ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ವಿಧಾನಸೌಧಕ್ಕೆ ಜಿಲ್ಲಾಮಟ್ಟದ ಕಚೇರಿ: ವಿರೋಧ

Last Updated 3 ಜುಲೈ 2020, 13:58 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿರುವ ಜಿಲ್ಲಾ ಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ‘₹ 500 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಸೌಧಕ್ಕೆ ಬೆಂಗಳೂರಿನಲ್ಲಿರುವ ರಾಜ್ಯ ಮಟ್ಟದ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಲಾಗುವುದು ಎಂದು ಸರ್ಕಾರ ಹಲವು ಬಾರಿ ಗಡಿ ಭಾಗದ ಜನರಿಗೆ ಭರವಸೆ ನೀಡುತ್ತಲೇ ಬಂದಿದೆ. ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಮಾಡುವ ಪ್ರಯತ್ನಗಳು ಕೂಡ ನಡೆದಿವೆ. ಹೀಗಿರುವಾಗ, ಜಿಲ್ಲಾಡಳಿತ ಮಾಡಿದ ಶಿಫಾರಸಿನ ಮೇರೆಗೆ ಜಿಲ್ಲಾ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಆದೇಶ ಹೊರಡಿಸಿರುವುದು ತಪ್ಪು ಹಾಗೂ ಜನವಿರೋಧಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಸೌಧ ನಿರ್ಮಿಸಿರುವುದು ರಾಜ್ಯಮಟ್ಟದ ಕಚೇರಿಗಳಿಗಾಗಿಯೇ ಹೊರತು ಜಿಲ್ಲಾ ಮಟ್ಟದ ಕಚೇರಿಗಳಿಗಲ್ಲ. ಅದು ಮಿನಿ ವಿಧಾನಸೌಧವೇನಲ್ಲ. ಉತ್ತರ ಕರ್ನಾಟಕದ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಯಾವಾವ ಪ್ರಮುಖ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕು ಎನ್ನುವುದು ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರವಾಗಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕನ್ನಡ ಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡಿರುವ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಶಶಿಧರ ಘಿವಾರಿ, ರಮೇಶ ಸೊಂಟಕ್ಕಿ, ಮೈನುದ್ದೀನ್ ಮಕಾನದಾರ, ಮಹಾಂತೇಶ ರಣಗಟ್ಟಿಮಠ, ಕಸ್ತೂರಿ ಭಾವಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT