ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೋಸ್ತಿ ಸರ್ಕಾರ’ ಕೆಡಹುವ ಆಟಕ್ಕಿಲ್ಲ ‘ಬ್ರೇಕ್‌ ’?

Last Updated 14 ಫೆಬ್ರುವರಿ 2019, 21:00 IST
ಅಕ್ಷರ ಗಾತ್ರ

ಬೆಂಗಳೂರು: ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ‘ದೋಸ್ತಿ ಸರ್ಕಾರ’ವನ್ನು ಪತನಗೊಳಿಸುವ ಯತ್ನ ವಿಫಲಗೊಂಡಿದ್ದರೂ ಮುಂಬರುವ ದಿನಗಳಲ್ಲಿ ಸರ್ಕಾರ ಕೆಡಹುವಂತಹ ಪ್ರಯತ್ನವನ್ನುಬಿಜೆಪಿ ಕೈಬಿಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅತೃಪ್ತರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ವಾಪಸ್‌ ಬಂದು ಸದನದಲ್ಲಿ ಪ್ರತ್ಯಕ್ಷವಾದರೂ ಬಿಜೆಪಿ ಜತೆ ಕೈಜೋಡಿಸಲು ಈಗಲೂ ಸಿದ್ಧರಿದ್ದಾರೆ. ಹೀಗಾಗಿ ದೋಸ್ತಿ ಸರ್ಕಾರದ ಮೇಲೆ ಅನಿಶ್ಚಿತತೆಯ ತೂಗುಗತ್ತಿ ಇನ್ನೂ ತೂಗುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಳೆದ ಒಂದು ವಾರದ ಬೆಳವಣಿಗೆಯಿಂದ ಗಾಯಗೊಂಡ ಹುಲಿಯಂತಾಗಿದ್ದಾರೆ. ಅವರು ಸುಮ್ಮನಿರುವ ಸಾಧ್ಯತೆ ಕಡಿಮೆ ಎಂದು ಅವರ ಆಪ್ತ ವಲಯದ ಅಭಿಪ್ರಾಯ. ಸರ್ಕಾರ ಪತನಗೊಳಿಸುವ ಯತ್ನಕ್ಕೆ ಆರ್‌ಎಸ್‌ಎಸ್‌ ಮೂಲದ ಶಾಸಕರಿಗೆ ಒಲವಿಲ್ಲ. ಹೀಗಾಗಿ ಈ ಶಾಸಕರು ಪತನದ ಪ್ರಯತ್ನದಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದೂ ಪಕ್ಷದ ಪಡಸಾಲೆಯಲ್ಲಿ ನಡೆದಿರುವ ಬೆಳವಣಿಗೆಗಳ ಮೇಲೆ ಅವರು ಕಿರುನೋಟ ಬೀರುತ್ತಾರೆ.

ಯಡಿಯೂರಪ್ಪ ಅವರಿಗೆ ಆಪ್ತವಾಗಿರುವ ಶಾಸಕರು ಶತಾಯಗತಾಯ ಸರ್ಕಾರವನ್ನು ಉರುಳಿಸಿ ಅಧಿಕಾರ ಹಿಡಿಯಲೇಬೇಕು ಎಂಬ ಧಾವಂತದಲ್ಲಿದ್ದಾರೆ. ಇವರು ಯಡಿಯೂರಪ್ಪ ಅವರನ್ನು ಉತ್ತೇಜಿಸುತ್ತಿದ್ದಾರೆ. ಏನೇ ಮಾಡುವುದಿದ್ದರೂ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗುವುದರೊಳಗೆ ಮಾಡಿ ಮುಗಿಸಬೇಕು. ಇಲ್ಲವಾದರೆ ಮುಂದೆ ಅವಕಾಶ ಸಿಗುವುದು ಕಷ್ಟ ಎಂಬ ವಾದ ಈ ವರ್ಗದ ಶಾಸಕರದು ಎನ್ನಲಾಗಿದೆ.

ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿರುವ ಶಾಸಕರಾದ ರಮೇಶ್‌ ಜಾರಕಿಹೊಳಿ, ಮಹೇಶ್ ಕುಮಠಳ್ಳಿ, ಬಿ.ನಾಗೇಂದ್ರ ಮತ್ತು ಡಾ.ಉಮೇಶ್‌ ಜಾಧವ್‌ ಅವರು ಸದನಕ್ಕೆ ಹಾಜರಾಗಿ ವಿಪ್‌ ಉಲ್ಲಂಘನೆಯ ಬೀಸುವ ದೊಣ್ಣೆ ತಪ್ಪಿಸಿಕೊಂಡಿದ್ದರೂ ಇವರನ್ನು ಅನರ್ಹಗೊಳಿಸಬೇಕು ಎಂಬ ಅರ್ಜಿ ವಿಧಾನಸಭಾಧ್ಯಕ್ಷರ ಮುಂದಿದೆ. ಹೀಗಾಗಿ ಇವರ ಮುಂದಿನ ನಡೆ ಏನು ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

ಈ ಮಧ್ಯೆ ಆಡಿಯೊ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಆರಂಭವಾಗುವುದರಿಂದ ಯಡಿಯೂರಪ್ಪ ಅವರನ್ನು ‘ಕಟ್ಟಿ ಹಾಕುವ’ ನಡೆಯನ್ನು ದೋಸ್ತಿ ಸರ್ಕಾರ ಅನುಸರಿಸಲಿದೆ. ಇದು ಮುಗಿಯುವುದರೊಳಗೆ ಲೋಕಸಭೆ ಚುನಾವಣೆ ಬರುವುದರಿಂದ ಬಿಜೆಪಿಯೂ ತಣ್ಣಗಾಗಬಹುದು ಎಂಬ ಲೆಕ್ಕಾಚಾರ ದೋಸ್ತಿ ಪಕ್ಷಗಳದ್ದು ಎನ್ನಲಾಗಿದೆ.

ದೋಸ್ತಿ ಸರ್ಕಾರಕ್ಕೆ ಬೆಂಬಲ ಹಿಂದಕ್ಕೆ ಪಡೆದಿದ್ದ ಪಕ್ಷೇತರ ಎಚ್‌.ಎಚ್‌.ನಾಗೇಶ್‌ ಕಾಂಗ್ರೆಸ್‌ ಸಹ ಸದಸ್ಯರಾಗಿ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಮರಳಿದ್ದಾರೆ. ಆದರೆ, ಕೆಪಿಜೆಪಿ ಶಾಸಕ ಆರ್‌.ಶಂಕರ್‌ ಮಾತ್ರ ದೋಸ್ತಿಯಿಂದ ದೂರ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT