ಗುರುವಾರ , ಫೆಬ್ರವರಿ 25, 2021
31 °C
ಸರಣಿ ರಾಜೀನಾಮೆಯ ಪ್ರಹಸನ: ಬಿಜೆಪಿಯ ಹೊಸ ಕಾರ್ಯತಂತ್ರ

ಸದ್ದಿಲ್ಲದೆ ‘ಆಪರೇಷನ್‌’ಗೆ ಎರಡು ವಿಕೆಟ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸಕ ಆನಂದ್ ಸಿಂಗ್‌ ರಾಜೀನಾಮೆಯ ಬೆನ್ನಲ್ಲೇ ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಅವರೂ ರಾಜೀನಾಮೆ ಪ್ರಕಟಿಸಿದ್ದಾರೆ. ಸರಣಿ ರಾಜೀನಾಮೆಯ ಪ್ರಹಸನದಿಂದ ಬಿಜೆಪಿಯ ‘ಆಪರೇಷನ್‌ ಕಮಲ’ ಕಾರ್ಯತಂತ್ರದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಬಿಜೆಪಿಯ ಬಹುತೇಕ ಎಲ್ಲ ನಾಯಕರು ‘ಆಪರೇಷನ್‌ ಕಮಲ’ ನಡೆಸುತ್ತಿಲ್ಲ ಎಂದು ಹೇಳುತ್ತಿದ್ದರೂ, ಅತೃಪ್ತ ಶಾಸಕರು ರಾಜೀನಾಮೆ ನೀಡಿ ಹೊರಬಂದು ಬಿಜೆಪಿ ಸರ್ಕಾರ ರಚನೆಗೆ ನೆರವು ನೀಡುವುದು ಖಚಿತ ಎಂದು ಗುಟ್ಟಾಗಿ ಹೇಳುತ್ತಾರೆ. ‘ಈ ಬಾರಿ ಆಗಸ್ಟ್‌ 15ರಂದು ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಧ್ವಜಾರೋಹಣ ಮಾಡುತ್ತಾರೆ’ ಎಂದು ಅಷ್ಟೇ ದೃಢ ಮಾತುಗಳಲ್ಲಿ ಹೇಳುತ್ತಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿರುವ 20ಕ್ಕೂ ಹೆಚ್ಚು ಅತೃಪ್ತರು ಬಿಜೆಪಿ ಜತೆ ಕೈಜೋಡಿಸಲು ಸಿದ್ಧರಿದ್ದಾರೆ ಎಂಬ ಮಾಹಿತಿ ಹೊಂದಿರುವ ವರಿಷ್ಠರು, ಈ ಬಾರಿ ಬೇರೆಯದೇ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ.

‘ಈ ಬಾರಿ ಆಪರೇಷನ್‌ ಕಮಲದ ಜವಾಬ್ದಾರಿಯನ್ನು ಕೇಂದ್ರ ಸಚಿವ ಪೀಯೂಷ್‌ ಗೋಯೆಲ್‌ ಅವರಿಗೆ ವಹಿಸಲಾಗಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಅರವಿಂದ ಲಿಂಬಾವಳಿ ಅವರಿಗೆ ಮಾತ್ರ ಕಾರ್ಯಾಚರಣೆಯ ಮಾಹಿತಿ ಸಿಗುತ್ತದೆ. ಪಕ್ಷ ತೊರೆದು ಬರಲು ಸಿದ್ಧರಿರುವ ಸಾಕಷ್ಟು ಅತೃಪ್ತ ಶಾಸಕರು ಈ ಮೂವರ ಜತೆ ಮಾತುಕತೆ ನಡೆಸಿದ್ದಾರೆ’ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಆಪರೇಷನ್‌ ಕಮಲದ ಬಗ್ಗೆ ಬಿಜೆಪಿಯ ಹೆಚ್ಚಿನ ನಾಯಕರಿಗೆ ಮಾಹಿತಿ ಇಲ್ಲ. ಅಲ್ಲದೆ, ಕಾರ್ಯತಂತ್ರವನ್ನು ಬದಲಿಸಲಾಗಿದೆ. ರಾಜೀನಾಮೆ ಪರ್ವಕ್ಕೆ ಆನಂದ್‌ಸಿಂಗ್‌ ರಾಜೀನಾಮೆ ಮುನ್ನುಡಿಯಾಗಿದೆ. ಎಲ್ಲ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡುವುದಕ್ಕೆ ಬದಲು, ಹಂತ–ಹಂತವಾಗಿ ಒಬ್ಬೊಬ್ಬರೇ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಶಾಸಕರಿಗೆ ಕಾನೂನು ಬಿಕ್ಕಟ್ಟು ಎದುರಾಗದಂತೆಯೂ ನೋಡಿಕೊಳ್ಳಬಹುದು ಎಂದು ಬಿಜೆಪಿ ಲೆಕ್ಕಾಚಾರ.

ಕಾಂಗ್ರೆಸ್‌ ಅತೃಪ್ತರ ಜತೆ ಗುರುತಿಸಿಕೊಳ್ಳದ ಆನಂದ್‌ಸಿಂಗ್‌, ‘ಜಿಂದಾಲ್‌ ವಿಚಾರ ಮುಂದಿಟ್ಟುಕೊಂಡು ರಾಜೀನಾಮೆ ನೀಡಿದರು. ತಮ್ಮ ರಾಜೀನಾಮೆಗೂ ಆಪರೇಷನ್‌ ಕಮಲಕ್ಕೂ ಸಂಬಂಧವೇ ಇಲ್ಲ’ ಎಂಬ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಬಿಜೆಪಿಯೂ ಆನಂದ್‌ ರಾಜೀನಾಮೆಯನ್ನು ಅದು ಅವರ ವೈಯಕ್ತಿಕ ನಿರ್ಧಾರ ಎಂಬಂತೆ ಹೇಳಿಕೆ ನೀಡಿದೆ.

ಬಿಜೆಪಿ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ ಜತೆ ಮಾತನಾಡಿ, ‘ನಾವು ಆಪರೇಷನ್‌ ಕಮಲ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅಂತಹ ಯಾವುದೇ ಸಾಹಸಕ್ಕೆ ಕೈಹಾಕದಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಆದರೆ, ಬಹುತೇಕ ಅತೃಪ್ತ ಶಾಸಕರು ಈ ತಿಂಗಳೊಳಗೆ ರಾಜೀನಾಮೆ ನೀಡುತ್ತಾರೆ. ಕುಮಾರಸ್ವಾಮಿ ಸರ್ಕಾರ ಪತನ ಆಗುವುದು ನಿಶ್ಚಿತ. ಆಗಸ್ಟ್‌ 15ರಂದು ಧ್ವಜಾರೋಹಣ ನಮ್ಮ ಮುಖ್ಯಮಂತ್ರಿಯೇ (ಯಡಿಯೂರಪ್ಪ) ಮಾಡುತ್ತಾರೆ’ ಎಂದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಅಸಮಾಧಾನಗೊಂಡಿರುವ ಶಾಸಕರು ಲೋಕಸಭಾ ಚುನಾವಣೆ ಫಲಿತಾಂಶಕ್ಕಾಗಿ ಕಾದು ಕುಳಿತ್ತಿದ್ದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೆ ಏನು ಮಾಡುವುದು ಎಂಬ ಅಳಕು ಅವರಲ್ಲಿತ್ತು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿ ಅಭೂತಪೂರ್ವ ಜಯಭೇರಿ ಬಾರಿಸಿರುವುದು ಅತೃಪ್ತರಲ್ಲಿ ಧೈರ್ಯ ತಂದಿದೆ. ಈ ಕ್ಷಣದಲ್ಲಿ ಚುನಾವಣೆ ನಡೆದರೂ ಬಿಜೆಪಿಗೆ ಅನುಕೂಲಕರ ಎಂಬ ವಾತಾವರಣ ಇರುವುದು ಅತೃಪ್ತ ಶಾಸಕರ ಧೈರ್ಯಕ್ಕೆ ಕಾರಣ’ ಎಂದು ಅವರು ಹೇಳಿದರು.

‘ಮೈತ್ರಿ ಪತನವಾದರೆ ನಮ್ಮದೇ ಸರ್ಕಾರ’

ಮೈತ್ರಿ ಸರ್ಕಾರ ತಾನಾಗಿಯೇ ಪತನವಾದರೆ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಮೈತ್ರಿ ಸರ್ಕಾರದ ಪತನಕ್ಕೆ ಯಾವುದೇ ತಂತ್ರಗಾರಿಕೆ ಮಾಡಿಲ್ಲ, ಮಾಡುವುದೂ ಇಲ್ಲ. ಸರ್ಕಾರ ಸ್ವಯಂಕೃತ ಅಪರಾಧದಿಂದ ಪತನವಾದರೆ, ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಾವು ಸನ್ಯಾಸಿಗಳೂ ಅಲ್ಲ’ ಎಂದು ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಸುಮಾರು 20 ಅತೃಪ್ತ ಶಾಸಕರಿದ್ದಾರೆ. ಈ ಸರ್ಕಾರದ ಭವಿಷ್ಯವೂ 20 ಶಾಸಕರ ನಿರ್ಧಾರದ ಮೇಲೆ ನಿಂತಿದೆ. ಅವರು ಹೊರಗೆ ಬಂದರೆ, ಒಟ್ಟಾಗಿ ಸರ್ಕಾರ ರಚಿಸಲು ಸಿದ್ಧ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಹೋಗುವುದಿಲ್ಲ’ ಎಂದೂ ತಿಳಿಸಿದರು.

ಅವಿಶ್ವಾಸ ಮಂಡಿಸುವುದಿಲ್ಲ: ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ವಿಧಾನಮಂಡಲ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು