ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಲ್ಲಿ ಸಂತ್ರಸ್ತರ ದೀಪಾವಳಿ!

ತಿಂಗಳಿಂದ ಬಸ್‌ ನಿಲ್ದಾಣದಲ್ಲೇ ವಾಸ– ಕೇಳುವವರೇ ಇಲ್ಲ ನಮ್ಮ ಗೋಳು: ಅಳಲು
Last Updated 28 ಅಕ್ಟೋಬರ್ 2019, 19:41 IST
ಅಕ್ಷರ ಗಾತ್ರ

ಬಾಗಲಕೋಟೆ: ಆಗಸ್ಟ್‌ನಾಗ ಮೊದಲ್ ಸಲ ಹೊಳಿ ಬಂತಲ್ರಿ ಆಗ ಇಲ್ಲಿಗ್ ಬಂದಿವ್ರಿ. ಮೊದ್ಲು ಒಂದಿಷ್ಟು ಕಾಳಜಿ ಮಾಡಿದ್ರು. ಈಗ್ ಯಾರೂ ದಾದ್ ಮಾಡಾವಲ್ರಿ.. ಬರ್ತಾರ್ರಿ, ಫೋಟೊ ತಗೀತಾರ, ಬರ್ಕೊತಾರ, ಹೋಗ್ತಾರ್ರಿ..

ಹೀಗೆಂದು ಹುನಗುಂದ ತಾಲ್ಲೂಕಿನ ಕಟಗೂರಿನಪಾಂಡಪ್ಪ ಕಂಬಾರ ಸೋಮವಾರ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಕೃಷ್ಣಾ ನದಿ ಪ್ರವಾಹದಿಂದ ಪಾಂಡಪ್ಪ ಹಾಗೂ ಸಹೋದರ ಹಣಮಂತ ಅವರ ಮನೆಗಳು ಬಿದ್ದು ಹೋಗಿವೆ. ಕಂಬಾರ ಕುಟುಂಬದ 9 ಮಂದಿ ಗ್ರಾಮದ ಬಸ್‌ ನಿಲ್ದಾಣದಲ್ಲಿಯೇ ಕಳೆದೆರಡು ತಿಂಗಳಿಂದ ವಾಸವಿದ್ದಾರೆ.

ಗ್ರಾಮಕ್ಕೆ ‘ಪ್ರಜಾವಾಣಿ’ ಭೇಟಿ ಕೊಟ್ಟಾಗ ಪಾಂಡಪ್ಪನ ಮಗಳು ವರ್ಷಾ, ಸಗಣಿಯಲ್ಲಿ ಹಟ್ಟಿ ಲಕ್ಕಮ್ಮನ ಮಾಡಿ ಬಸ್‌ ನಿಲ್ದಾಣದ ಕಟ್ಟೆಯ ಮೇಲಿಟ್ಟು ದೀಪಾವಳಿ ಪಾಡ್ಯದ ಪೂಜೆಯ ಸಿದ್ಧತೆಯಲ್ಲಿದ್ದಳು. ಅವ್ವ ನೀಲಮ್ಮನಿಗೆ ಕಳೆದೊಂದು ವಾರದಿಂದ ತೀವ್ರ ಜ್ವರ. ಎದ್ದು ಓಡಾಡಲು ಆಗೊಲ್ಲ. ಹಾಗಾಗಿ ಹಬ್ಬದ ಸಿದ್ಧತೆ ಮಗಳ ಪಾಲಿಗೆ ಬಂದಿತ್ತು.

ಪ್ಲಾಸ್ಟಿಕ್ ಚೀಲ ಅಡ್ಡ ಕಟ್ಟಿಕೊಂಡು ಗಾಳಿ– ಮಳೆಯಿಂದ ರಕ್ಷಣೆ ಪಡೆದಿದ್ದು, ಒಳಗೆ ಗೋಡೆ ಕಪ್ಪಾಗುತ್ತದೆ ಎಂದು ಹೊರಗೆ ರಸ್ತೆ ಪಕ್ಕದಲ್ಲಿ ಕಲ್ಲು ಇಟ್ಟು ಒಲೆ ಹೊತ್ತಿಸಿ ಅಲ್ಲಿಯೇ ಕುಟುಂಬ ಅಡುಗೆಗೆ ಸಿದ್ಧತೆ ಮಾಡಿಕೊಂಡಿತ್ತು. ‘ಹೊರಗೆ ಜಳಕ ಮಾಡಬೇಕ್ರಿ ಹಂಗಾಗಿ ಹೆಣ್ಣು ಮಕ್ಕಳು ರಾತ್ರಿ ಮೇಲೆ ಮಾಡ್ತಾರ್ರಿ’ ಎಂದು ಪಾಂಡಪ್ಪ ಹೇಳಿದರು.

ಕಟಗೂರಿನ ಅಗಸಿ ಬಾಗಿಲಿನ ಕೆಳಗೆ, ಸರ್ಕಾರಿ ಶಾಲೆಯ ಶಿಕ್ಷಕರ ವಸತಿ ಗೃಹದಲ್ಲಿ 10ಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದಿವೆ. ‘ವಸತಿ ಗೃಹದಲ್ಲಿ ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ತಿಂಗಳು ಕಾಲ ವ್ರತ ಇರುತ್ತಿದ್ದರು. ಈ ಬಾರಿಯೂ ಅವರಿಗೆ ಬಿಟ್ಟುಕೊಡಲು ನಮ್ಮನ್ನು ಖಾಲಿ ಮಾಡಲು ಹೇಳುತ್ತಿದ್ದಾರೆ’ ಎಂದು ಮಹಿಳೆಯೊಬ್ಬರು ಅಲವತ್ತುಕೊಂಡರು.

ತಪ್ಪದ ವನವಾಸ: ‘2007ರಲ್ಲಿ ಬಂದ ಪ್ರವಾಹದಿಂದ ಮನೆ ಕುಸಿಯಿತು. ಆಗ ತಾತ್ಕಾಲಿಕ ಶೆಡ್ ಹಾಕಿಕೊಟ್ಟಿದ್ದರು. ಅಲ್ಲಿ ವಾಸವಿದ್ದೆವು. ಮೊನ್ನೆ ಬಂದ ಮಳೆಗೆ ಆ ಶೆಡ್‌ಗಳು ಕುಸಿದವು. ಈಗ ಇಲ್ಲಿದ್ದೇವೆ. 12 ವರ್ಷ ಕಳೆದರೂ ವನವಾಸ ತಪ್ಪಲಿಲ್ಲ’ ಎಂದು ಶಾಲೆಯಲ್ಲಿ ಆಶ್ರಯ ಪಡೆದಿರುವ ಕಜಗಲ್ ಗ್ರಾಮದ ಶಾಂತವ್ವ ಕೊಪ್ಪದ ಹೇಳಿದರು.

ಶಾಲೆಯ ಕೊಠಡಿಗೆ ತೋರಣ..

ಕಜಗಲ್‌, ವರಗೋಡದಿನ್ನಿ, ಕೂಡಲಸಂಗಮದ ಸರ್ಕಾರಿ ಶಾಲೆ, ಸಮುದಾಯ ಭವನ, ಅಂಗನವಾಡಿ, ಅಗಸಿ ಬಾಗಿಲು, ಹಾಸ್ಟೆಲ್‌ಗಳಲ್ಲಿ ಸಂತ್ರಸ್ತರು ವಾಸವಿದ್ದಾರೆ. ಹಬ್ಬಕ್ಕೆ ಶಾಲೆಯ ಕೊಠಡಿಗಳಿಗೆ ಮಾವಿನ ತೋರಣ, ಬಾಳೆ ಕಂದು ಕಟ್ಟಿ ಸಿಂಗರಿಸಿದ್ದರು.

‘ಹೊಳಿ ನೀರು (ಪ್ರವಾಹ) ಬಂದಾಗ ಒಂದಷ್ಟು ದಿನ ಊಟ ಕೊಟ್ರು. ಈಗ ನಮ್ ಕಾಳಜಿ ಬಿಟ್ಟಾರ. ಏನು ಮಾಡೋದ್ರಿ, ಹಬ್ಬ ಮಾಡದಿದ್ರ ನಡೆಯೋದಿಲ್ಲ. ಸಾಲಿ ಗುಡೀನ ಈಗ ನಮಗ ಮನಿ ಅಂತಾ ತಿಳ್ಕೊಂಡು ಹಬ್ಬಕ್ಕ ಅಲಂಕಾರ ಮಾಡೇವಿ‘ ಎಂದು ಕಜಗಲ್‌ನ ಗಂಗವ್ವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT