ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ| ಕಿರುಕುಳಕ್ಕೆ ಜಾತಿಯೇ ಕಾರಣವೇ?

Last Updated 18 ಜೂನ್ 2019, 17:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹರಿಯಾಣದ ರೋಹ್ಟಕ್‌ನ ಪಿಜಿಐಎಂಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ (ಎಂ.ಡಿ) ಪದವಿ ಓದುತ್ತಿದ್ದ ಹುಬ್ಬಳ್ಳಿಯ ಡಾ.ಓಂಕಾರ ಬರಿದಾಬಾದ್‌ ಆತ್ಮಹತ್ಯೆ ಪ್ರಕರಣದಲ್ಲಿ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ಗೀತಾ ಘಟವಾಳ ಎಂಬುವವರನ್ನು ಅಮಾನತು ಮಾಡಲಾಗಿದೆ. ಈ ನಡುವೆ ಜಾತಿ ಕಾರಣಕ್ಕಾಗಿಯೇ ಅವನಿಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಪೋಷಕರು ಇಲ್ಲಿ ಆರೋಪಿಸಿದ್ದಾರೆ.

‘ಓಂಕಾರ ಮಂಡಿಸಿದ್ದ ಪ್ರಬಂಧಕ್ಕೆ ಒಪ್ಪಿಗೆ ನೀಡಿರಲಿಲ್ಲ. ಜೊತೆಗೆ ಅವನ ಸಹೋದರಿ ಮದುವೆಗೂ ರಜೆ ನೀಡದೆ ಕಿರುಕುಳ ನೀಡಿದ್ದರು’ ಎಂದು ಓಂಕಾರ ಪೋಷಕರು ದೂರಿದ್ದರು. ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಸಹಪಾಠಿಗಳು ಸಹ ಪ್ರತಿಭಟನೆ ನಡೆಸಿದ್ದರು.

ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕಾಲೇಜಿನ ಆಡಳಿತ ಮಂಡಳಿಯು ಓಂಕಾರ ಅಧ್ಯಯನ ಮಾಡುತ್ತಿದ್ದ ವಿಭಾಗದ ಮುಖ್ಯಸ್ಥೆ ಗೀತಾ ಅವರನ್ನು ಅಮಾನತು ಮಾಡಿ, ಘಟನೆ ಬಗ್ಗೆ ಆಂತರಿಕ ತನಿಖೆಗೆ ಸಮಿತಿ ರಚಿಸುವುದಾಗಿ ಘೋಷಿಸಿದೆ ಎಂದು ಓಂಕಾರ ಸಹಪಾಠಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಲೇಜಿನ ಮಕ್ಕಳ ವಾರ್ಡ್‌ಗೆ ಡಾ.ಓಂಕಾರ ಅವರ ಹೆಸರಿಡಲೂ ಒಪ್ಪಿಗೆ ಸೂಚಿಸಲಾಗಿದೆ. ಜತೆಗೆ ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡುವಂತೆ ಪತ್ರ ಬರೆಯಲು ನಿರ್ಧರಿಸಿದೆ. ಆತ್ಮಹತ್ಯೆ ಪ್ರಕರಣ ಕುರಿತು ತನಿಖೆ ನಡೆಸಲು ಪೊಲೀಸರೂ ವಿಶೇಷ ತನಿಖಾ ದಳ ರಚಿಸಿದ್ದಾರೆ ಎಂದರು.

‘ಕಿರುಕುಳಕ್ಕೆ ಜಾತಿಯೇ ಕಾರಣ’: ‘ಆರೇಳು ತಿಂಗಳಿನಿಂದ ಡಾ.ಗೀತಾ ಕಿರುಕುಳ ನೀಡುತ್ತಿದ್ದಾರೆ ಎಂದು ಒಂದೆರಡು ಬಾರಿ ನಮ್ಮ ಬಳಿ ಹೇಳಿದ್ದ. ಜಾತಿ ಹೆಸರಿನಲ್ಲಿ ನಿಂದಿಸುತ್ತಿದ್ದರು ಎಂದಿದ್ದ. ಮೀಸಲಾತಿಯಡಿ (ಪರಿಶಿಷ್ಟ ಪಂಗಡ) ಬಂದಿದ್ದೀಯಾ, ನಿಮ್ಮಂತಹವರಿಗೆ ಪ್ರಬಂಧ ಬರೆಯಲು ಬರುವುದಿಲ್ಲ ಎನ್ನುತ್ತಿದ್ದರು ಎಂಬುದನ್ನು ಓಂಕಾರ್‌ ನಮಗೆ ತಿಳಿಸಿದ್ದ’ ಎಂದು ತಂದೆ ಮಾಣಿಕ್ ಹಾಗೂ ತಾಯಿ ಪ್ರೇಮಲಾ ಬರಿದಾಬಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಹೋದರಿ ಮದುವೆಗೆ ರಜೆ ಕೇಳಿದರೂ ನೀಡಿರಲಿಲ್ಲ. ಜೂನ್‌ 23ರಂದು ಇದ್ದ ಆರತಕ್ಷತೆಗೂ ರಜೆ ನೀಡಲಾಗುವುದಿಲ್ಲ ಎಂದಿದ್ದರು. ಇದರಿಂದ ಅವನ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಿತ್ತು. ಅವನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ. ಅವನನ್ನು ಕೊಲೆ ಮಾಡಲಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT