‘ಸ್ಲೀಪರ್‌ ಸೆಲ್‌’ನಂತೆ ಬೆಂಗಳೂರು ಬಳಸಲು ಬಿಡುವುದಿಲ್ಲ: ಡಿಸಿಎಂ

7
ಅಕ್ರಮ ವಲಸಿಗರು: ಪ್ರತಿಧ್ವನಿಸಿದ ‘ಪ್ರಜಾವಾಣಿ’ ವರದಿ

‘ಸ್ಲೀಪರ್‌ ಸೆಲ್‌’ನಂತೆ ಬೆಂಗಳೂರು ಬಳಸಲು ಬಿಡುವುದಿಲ್ಲ: ಡಿಸಿಎಂ

Published:
Updated:

ಬೆಳಗಾವಿ: ‘ಅಕ್ರಮ ವಲಸಿಗರಿಂದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಆತಂಕ ಬೇಡ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಬೆಂಗಳೂರನ್ನು ಅವರು ’ಸ್ಲೀಪರ್‌ ಸೆಲ್‌’ ಆಗಿ ಬಳಸಲು ಅವಕಾಶ ನೀಡುವುದಿಲ್ಲ’ ಎಂದು ಗೃಹಸಚಿವ ಜಿ. ಪರಮೇಶ್ವರ ಭರವಸೆ ನೀಡಿದರು.

‘ಪ್ರಜಾವಾಣಿ’ಯ ‘ಒಳನೋಟ’ದಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ  ಬಿಜೆಪಿಯ ಎನ್‌.ರವಿಕುಮಾರ್‌ ಅವರು ವಿಧಾನಪರಿಷತ್ತಿನಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಇದುವರೆಗೆ 200 ಅಕ್ರಮ ವಲಿಸಗರನ್ನು ಗಡಿಪಾರು ಮಾಡಲಾಗಿದೆ. ಈ ಸಲುವಾಗಿಯೇ ಪೊಲೀಸ್‌ ಇಲಾಖೆಯಲ್ಲಿ ಆಂತರಿಕ ಭದ್ರತಾ ವಿಭಾಗವನ್ನು ಆರಂಭಿಸಲಾಗಿದೆ. ಅಕ್ರಮ ವಲಸಿಗರನ್ನು ಗುರುತಿಸುವ ಸಲುವಾಗಿ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಪಡೆ ರಚಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು. 

‘ಆರು ತಿಂಗಳಲ್ಲಿ ಬಾಂಗ್ಲಾ ದೇಶದ 18 ಅಕ್ರಮ ವಲಸಿಗರನ್ನು ರಾಜ್ಯದಲ್ಲಿ ಗುರುತಿಸಿದ್ದೇವೆ. ಬೌದ್ಧ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪಿಗಳೂ ಸೇರಿದ್ದಾರೆ. ಇದುವರೆಗೆ ರಾಜ್ಯದಲ್ಲಿ 177 ರೊಹಿಂಗ್ಯಾ ವಲಸಿಗರು ಇದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಈ ಪೈಕಿ 140 ಮಂದಿಯನ್ನು ಪತ್ತೆಹಚ್ಚಿದ್ದಾರೆ. 108 ಮಂದಿಯ ಬಯೋಮೆಟ್ರಿಕ್‌ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. 30 ಮಂದಿ ಅನ್ಯರಾಜ್ಯಕ್ಕೆ ತೆರಳಿರುವ ಮಾಹಿತಿ ಇದೆ. ಸಂದೇಹ ಇರುವ 70 ಮಂದಿಯ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದೇವೆ. ಅವರು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆ ಬಂಧಿಸಿ ಗಡಿಪಾರು ಮಾಡುತ್ತೇವೆ’ ಎಂದರು.

‘ಕೆಲವರು ಇಲ್ಲಿ ಅಕ್ರಮವಾಗಿ ಪಡಿತರ ಚೀಟಿ ಮಾಡಿಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆಯೂ ನಿಗಾ ಇಡುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಿದ್ದೇವೆ. ಬೆಂಗಳೂರಿನ ವೈಟ್‌ಫೀಲ್ಡ್‌, ಮಾರತ್‌ಹಳ್ಳಿ, ಸರ್ಜಾಪುರ, ಬೆಳ್ಳಂದೂರು, ದೇವರಬೀಸನಹಳ್ಳಿ ಮತ್ತಿತರ ಪ್ರದೇಶಗಳಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಗುರುತಿಸುವ ಸಲುವಾಗಿ ತಹಶೀಲ್ದಾರ್‌ ಕಚೇರಿ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ’ ಎಂದರು.

‘ವಲಸಿಗರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ದಾಖಲೆ ಪಡೆದು ನೋಂದಣಿ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಬೇಕು’ ಎಂದು ಬಿಜೆಪಿಯ ತೇಜಸ್ವಿನಿ ಗೌಡ ಹೇಳಿದರು.

ಅಕ್ರಮ ವಲಸಿಗರನ್ನು ಗುರುತಿಸುವ ಸಲುವಾಗಿ ಬೆಂಗಳೂರಿನಲ್ಲಿ ಒಂದು ತಿಂಗಳು ವಿಶೇಷ ಅಭಿಯಾನ ನಡೆಸುವಂತೆ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

‘ಪತ್ತೆ ಹಚ್ಚುವ ಕಾರ್ಯ ನಿರಂತರ ನಡೆಯಬೇಕು. ಒಂದು ತಿಂಗಳು ಅಭಿಯಾನ ನಡೆಸಿದರೆ ಪ್ರಯೋಜನವಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ, ಗಡಿ ಪ್ರದೇಶಗಳಲ್ಲಿ ಅಕ್ರಮ ನುಸುಳುವಿಕೆಯನ್ನು ತಡೆಯಬೇಕು’ ಎಂದು ಪರಮೇಶ್ವರ ತಿಳಿಸಿದರು.

‘ಕಾಲಿಗೆ ಗುಂಡು ಹಾರಿಸುತ್ತಾರೆ’

‘ವಲಸಿಗರ ವಿರುದ್ಧ ಪ್ರಕರಣ ದಾಖಲಿಸುವ ಪೊಲೀಸರು ರಾಯಭಾರ ಕಚೇರಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಈ ಕಾರಣಕ್ಕೆ ಕೆಲವು ಪೊಲೀಸರು ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲು ಭಯಪಡುತ್ತಾರೆ’ ಎಂದು ರವಿಕುಮಾರ್‌ ಹೇಳಿದರು.

‘ಪೊಲೀಸರಿಗೆ ವಲಸಿಗರ ಬಗ್ಗೆ ಭಯವೇನಿಲ್ಲ. ಅವರು ತಪ್ಪೆಸಗಿದರೆ ಅವರ ಕಾಲಿಗೆ ಗುಂಡು ಹೊಡೆಯುತ್ತಾರೆ. ನಮ್ಮ ಆಂತರಿಕ ಭದ್ರತಾ ವಿಭಾಗ ಬಲಿಷ್ಠವಾಗಿದೆ’ ಎಂದು ಗೃಹಸಚಿವರು ತಿಳಿಸಿದರು.

**

ಎಲ್ಲಿ ಎಷ್ಟು ಸೆರೆ?

ಬೆಳ್ಳಂದೂರು; 2017; 13

ವರ್ತೂರು; 2012; 2

ಎಚ್‌.ಎ.ಎಲ್‌: 2014; 75

ಕಾಡುಗೋಡಿ: 2018; 1

ಮಹದೇವಪುರ; 2012; 4

**

ಅಕ್ರಮ ವಲಸಿಗರ ಬಗ್ಗೆ ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿಯವರೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರ ಈ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು
- ಎನ್‌.ರವಿಕುಮಾರ್‌, ಬಿಜೆಪಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !