ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಮೂಲಕ ಮತದಾರರಿಗೆ ‘ಆಮಿಷ’

ಹಣ ಹಂಚಲು ಹೊಸ ದಾರಿ ಕಂಡುಕೊಂಡ ಅಭ್ಯರ್ಥಿಗಳು
Last Updated 30 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಮೈಸೂರು: ಚುನಾವಣಾ ಅಕ್ರಮ ತಡೆಗಟ್ಟಲು ಚುನಾವಣಾಧಿಕಾರಿಗಳು, ವೀಕ್ಷಕರು ಹದ್ದಿನ ಕಣ್ಣು ಇಟ್ಟಿರುವ ನಡುವೆಯೇ ಅಭ್ಯರ್ಥಿಗಳು ಡಿಜಿಟಲ್‌ ವ್ಯವಸ್ಥೆ ಮೂಲಕ ಮತದಾರರಿಗೆ ಹಣ ವಿತರಿಸಲು ಮುಂದಾಗಿದ್ದಾರೆ.

ನೇರವಾಗಿ ಹಣ ಹಂಚಿಕೆ ಸಾಧ್ಯವಾಗದ ಪ್ರದೇಶಗಳಲ್ಲಿ ಮೊಬೈಲ್‌ನಲ್ಲಿ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಸೇರಿದಂತೆ ಹಲವಾರು ಆ್ಯಪ್‌ಗಳ ಮೂಲಕ ಮತದಾರರ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಲು ಅಭ್ಯರ್ಥಿಗಳ ಆಪ್ತರು ಸಿದ್ಧತೆ ನಡೆಸುತ್ತಿದ್ದಾರೆ.

ಈ ಸಂಬಂಧ ಅಭ್ಯರ್ಥಿ ಬೆಂಬಲಿಗರು ಮಂಡ್ಯ, ಮೈಸೂರು–ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರಗಳ ಮತದಾರರ ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆ ಕಲೆ ಹಾಕುತ್ತಿರುವ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಅಲ್ಲದೇ, ಮೈಸೂರಿನ ಹೋಟೆಲ್‌ವೊಂದರಲ್ಲಿ ಕುಳಿತು ಈ ಕಾರ್ಯಾಚರಣೆ ನಡೆಸುತ್ತಿರುವುದು ತಿಳಿದು ಬಂದಿದೆ.

ಬ್ಯಾಂಕ್‌ ಖಾತೆಗಳ ಮೇಲೆ ಚುನಾವಣಾ ಆಯೋಗ ನಿಗಾ ಇಟ್ಟಿರುವುದರಿಂದ ಅಭ್ಯರ್ಥಿಗಳ ಖಾತೆಯಿಂದ ಯಾವುದೇ ವ್ಯವಹಾರ ನಡೆಯುವುದಿಲ್ಲ. ಬದಲಾಗಿ ಸಂಬಂಧಿಕರು, ನಂಬಿಕಸ್ತರು, ಉದ್ಯಮಿಗಳು, ಅಧಿಕಾರಿಗಳು, ಬೂತ್‌ ಮಟ್ಟದ ಮುಖಂಡರನ್ನು ನಿಯೋಜಿಸಲಾಗಿದೆ. ಜೊತೆಗೆ ಕೆಲವರ ಬ್ಯಾಂಕ್‌ ಖಾತೆಗಳಿಗೆ ಈಗಾಗಲೇ ಹಣ ಸಂದಾಯ ಮಾಡಲಾಗಿದೆ. ಒಬ್ಬರು ಕನಿಷ್ಠ 20ರಿಂದ 25 ಮತದಾರರಿಗೆ ಮೊಬೈಲ್‌ ಆ್ಯಪ್‌ ಮೂಲಕ ತಲಾ ₹ 2 ಸಾವಿರ ವರ್ಗಾವಣೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಆಯೋಗ ಚಾಪೆ ಕೆಳಗೆ ನುಗ್ಗಿದರೆ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳಲು ಎಲ್ಲಾ ಏರ್ಪಾಟು ಮಾಡಿಕೊಂಡಿದ್ದಾರೆ.

ಈಗಷ್ಟೇ ಈ ಪ್ರಕ್ರಿಯೆ ಆರಂಭವಾಗಿದೆ. ಆನ್‌ಲೈನ್‌ ವರ್ಗಾವಣೆಯಿಂದ ಸಿಕ್ಕಿಬೀಳುವ ಭಯ ಇರುವುದಿಲ್ಲ ಎಂಬ ವಿಚಾರ ಒಂದೆಡೆಯಾದರೆ, ಮತದಾರರಿಗೆ ಹಣ ತಲುಪಿರುವುದಕ್ಕೆ ಸಾಕ್ಷಿ ಸಿಗಲಿದೆ. ಹಣ ಮಧ್ಯವರ್ತಿಗಳ ಪಾಲಾಗುವುದು ತಪ್ಪುತ್ತದೆ ಎಂಬುದು ಅಭ್ಯರ್ಥಿಗಳ ನಂಬಿಕೆ.

‘ವಿಧಾನಸಭೆ ಚುನಾವಣೆ ವೇಳೆ ಮತದಾರರಿಗೆ ಹಂಚಲು ನೀಡಿದ್ದ ಹಣಕ್ಕೆ ಲೆಕ್ಕಸಿಕ್ಕಿರಲಿಲ್ಲ. ಮತದಾರರಿಗೂ ತಲುಪಿರಲಿಲ್ಲ. ಮಧ್ಯವರ್ತಿಗಳ ಪಾಲಾಗಿತ್ತು. ಹೀಗಾಗಿ, ಅಭ್ಯರ್ಥಿಗಳು ಎಚ್ಚೆತ್ತುಕೊಂಡಿದ್ದಾರೆ. ಹೆಚ್ಚಿನವರು ಬ್ಯಾಂಕ್‌ ಖಾತೆ ಹೊಂದಿರುವುದರಿಂದ ಹಣ ವರ್ಗಾವಣೆ ಸುಲಭವಾಗುತ್ತದೆ’ ಎಂದು ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಅಭ್ಯರ್ಥಿಯ ಬೆಂಬಲಿಗರೊಬ್ಬರು ಹೇಳುತ್ತಾರೆ.

*ಚುನಾವಣೆ ವೇಳೆ ಮೊಬೈಲ್‌ ಆ್ಯಪ್‌ಗಳಲ್ಲಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ಮೇಲೆ ನಿಗಾ ಇಡುವುದು ಕಷ್ಟ. ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು

- ಅಭಿರಾಂ ಜಿ.ಶಂಕರ್‌, ಜಿಲ್ಲಾ ಚುನಾವಣಾಧಿಕಾರಿ, ಮೈಸೂರು

*ಅನುಮಾನಾಸ್ಪದ ವಹಿವಾಟಿನ ಬಗ್ಗೆ ಚುನಾವಣಾಧಿಕಾರಿಗೆ ಮಾಹಿತಿ ನೀಡಲಾಗುವುದು. ಆದರೆ, ಮೊಬೈಲ್‌ ಆ್ಯಪ್‌ಗಳಲ್ಲಿ ಹಣ ವರ್ಗಾವಣೆ ನಮ್ಮ ವ್ಯಾಪ್ತಿಗೆ ಬರಲ್ಲ

- ವೆಂಕಟಾಚಲಪತಿ, ವ್ಯವಸ್ಥಾಪಕ, ಲೀಡ್‌ ಬ್ಯಾಂಕ್‌, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT