ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಶ್ರೀ ಆರೋಗ್ಯ ಸ್ಥಿತಿ ಗಂಭೀರ

ತೀವ್ರ ನಿಗಾ ಘಟಕದಲ್ಲಿ ಮುಂದುವರಿದ ಚಿಕಿತ್ಸೆ: ಅಲ್ಪ ಸ್ಪಂದನೆ
Last Updated 20 ಡಿಸೆಂಬರ್ 2019, 20:18 IST
ಅಕ್ಷರ ಗಾತ್ರ

ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ.

ಶುಕ್ರವಾರ ನಸುಕಿನ 3 ಗಂಟೆ ವೇಳೆ ಪೇಜಾವರ ಮಠದಲ್ಲಿ ಅಸ್ವಸ್ಥಗೊಂಡ ಶ್ರೀಗಳಿಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ 5 ಗಂಟೆಗೆ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಹೆಲ್ತ್‌ ಬುಲೆಟಿನ್ ಬಿಡುಗಡೆ:ಶ್ವಾಸಕೋಶದಲ್ಲಿ ಕಫ ತುಂಬಿಕೊಂಡಿರುವುದರಿಂದ ಪೇಜಾವರ ಶ್ರೀಗಳಿಗೆ ಪ್ರತಿರೋಧಕ (ಆ್ಯಂಟಿ ಬಯಾಟಿಕ್ಸ್‌) ಹಾಗೂ ಸಹಾಯಕ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಬೆಳಿಗ್ಗೆ 10.30ಕ್ಕೆ ವೈದ್ಯರು ಆರೋಗ್ಯ ಮಾಹಿತಿ ಬಿಡುಗಡೆ ಮಾಡಿದರು.

ಬಳಿಕ ಸಂಜೆ 5.15ಕ್ಕೆ ಸುದ್ದಿಗೋಷ್ಠಿ ನಡೆಸಿದ ಕೆಎಂಸಿ ಆಸ್ಪತ್ರೆಯ ವೈದ್ಯೆಡಾ.ಸುಧಾ ವಿದ್ಯಾಸಾಗರ್‌, ‘ಶ್ರೀಗಳು ಚಿಕಿತ್ಸೆಗೆ ಸ್ವಲ್ಪ ಸ್ಪಂದಿಸುತ್ತಿದ್ದಾರೆ. ಆದರೂ ಸ್ಥಿತಿ ಗಂಭೀರವಾಗಿಯೇ ಇದೆ. ಆರೋಗ್ಯದ ಮೇಲೆನಿರಂತರ ನಿಗಾ ಇಡಲಾಗಿದೆ’ ಎಂದರು.

ಜನರಲ್‌ ಮೆಡಿಸನ್‌ ವಿಭಾಗದ ಮುಖ್ಯಸ್ಥ ಡಾ.ರವಿರಾಜ ವಿ.ಆಚಾರ್ಯ,ಡಾ.ಮಂಜುನಾಥ್ ಹಂದೆ, ಕಾರ್ಡಿಯಾಲಜಿಸ್ಟ್‌ ಡಾ.ಪದ್ಮಕುಮಾರ್‌, ಕ್ರಿಟಿಕಲ್‌ ಕೇರ್ ಮೆಡಿಸನ್‌ ವಿಭಾಗದ ಡಾ.ಶ್ವೇತಪ್ರಿಯ ಹಾಗೂ ಡಾ.ವಿಶಾಲ್‌ ಶಾನುಭಾಗ್‌ ಅವರನ್ನೊಳಗೊಂಡ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಗೆ ಭೇಟಿ ಬೇಡ:ಸ್ವಾಮೀಜಿ ಗುಣಮುಖರಾಗುವಂತೆ ಅವರ ಅಭಿಮಾನಿಗಳು, ಭಕ್ತರು, ರಾಜಕೀಯ ಮುಖಂಡರು ಮನೆಯಲ್ಲಿಯೇ ಪ್ರಾರ್ಥಿಸಬೇಕು. ಆಸ್ಪತ್ರೆಗೆ ಭೇಟಿನೀಡಿದರೆ ಶ್ರೀಗಳಿಗೆ ಸೋಂಕು ತಗುಲುವ ಅಪಾಯವಿದ್ದು, ಯಾರೂ ಭೇಟಿ ನೀಡಬಾರದು ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್‌ ಮನವಿ ಮಾಡಿದರು.

ಶ್ರೀಗಳು ಶೀಘ್ರ ಗುಣಮುಖರಾಗುವಂತೆ ಹಲವೆಡೆ ಪೂಜೆ, ಪ್ರಾರ್ಥನೆಗಳು ನಡೆದವು.ಸೋಸಲೆ ವ್ಯಾಶಸರಾಜ ಮಠ ಹಾಗೂ ಶಾಖಾಮಠಗಳಲ್ಲಿ ವಿಶೇಷ ಪಾರಾಯಣ ನಡೆಯಿತು. ಮಂತ್ರಾಲಯ ವಿದ್ಯಾಪೀಠದಲ್ಲಿ ಋಗ್ವೇದ, ಯಜುರ್ವೇದ ಸಹಿತ ಪಾರಾಯಣ, ಸಹಸ್ರನಾಮ, ವಾಯುಸ್ತುತಿ ಗುರುಸ್ತೋತ್ರ ನಡೆಯಿತು.

ಕರೆ ಮಾಡಿದ ಮೋದಿ, ಶಾ

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ ಆಪ್ತ ಕಾರ್ಯದರ್ಶಿ ಟಿ.ಪಿ. ಅನಂತ್ ಅವರಿಗೆ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್‌, ಜೆಡಿಎಸ್‌ ವರಿಷ್ಠ ದೇವೇಗೌಡ ಕೂಡ ಆರೋಗ್ಯ ವಿಚಾರಿಸಿದರು.

ಮಣಿಪಾಲಕ್ಕೆ ಶಾ: ಅಮಿತ್‌ ಶಾ ಅವರು ಶ್ರೀಗಳ ಆರೋಗ್ಯ ವಿಚಾರಿಸಲು ಮಣಿಪಾಲಕ್ಕೆ ಶನಿವಾರ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಣ್ಯರ ಭೇಟಿ

ಸುದ್ದಿ ತಿಳಿಯುತ್ತಿದ್ದಂತೆ ಕೆಎಂಸಿ ಆಸ್ಪತ್ರೆಗೆ ರಾಜಕೀಯ ಮುಖಂಡರು, ಮಠಾಧಿಪತಿಗಳು, ಗಣ್ಯರು ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಚಿವರಾದ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಸಿರಿಗೆರೆ ತರಳಬಾಳು ಮಠದ ಶ್ರೀಗಳು, ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪ್ರಮೋದ್ ಮಧ್ವರಾಜ್‌ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT