ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್‌ ಪಬ್ಲಿಕ್‌ ಶಾಲೆ: ಯೋಜನೆ ಸಿದ್ಧ

ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಕೆ
Last Updated 13 ಫೆಬ್ರುವರಿ 2020, 2:05 IST
ಅಕ್ಷರ ಗಾತ್ರ

ಮಂಡ್ಯ: ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ಸರ್ಕಾರಿ ಶಾಲೆಗಳ ಬಲವರ್ಧಿಸುವ ಹೊಸದೊಂದು ಯೋಜನೆ ಮಂಡ್ಯದಲ್ಲಿ ತಯಾರಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅದು ಕಾರ್ಯರೂಪಕ್ಕೆ ಬರಲಿದೆ.

1ರಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರೀಕೃತ ‘ಪಂಚಾಯತ್‌ ಪಬ್ಲಿಕ್‌ ಶಾಲೆ’ ತೆರೆಯುವ ಕ್ರಿಯಾ ಯೋಜನೆಯನ್ನು ಮಂಡ್ಯ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ತಯಾರಿಸಿದ್ದಾರೆ. ಇದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ.

‘10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಕೇಂದ್ರ ಶಾಲೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಈಗಾಗಲೇ ಚಾಲ್ತಿ ಹಂತದಲ್ಲಿದೆ. ಸರ್ಕಾರ ಒಂದು ರೂಪಾಯಿಯನ್ನೂ ಹೆಚ್ಚುವರಿಯಾಗಿ ಭರಿಸದೇ ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾದ ಮೂಲ ಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ’ ಎಂದು ವರದಿ ಸಿದ್ಧಪಡಿಸಿರುವ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಾಗರಾಜು ತಿಳಿಸಿದರು. ಇದಕ್ಕೆ ಸರ್ಕಾರ ಅನುಮೋದನೆ ನೀಡಿದರೆ ತಾಲ್ಲೂಕಿನ ಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಶಾಲೆಗಳನ್ನು ಒಂದೇ ಸೂರಿನಡಿ ತಂದು ಪ್ರಾಯೋಗಿಕವಾಗಿ ಪಂಚಾಯತ್‌ ಪಬ್ಲಿಕ್‌ ಶಾಲೆ ಆರಂಭಿಸುವ ಉದ್ದೇಶವಿದೆ.

ಒಟ್ಟು ಅನುದಾನದಲ್ಲಿ ಉಳಿದ ಹಣವನ್ನು ಪೂರ್ವ ಪ್ರಾಥಮಿಕ ಶಾಲೆ), ಸಾರಿಗೆ ವೆಚ್ಚ, ಸ್ಮಾರ್ಟ್‌ ತರಗತಿ, ಡಿಜಿಟಲ್‌ ಲೈಬ್ರರಿ, ವಿಜ್ಞಾನ– ಕಂಪ್ಯೂಟರ್‌ ಪ್ರಯೋಗಾಲಯ, ಕ್ರೀಡಾ ಸಾಮಗ್ರಿ– ಉದ್ಯಾನ, ಸಿಸಿಟಿವಿ ಕ್ಯಾಮೆರಾ, ಯುಪಿಎಸ್‌ ಸೌಲಭ್ಯ, ರಂಗಮಂದಿರ ಸೌಲಭ್ಯ ಕಲ್ಪಿಸಲು ಬಳಸಿಕೊಳ್ಳಬಹುದು ಎಂಬ ವಿಷಯ ವರದಿಯಲ್ಲಿದೆ. ಇಡೀ ಜಿಲ್ಲೆಗೆ ಈ ಯೋಜನೆ ಅಳವಡಿಸಿದರೆ ಒಟ್ಟು 232 ಗ್ರಾಮ ಪಂಚಾಯ್ತಿಗಳ ₹404 ಕೋಟಿ ಅನುದಾನದಲ್ಲಿ ₹278 ಕೋಟಿ ಖರ್ಚಾಗಲಿದೆ.

***

ಇದು ಕರ್ನಾಟಕ ಪಬ್ಲಿಕ್‌ ಶಾಲೆಗೆ ಪರ್ಯಾಯವಲ್ಲ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೇಂದ್ರೀಯ ಮಾದರಿ ಶಾಲೆ ರೂಪಿಸುವ ಉದ್ದೇಶ ಯೋಜನೆ ಹಿಂದಿದೆ.

– ಆರ್‌.ರಘುನಂದನ್‌, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT