ಶನಿವಾರ, ಜೂಲೈ 11, 2020
29 °C

ಸರ್ಕಾರಿ ವಸತಿ ಶಾಲೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ 19ರ ಹಿನ್ನೆಲೆಯಲ್ಲಿ ಮುಂದೂಡಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಬರೆಯಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ವಸತಿ ಶಾಲೆಗಳ  20,928 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ನೂತನವಾಗಿ ಪ್ರಾರಂಭಿಸಿರುವ ಆನ್‍ಲೈನ್ ತರಗತಿಗೆ ಉಪಮುಖ್ಯಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಶುಕ್ರವಾರ ಚಾಲನೆ ನೀಡಿದರು.

ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಮೂಲಕ ಆನ್ಲೈನ್ ತರಗತಿಗಳನ್ನು ನೇರವಾಗಿ ಪ್ರಸಾರ ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಮೊಬೈಲ್, ಟ್ಯಾಬ್, ಕಂಪ್ಯೂಟರ್‍ಗಳಲ್ಲಿ ವೀಕ್ಷಿಸಿ, ಸಮಸ್ಯೆ ಇದ್ದರೆ ಶಿಕ್ಷಕರೊಂದಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಳ್ಳಬಹುದಾಗಿದೆ. ಶಿಕ್ಷಕರು ಮಾಡಿದ ಉಪನ್ಯಾಸಗಳು ರೆಕಾರ್ಡ್ ಆಗಿರುವ ಕಾರಣ ವಿದ್ಯಾರ್ಥಿಗಳು ತಮಗೆ ಅಗತ್ಯವೆನಿಸಿದಾಗಲೆಲ್ಲಾ ಕೇಳಿ ಪರಿಹರಿಸಿಕೊಳ್ಳಬಹುದು. ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆಯಬೇಕು ಎಂದು ಹಾರೈಸಿದರು.  

ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮ ರೀತಿಯ ಪೂರ್ವಸಿದ್ದತೆ  ಕೈಗೊಳ್ಳಬೇಕು. ಕಳೆದ ವರ್ಷ ಶೇ 95 ರಷ್ಟಿತ್ತು. ಈ ವರ್ಷ ಶೇ 100 ರಷ್ಟು ಫಲಿತಾಂಶ ದೊರಕುವಂತೆ ಶ್ರಮವಹಿಸಬೇಕು. ಕಳೆದ 2 ತಿಂಗಳಿಂದ ಮನೆಯಲ್ಲಿ ಮಕ್ಕಳು ಅಭ್ಯಾಸ ಮಾಡುತ್ತಿರುವುದರಿಂದ ಹೆಚ್ಚು ಕಾಳಜಿ ವಹಿಸಬೇಕು. ಉತ್ತಮ ಮಾರ್ಗದರ್ಶನದೊಂದಿಗೆ ತಯಾರಿ ನಡೆಸಿ,ಉತ್ತಮ ಸಾಧನೆ ಮಾಡುವ ಮೂಲಕ ಸಮಾಜ ಕಲ್ಯಾಣ  ಇಲಾಖೆ, ಸರ್ಕಾರಕ್ಕೆ ಹಾಗೂ  ತಂದೆ-ತಾಯಿಯವರಿಗೆ ಕೀರ್ತಿ ತರುವಂತೆ ಶ್ರಮವಹಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

  ಕೋವಿಡ್ 19  ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗೆ ತೆರಳಿ 10 ನೇ ತರಗತಿ ಪರೀಕ್ಷೆಗೆ ಸಿದ್ದತೆಯಲ್ಲಿ ತೊಡಗಿದ್ದಾರೆ. ಮನೆಯಲ್ಲಿ ಸ್ವಂತ ಅಧ್ಯಯನ ನಿರತರಾಗಿರುವ ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ, ಸೂಚನೆ ನೀಡಲು ಪ್ರತಿ 8 ವಿದ್ಯಾರ್ಥಿಗಳ ತಂಡ ರಚಿಸಿ, ಪ್ರತಿ ತಂಡಕ್ಕೆ ಒಬ್ಬ ಶಿಕ್ಷಕರನ್ನು ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ. ವಿದ್ಯಾರ್ಥಿಗಳ ವಾಟ್ಸ್ ಆಪ್ ಗ್ರೂಪ್ ರಚನೆ ಮಾಡಿ ಪ್ರತಿ ದಿನ ವಿದ್ಯಾರ್ಥಿಗಳಿಗೆ ಅಗತ್ಯವಾದ ಅಧ್ಯಯನ ಸಾಮಗ್ರಿಗಳು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿ ಮೌಲ್ಯಮಾಪನ ಮಾಡಿ, ಫಲಿತಾಂಶ ನೀಡಲಾಗುತ್ತಿದೆ.

ಈ ಶಿಕ್ಷಣ ಸಂಸ್ಥೆಗಳ ಸಂಘದಿಂದ ಪ್ರತ್ಯೇಕವಾದ ಯೂ ಟೂಬ್ ಚಾನಲ್, ಇ-ವಸಂತಿ ಶಾಲೆ ಎನ್ನುವ ಆಪ್ ಹಾಗೂ ಭವಿಷ್ಯದ ಆನ್ ಲೈನ್ ಕ್ಲಾಸ್ ನಡೆಸಲು ಆನ್ ಲೈನ್ ಮಾಸ್ಟರ್ ಸ್ಟುಡಿಯೋ ತೆರೆಯಲು ಕ್ರಮಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಆಧಾರದ ಮೇಲೆ ಜಾಗತಿಕ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಾದ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು