಣೆಗಾರಿಕೆ (ಇಪಿಆರ್‌) ನಿಗದಿಪಡಿಸಿ ಸರ್ಕಾರ ಕೈತೊಳೆದುಕೊಳ್ಳುತ್ತಿದೆ. ಆದರೆ ಉದ್ದಿಮೆಗಳು ತಮ್ಮ ಪಾಲಿನ ಜವಾಬ್ದಾರಿ ನಿಭಾಯಿಸುತ್ತಿಲ್ಲ. ಸರ್ಕಾರ ಮತ್ತು ಉದ್ದಿಮೆಗಳೆರಡೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದರಿಂದ ಸಮಸ್ಯೆ ದಿನೇ ದಿನೇ ಉಲ್ಬಣಿಸುತ್ತಿದೆ.

ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಪರಿಕರಗಳಿಗೆ ಕಡಿವಾಣ ಹಾಕದಿದ್ದರೆ ಬದುಕು ಕಷ್ಟ ಎಂಬ ಸ್ಥಿತಿ ನಿರ್ಮಾಣದ ಬಳಿಕ ನಿಷೇಧ ಅನಿವಾರ್ಯವಾಯಿತು. 2011ರಲ್ಲಿ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ 40 ಮೈಕ್ರಾನ್‌ಗಿಂತ ತೆಳ್ಳಗಿನ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ನಿಷೇಧಿಸಿತು. 2016ರಲ್ಲಿ ಮತ್ತಷ್ಟು ಬಿಗಿಗೊಳಿಸಿ 50 ಮೈಕ್ರಾನ್‌ಗಿಂತ ತೆಳುವಾದ ಪ್ಲಾಸ್ಟಿಕ್‌ ಉತ್ಪಾದನೆ ಮತ್ತು ಬಳಕೆಯನ್ನು ನಿರ್ಬಂಧಿಸಿತು.

ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಭಿತ್ತಿಪತ್ರ, ತೋರಣ, ಫ್ಲೆಕ್ಸ್‌, ಬಾವುಟ, ತಟ್ಟೆ, ಲೋಟ ಥರ್ಮಕೋಲ್‌, ಪ್ಲಾಸ್ಟಿಕ್‌ ಹಾಳೆ, ಮೈಕ್ರೊಬೀಡ್ಸ್‌ ಮುಂತಾದವುಗಳ ತಯಾರಿ, ಸರಬರಾಜು, ಸಂಗ್ರಹಣೆ, ಮಾರಾಟ ಮತ್ತು ವಿತರಣೆ ಮೇಲೆ ಸಂಪೂರ್ಣ ನಿಷೇಧ ಹೇರಿತು. ರಪ್ತು ಉದ್ದೇಶಕ್ಕೆ ಬಳಸುವ ಪ್ಲಾಸ್ಟಿಕ್‌, ಪ್ಯಾಕ್‌ ಮಾಡಿ ಸೀಲ್‌ ಮಾಡಲು ಬಳಸುವ ಪ್ಲಾಸ್ಟಿಕ್‌ ಪರಿಕರಗಳು, ಹೈನು ಉತ್ಪನ್ನಗಳ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್‌, ಅರಣ್ಯ, ತೋಟಗಾರಿಕೆ ಇಲಾಖೆ ಹಾಗೂ ನರ್ಸರಿಗಳಲ್ಲಿ ಬಳಸುವ ಪ್ಲಾಸ್ಟಿಕ್ ಚೀಲ ಮತ್ತು ಹಾಳೆಗಳಿಗೆ ಮಾತ್ರ ವಿನಾಯಿತಿ ನೀಡಲಾಯಿತು.

ನಿಯಂತ್ರಣಕ್ಕೆ ಬರುತ್ತಿಲ್ಲ ಏಕೆ?:  ತಯಾರಿಕಾ ಕಂಪನಿಗಳ ಲಾಬಿ, ಭ್ರಷ್ಟಾ ಚಾರ, ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಪ್ಲಾಸ್ಟಿಕ್ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಸರ್ಕಾರ ಜಾರಿಗೊಳಿಸಿರುವ ಕಾನೂನುಗಳ ಬಗ್ಗೆ ತಲೆಕೆಡಿಸಿ ಕೊಳ್ಳದ ಉದ್ದಿಮೆಗಳು ಉತ್ಪಾದನೆ ಹೆಚ್ಚಿಸುತ್ತಿವೆ. ನಿಯಮ ಗಳ ಲೋಪಗಳನ್ನೇ ಪ್ರತ್ಯಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ರಾಜಕಾ ರಣಿಗಳ ಕೃಪಾಕಟಾಕ್ಷವೂ ಇವುಗಳ ಮೇಲಿದೆ.

ನಿಷೇಧ ಜಾರಿಯಾದ ಆರಂಭದಲ್ಲಿ ದಾಳಿಗಳು ಜೋರಾಗಿ ಯೇ ನಡೆದವು. ಪ್ಲಾಸ್ಟಿಕ್‌ ತಯಾರಿಕಾ ಘಟಕಗಳನ್ನು ಮುಚ್ಚಿಸುವ ಹೊಣೆ ಹೊತ್ತಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 80ಕ್ಕೂ ಹೆಚ್ಚು ಘಟಕಗಳ ವಿರುದ್ಧ ಕ್ರಮ ಕೈಗೊಂಡಿತು.

ನಾವು ಆಗಾಗ ದಾಳಿ ಮಾಡಿ ಇಂತಹ ಘಟಕಗಳನ್ನು ಮುಚ್ಚಿಸುತ್ತಲೇ ಇರುತ್ತೇವೆ. ಮರುಬಳಕೆ ಪ್ಲಾಸ್ಟಿಕ್ ಉತ್ಪಾದಿಸುವ ಘಟಕಗಳಿಗೆ ಮಾತ್ರ ಅನುಮತಿ ನೀಡುತ್ತಿದ್ದೇವೆ’ ಎನ್ನುತ್ತಾರೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌.

ದಾಳಿ ವೇಳೆ, ‘ನಿಷೇಧಿತ ಪ್ಲಾಸ್ಟಿಕ್‌ ತಯಾರಿಸುತ್ತಿಲ್ಲ. ಪ್ಯಾಕೇಜಿಂಗ್‌ಗೆ ಬಳಸುವ ಪ್ಲಾಸ್ಟಿಕ್‌ ಅನ್ನು ಮಾತ್ರ ತಯಾರಿಸುತ್ತೇವೆ’ ಎಂದು ಸಬೂಬು ಹೇಳುವ ಉದ್ದಿಮೆಗಳ ಮಂದಿ ನುಣುಚಿಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಮಳಿಗೆಗಳಲ್ಲಿ ಮಾರಾಟವಾಗುತ್ತಿರುವುದು ಹೊರ ರಾಜ್ಯಗಳಿಂದ ಬರುತ್ತಿರುವ ಪ್ಲಾಸ್ಟಿಕ್‌ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ, ಅವು ರಾಜ್ಯದೊಳಗೆ ಬರದಂತೆ ತಡೆಯುವ ಅಧಿಕಾರ ಇದ್ದರೂ ಏಕೆ ಬಳಸುತ್ತಿಲ್ಲ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ. 

ಕಣ್ಣೊರೆಸುವ ತಂತ್ರ: ಸ್ಥಳೀಯ ಆಡಳಿತಗಳ ಅಧಿಕಾರಿ ಸಿಬ್ಬಂದಿ ನಡೆಸುವ ದಾಳಿಗಳು ಕಣ್ಣೊರೆಸುವ ತಂತ್ರದಂತಾಗಿವೆ. ಸಾಕಷ್ಟು ದಾಳಿ ನಡೆಸಿ ಲಕ್ಷಗಟ್ಟಲೆ ದಂಡ ವಿಧಿಸಿದರೂ ಪ್ಲಾಸ್ಟಿಕ್‌ ಮಾರಾಟ ಮತ್ತು ಬಳಕೆ ಕಡಿಮೆ ಆಗಿಲ್ಲ ಎಂಬುದನ್ನು ಭೂಭರ್ತಿ ಕೇಂದ್ರ ಸೇರುವ ತ್ಯಾಜ್ಯ ರಾಶಿಯೇ ಹೇಳುತ್ತದೆ. ದಾಳಿ ವೇಳೆ ವಶಪಡಿಸಿಕೊಂಡ ಟನ್‌ಗಟ್ಟಲೆ ಪ್ಲಾಸ್ಟಿಕ್‌ ಏನಾಗುತ್ತದೆ ಎಂಬುದು ಇನ್ನೊಂದು ಚೋದ್ಯ.

‘ವಶಪಡಿಸಿಕೊಂಡಿದ್ದನ್ನು ಮರು ಬಳಕೆ ಉತ್ಪನ್ನ ತಯಾರಿಸುವ ಹಾಗೂ ಕಸ ಆಯುವ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ನೀಡುತ್ತೇವೆ’ ಎಂದು ಪಾಲಿಕೆ ಅಧಿಕಾರಿ ಸಮರ್ಥಿಸಿಕೊಳ್ಳುತ್ತಾರೆ. ಆದರೆ, ವಶಪಡಿಸಿಕೊಂಡ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳು ಮರಳಿ ಅಂಗಡಿಗಳನ್ನು ತಲುಪುತ್ತಿರುವುದು ಗುಟ್ಟಾಗಿ ಉಳಿದಿಲ್ಲ.  ‘ಮಾಮೂಲಿ’ ತಲುಪಿಸಿದರೆ ಸಾಕು ಏನು ಬೇಕಾದರೂ ಮಾಡಬಹುದು ಯಾರೂ ಕೇಳುವುದಿಲ್ಲ ಎಂಬ ಸ್ಥಿತಿ ಇರುವುದರಿಂದಲೇ ಬಹುತೇಕ ನಗರ/ ಪಟ್ಟಣಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳು ಎಗ್ಗಿಲ್ಲದೇ ಮಾರಾಟವಾಗುತ್ತಿವೆ.

ಕಡಿವಾಣ ಸಾಧ್ಯ?: ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಬಳಿಕ ಬೆಂಗಳೂರು ನಗರದ ಎಲ್ಲ ಫ್ಲೆಕ್ಸ್‌ಗಳನ್ನು ಪಾಲಿಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ತೆರವುಗೊಳಿಸಿದ ಉದಾಹರಣೆ  ಕಣ್ಣ ಮುಂದಿದೆ. ನಿಷೇಧಿತ ಪ್ಲಾಸ್ಟಿಕ್‌ ವಿಚಾರದಲ್ಲೂ ಇಂತಹ ಕ್ರಮಕ್ಕೆ ಇಚ್ಛಾ ಶಕ್ತಿ ಅಗತ್ಯವಿದೆ. ಈಗಲೂ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯೋನ್ಮುಖವಾದರೆ ಮಾತ್ರ ನಿಯಂತ್ರಣ ಸಾಧ್ಯ.

2022ರೊಳಗೆ ಮುಕ್ತಿ....?

ದೇಶದ ಬಹುತೇಕ ನಗರಗಳ ಭೂಭರ್ತಿ ತಾಣಗಳೆಲ್ಲ ಪ್ಲಾಸ್ಟಿಕ್‌ ತ್ಯಾಜ್ಯದಿಂದ ತುಂಬಿ ತುಳುಕುತ್ತಿವೆ. ಈ ಸಮಸ್ಯೆಯಿಂದ ಹೊರಬರುವ ಸಂಕಲ್ಪ ಮಾಡಿರುವ ಕೇಂದ್ರ ಸರ್ಕಾರ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಪರಿಕರಗಳಿಂದ 2022ರ ಒಳಗೆ ಮುಕ್ತಿ ಪಡೆಯುವುದಾಗಿ ಘೋಷಿಸಿಕೊಂಡಿತ್ತು. 2018ರ ಜೂನ್‌ 5ರ ವಿಶ್ವ ಪರಿಸರ ದಿನದಂದು ಕೇಂದ್ರ ಪರಿಸರ ಸಚಿವ ಡಾ.ಹರ್ಷವರ್ಧನ್‌, ‘ಪ್ಲಾಸ್ಟಿಕ್‌ ಹಾವಳಿಯ ಅವನತಿ ಆರಂಭವಾಗಿದೆ’ ಎಂದು ಹೇಳಿಕೆ ಕೊಟ್ಟಿದ್ದರು. ಇದಾಗಿ ವರ್ಷ ಉರುಳಿದೆ. ಗುರಿ ಸಾಧಿಸುವ ಯಾವ ಲಕ್ಷಣಗಳೂ ಸದ್ಯಕ್ಕೆ ಕಾಣಿಸುತ್ತಿಲ್ಲ.

ಸಮನ್ವಯ ಕೊರತೆ....

ನಿಷೇಧದ ನಿಯಮ ಜಾರಿ ಅಧಿಕಾರವನ್ನು ನಾನಾ ಇಲಾಖೆಗಳಿಗೆ ವಹಿಸಲಾಗಿದೆ. ಬಿಬಿಎಂಪಿ ಆಯುಕ್ತರು, ಜಂಟಿ ಆಯುಕ್ತರು, ಕಂದಾಯ ಅಧಿಕಾರಿಗಳು, ಸಾರ್ವಜನಿಕ ಆರೋಗ್ಯಾಧಿಕಾರಿಗಳು, ಎಂಜಿನಿಯರ್‌ಗಳು, ಜಿಲ್ಲಾಧಿಕಾರಿಗಳು, ನಗರಾಡಳಿತ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು, ಆರೋಗ್ಯಾಧಿಕಾರಿಗಳು, ಎಂಜಿನಿಯರ್‌ಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ, ಉಪ ಪರಿಸರ ಅಧಿಕಾರಿ, ಪರಿಸರ ಅಧಿಕಾರಿ ಹಾಗೂ ಹಿರಿಯ ಪರಿಸರ ಅಧಿಕಾರಿ, ಕಂದಾಯ ಉಪವಿಭಾಗಗಳ ಆಯುಕ್ತರು, ತಹಶೀಲ್ದಾರರು, ವಾಣಿಜ್ಯ ತೆರಿಗೆ ಅಧಿಕಾರಿ, ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ, ತೂಕ ಮಾಪನ ಮತ್ತು ಅಳತೆ ಇಲಾಖೆ ನಿಯಂತ್ರಕರು, ಉಪ ನಿಯಂತ್ರಕರು, ಪ್ರಾದೇಶಿಕ ಅಧಿಕಾರಿಗಳಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಪ್ಲಾಸ್ಟಿಕ್‌ ವಸ್ತುಗಳ ಮಾರಾಟ ತಡೆಯುವ ಅಧಿಕಾರವನ್ನು 2018ರಲ್ಲಿ ಪೊಲೀಸ್‌ ಇಲಾಖೆಗೂ ವಿಸ್ತರಿಸಲಾಗಿದೆ. ಕಣ್ಣಿಗೆ ಕಾಣುವಂತೆ ನಿಷೇಧಿತ ಪ್ಲಾಸ್ಟಿಕ್‌ ಮಾರಾಟವಾಗುತ್ತಿದ್ದರೂ ಈ ಇಲಾಖೆಗಳ ಎಷ್ಟು ಮಂದಿ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಎಂಬುದುಪ್ರಶ್ನೆ. ಬಹುತೇಕರು ನಿಷೇಧಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಬಳಕೆದಾರರನ್ನೂ ಶಿಕ್ಷಿಸಬೇಕು

‘ಸದ್ಯ ಪ್ಲಾಸ್ಟಿಕ್‌ ನಿಷೇಧ ಕುರಿತ ನಿಯಮಗಳಲ್ಲಿ ತಯಾರಕರು ಹಾಗೂ ಮಾರಾಟಗಾರರನ್ನು ದಂಡಿಸಲು ಮಾತ್ರ ಅವಕಾಶವಿದೆ. ಎಲ್ಲಿಯವರೆಗೆ ಪ್ಲಾಸ್ಟಿಕ್‌ ಬಳಕೆದಾರರನ್ನೂ ದಂಡಿಸುವ ಕಠಿಣ ಕಾನೂನು ಜಾರಿಯಾಗುವುದಿಲ್ಲವೊ ಅಲ್ಲಿಯವರೆಗೆ ಈ ಹಾವಳಿಯನ್ನು ಸಂಪೂರ್ಣ ಹತ್ತಿಕ್ಕುವುದು ಕಷ್ಟ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು.

ತಿಪ್ಪೆಗುಂಡಿ ವ್ಯವಸ್ಥೆ ಪರಿಹಾರ

‘ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ ವ್ಯಾಪಕವಾಗಿದ್ದು 1990ರ ದಶಕದ ಬಳಿಕ. ಆಗ ಕಸದ ಪರಿಕಲ್ಪನೆ ಇರಲಿಲ್ಲ. ಮನೆಯಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯ ತಿಪ್ಪೆಗುಂಡಿ ಸೇರಿ ಗೊಬ್ಬರವಾಗುತ್ತಿತ್ತು. ಈಗ ಮತ್ತೆ ಅದೇ ವ್ಯವಸ್ಥೆ ಅಳವಡಿಸಿಕೊಳ್ಳಬೇಕು, ಹಸಿ ಕಸ ಬೆರೆತಿರದ ಪ್ಲಾಸ್ಟಿಕ್‌ಗೆ ಮೌಲ್ಯ ಇದೆ. ಪ್ಲಾಸ್ಟಿಕ್‌ ಕಸವನ್ನು ಇಂಧನವಾಗಿ ಬಳಸುವ ಸಿಮೆಂಟ್‌ ಕಾರ್ಖಾನೆಗಳು ಇಂತಹ ಎಷ್ಟೇ ತ್ಯಾಜ್ಯ ನೀಡಿದರೂ ಖರೀದಿಗೆ ಸಿದ್ಧ ಇವೆ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌.

ಇವನ್ನೂ ಓದಿ

ರಾಕ್ಷಸರೂಪಿ ಪ್ಲಾಸ್ಟಿಕ್‌ಗೆ ನಿಷೇಧವೆಂಬ ಮೊಂಡು ಅಸ್ತ್ರ

‘ಸ್ವಚ್ಛ ನಗರಿ’ಯಲ್ಲೂ ತಪ್ಪದ ಪ್ಲಾಸ್ಟಿಕ್ ಕಾಟ

ಪ್ಲಾಸ್ಟಿಕ್ ನಿಷೇಧ ಜಾರಿಯಿಲ್ಲ!

ಏನಿದು ಪ್ಲಾಸ್ಟಿಕ್‌? ಏಕೆ ಅಪಾಯಕಾರಿ?

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !