ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ –ಹೈಕೋರ್ಟ್ ಅಂಗಳದಲ್ಲಿ ಪದವಿ ಮಾನ್ಯತೆ

ಗೊಂದಲ ಕೊನೆಗೊಂಡಿದೆ, ಧೈರ್ಯದಿಂದ ಅರ್ಜಿ ಸಲ್ಲಿಸಿ: ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ
Last Updated 11 ಮೇ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) 2013–15ನೇ ಸಾಲಿನ 95 ಸಾವಿರ ವಿದ್ಯಾರ್ಥಿಗಳ ಪದವಿ ಮಾನ್ಯತೆಯಭವಿಷ್ಯ ರಾಜ್ಯ ಹೈಕೋರ್ಟ್‌ನ ತೀರ್ಪಿನಲ್ಲಿ ಅಡಗಿದೆ. ಯಾವುದೇ ತಪ್ಪು ಮಾಡಿರದ ವಿದ್ಯಾರ್ಥಿಗಳ ಪರವಾಗಿ ವಿ.ವಿ ನಿಂತಿದೆ. ಒಂದೆರಡು ತಿಂಗಳಲ್ಲಿ ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ–

‘ಪ್ರಜಾವಾಣಿ’ ಕಚೇರಿಯಲ್ಲಿ ಶನಿವಾರ ನಡೆದ ‘ಫೋನ್‌–ಇನ್‌’ನಲ್ಲಿ ಹಲವಾರು ಮಂದಿ ಕರೆ ಮಾಡಿ ತೋಡಿಕೊಂಡ ಆತಂಕ, ದುಗುಡಕ್ಕೆ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಸಾವಧಾನದಿಂದ ಉತ್ತರ ನೀಡಿದರು.

ಫೋನ್‌ ಕರೆ ಮಾಡಿದ ಬಹುತೇಕರು ಕೇಳಿದ ಪ್ರಶ್ನೆ ‘2013–14 ಹಾಗೂ 2014–15ನೇ ಸಾಲಿನಲ್ಲಿ ಪರೀಕ್ಷೆ ಬರೆದಿದ್ದರೂ ಅಂಕಪಟ್ಟಿ ಇನ್ನೂ ಬಂದಿಲ್ಲ, ಪದವಿಯ ಮಾನ್ಯತೆ ಸಿಕ್ಕಿಲ್ಲ. ಅದು ಯಾವಾಗ ಬರುತ್ತದೆ? ನಾವು ಏನು ತಪ್ಪು ಮಾಡಿದ್ದೇವೆ? ಇನ್ನಷ್ಟು ವಿಳಂಬವಾದರೆ ನಮ್ಮ ಜೀವನದ ಭವಿಷ್ಯ ಏನು ಎಂದು ಪ್ರಶ್ನಿಸಿದರು.

‘2013–15ನೇ ಸಾಲಿನಲ್ಲಿ 95 ಸಾವಿರ ವಿದ್ಯಾರ್ಥಿಗಳು ನಿಯಮದಂತೆ ಶಿಕ್ಷಣ ಪಡೆದು, ಪರೀಕ್ಷೆ ಎದುರಿಸಿದ್ದಾರೆ. ಯಾವುದೇ ತಾಂತ್ರಿಕ ಶಿಕ್ಷಣ ಪಡೆದಿಲ್ಲ.ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡು ನಡೆಸಲಾದ ಪದವಿ ಮತ್ತು ತಾಂತ್ರಿಕ ಕೋರ್ಸ್‌ಗಳು ಕಾನೂನು ಬಾಹಿರ ಎಂಬ ಕಾರಣಕ್ಕೆ ಯುಜಿಸಿ ಮಾನ್ಯತೆ ರದ್ದುಪಡಿಸಿತ್ತು. ತಾಂತ್ರಿಕ ಕೋರ್ಸ್‌ಗಳನ್ನು ನಡೆಸಲು ವಿ.ವಿಗೆ ಯಾವುದೇ ಅವಕಾಶಗಳು ಇರಲಿಲ್ಲ. ಆದರೂಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಸಮಸ್ಯೆಯ ಮೂಲ. ತಾಂತ್ರಿಕ ಕೋರ್ಸ್‌ಗಳ ಮಾನ್ಯತೆ ರದ್ದುಮಾಡುವುದರ ಜತೆಗೆ ವಿ.ವಿ ವ್ಯಾಪ್ತಿಯಲ್ಲಿದ್ದ ಸಾಮಾನ್ಯ ಪದವಿ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಮಾಡಿದ್ದರಿಂದ ಇಷ್ಟೆಲ್ಲ ಸಮಸ್ಯೆ ಎದುರಿಸಬೇಕಾಯಿತು.ಯುಜಿಸಿಗೆ ಇದನ್ನು ಮನವರಿಕೆ ಮಾಡುವ ಪ್ರಯತ್ನ ನಿರಂತರವಾಗಿ ನಡೆದಿದೆ ಎಂದು ಕುಲಪತಿ ಸ್ಪಷ್ಟಪಡಿಸಿದರು.

‘ಯಾವುದೇ ತಪ್ಪು ಮಾಡಿರದ ನಮಗೆ ನ್ಯಾಯ ಒದಗಿಸಬೇಕು, ನಮ್ಮ ಅಂಕಪಟ್ಟಿ, ಪದವಿ ಪ್ರಮಾಣಪತ್ರ ನೀಡಬೇಕು’ ಎಂದು ಕೋರಿ ಕೆಲವು ವಿದ್ಯಾರ್ಥಿಗಳು ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದು ವಿಚಾರಣೆ ಹಂತಕ್ಕೂ ಬಂದಿದೆ. ಕೆಎಸ್ಒಯು ಸಹ ವಿದ್ಯಾರ್ಥಿಗಳಿಗೆ ಪೂರಕವಾಗಿ ಸ್ಪಂದಿಸಿದೆ. ಒಂದೆರಡು ತಿಂಗಳಲ್ಲಿ ತೀರ್ಪು ಹೊರಬೀಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಫ್ರಾಂಚೈಸಿಗಳ ಮೂಲಕ ಪದವಿ, ತಾಂತ್ರಿಕ ಪದವಿ ಪಡೆದವರುಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.ತಾಂತ್ರಿಕ ಶಿಕ್ಷಣ ನೀಡುವಲ್ಲಿ ಕೆಎಸ್‌ಒಯುನಲ್ಲಿ ಕೆಲವೊಂದು ತಪ್ಪು ನಿರ್ಧಾರಗಳಾಗಿವೆ. ಆಗಿದ್ದ ತಪ್ಪುಗಳನ್ನು ಸರಿಪಡಿಸಿ, ಯುಜಿಸಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮನವರಿಕೆ ಮಾಡಿಕೊಟ್ಟ ನಂತರ ಮತ್ತೆ ಪದವಿ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡಿದೆ. ಹಾಗಾಗಿ 2018–19ನೇ ಸಾಲಿಗೆ ಪ್ರವೇಶ ನೀಡಲಾಗಿದೆ. ಮುಂದಿನ ವರ್ಷಗಳಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲಾಗುವುದು. ಕುಲಪತಿಯಾಗಿ ಬಂದ ನಂತರ ಇಡೀ ಸಮಯವನ್ನು ಮಾನ್ಯತೆ ಪಡೆದುಕೊಳ್ಳುವ ಪ್ರಯತ್ನಕ್ಕೆ ಮೀಸಲಿಡಬೇಕಾಯಿತು ಎಂದು ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.

2018–19ನೇ ಸಾಲಿನಲ್ಲಿ ಅರ್ಜಿ ಆಹ್ವಾನಿಸಿದಾಗ ಭಾರಿ ಸ್ಪಂದನೆ ವ್ಯಕ್ತವಾಯಿತು. ಈ ವರ್ಷ 31 ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು, ಒಂದು ವಾರದಲ್ಲೇ 9 ಸಾವಿರಕ್ಕೂ ಅಧಿಕ ಮಂದಿ ವಿ.ವಿ ವೆಬ್‌ಸೈಟ್ ನೋಡಿದ್ದಾರೆ. ಅರ್ಜಿ ಸಲ್ಲಿಸಲು ಆಗಸ್ಟ್‌ 30ರ ವರೆಗೆ ಕಾಲಾವಕಾಶವಿದ್ದು, 50 ಸಾವಿರ ಮಂದಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಇನ್ನೂ ವಿ.ವಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ಶುಲ್ಕ ಕಡಿಮೆ: ಕೆಎಸ್‌ಯುಒ ನೀಡುವ ಪದವಿಗೂ ಇತರ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪದವಿಗೂ ಯಾವುದೇ ವ್ಯತ್ಯಾಸ ಇಲ್ಲ. ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ನೀಡಲಾಗುತ್ತಿದೆ. ಆದರೆ ಪಿಯು ಹಾಗೂ ಅದಕ್ಕೆ ಸಮಾನಾಂತರ ಶಿಕ್ಷಣ ನೀಡುವುದನ್ನು ಬಹಳ ಹಿಂದೆಯೇ ನಿಲ್ಲಿಸಲಾಗಿದೆ. ಇತರ ವಿ.ವಿಗಳಿಗೆ ಹೋಲಿಸಿದರೆ ಕೆಎಸ್ಒಯು ಶುಲ್ಕ ಕಡಿಮೆ ಇದೆ. ಅದೆಷ್ಟೋ ಮಂದಿಯ ಬಡ್ತಿ, ಉನ್ನತ ವ್ಯಾಸಂಗಕ್ಕೆ ವಿ.ವಿ ನೆರವಾಗಿದೆ. ಇದು ಇನ್ನು ಮುಂದೆಯೂ ಮುಂದುವರಿಯಲಿದೆ ಎಂದು ಶಿವಲಿಂಗಯ್ಯ ವಿವರಿಸಿದರು.

ಯುಜಿಸಿ ಮಾನ್ಯತೆ ರದ್ದುಪಡಿಸುವಾಗ 2015ರ ನಂತರದ ಪ್ರವೇಶಕ್ಕೆ ಮಾನ್ಯತೆ ರದ್ದುಪಡಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ 2013ರಿಂದ ಪೂರ್ವಾನ್ವಯವಾಗುವಂತೆ ರದ್ದುಪಡಿಸಿ ಆದೇಶಿಸಿತ್ತು. ಆ ವೇಳೆಗೆ ಪದವಿ ಪಡೆದಿದ್ದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಯಿತು. ಯುಜಿಸಿ ಮಾನ್ಯತೆಯ ಗೊಂದಲ ನಿವಾರಣೆಯಾಗದೆ ರಾಜ್ಯಪಾಲರು ಸಹ ಪದವಿ ಪ್ರದಾನ ಮಾಡುವಂತಿಲ್ಲ. ಹೀಗಾಗಿ ನ್ಯಾಯಾಲ ಯದಿಂದ ಬರುವ ತೀರ್ಪು ನಿರ್ಣಾಯಕವಾಗಲಿದೆ ಎಂದು ಹೇಳಿದರು.

ಬರೆದ ಪರೀಕ್ಷೆಗೆ ಮಾನ್ಯತೆ ಇದ್ದೇ ಇದೆ

ನಾಗರಾಜ್‌, ದಾವಣಗೆರೆ / ಅವಿನಾಶ್‌, ಮಳವಳ್ಳಿ: ಪದವಿ ಪೂರ್ಣಗೊಳಿಸಿ ನಾಲ್ಕು ವರ್ಷವಾದರೂ ಪದವಿ ಪ್ರಮಾಣಪತ್ರ ಸಿಕ್ಕಿಲ್ಲ. ಯಾವಾಗ ಕೊಡುತ್ತೀರಿ?

ಕುಲಪತಿ: ಹೈಕೋರ್ಟ್‌ ತೀರ್ಪು ವಿದ್ಯಾರ್ಥಿಗಳ ಪರವಾಗಿ ಬರುವ ಎಲ್ಲಾ ವಿಶ್ವಾಸ ಇದೆ. ಬಳಿಕ ಪದವಿ ಪ್ರಮಾಣಪತ್ರ ನೀಡಲಾಗುವುದು.

ಮಹಮ್ಮದ್‌ ಅಶ್ರಫ್‌, ಮಂಗಳೂರು: 2013ರಲ್ಲಿ ದಾಖಲಾಗಿ ಬಿಇಡಿ ಪೂರೈಸಿದ್ದೇನೆ. ನನಗೆ ಯಾವಾಗ ಪದವಿ ಪ್ರಮಾಣಪತ್ರ ಕೊಡಿಸುತ್ತೀರಿ?

ಕುಲಪತಿ: ಸದ್ಯಕ್ಕೆ ನಿಮ್ಮ ಪದವಿಗೆ ಯಾವ ಧಕ್ಕೆಯೂ ಇಲ್ಲ. ನ್ಯಾಯಾಲಯ ತೀರ್ಪು ಬಂದ ನಂತರ ಎಲ್ಲವೂ ಸರಿ ಹೋಗುತ್ತದೆ.

ಇಂತಹದೇ ರೀತಿಯ ಪ್ರಶ್ನೆಗಳನ್ನು ಹಲವರು ಕೇಳಿದರು. ಬದಿಯಡ್ಕದ ಬಾಲಕೃಷ್ಣ ಭಟ್‌, ತುಮಕೂರಿನ ರಘು, ಕನಕಪುರ ಕೋಡಿಹಳ್ಳಿ ಸಾವಿತ್ರಮ್ಮ, ಬಳ್ಳಾರಿ ಸಂತೋಷ್‌ ಕುಮಾರ್‌, ಬೆಂಗಳೂರಿನ ಪ್ರೇಮಾಕುಮಾರಿ, ಜಯನಗರದ ಕೆ.ನಾಗರಾಜ್‌, ಮೈಸೂರಿನ ನಾಗರಾಜ್‌, ಬಸವರಾಜ ಕೊಪ್ಪಳ, ರಾಜು ಚಿತ್ರದುರ್ಗ, ವಿಜಯ ಕುಮಾರ್‌ ಜಮಖಂಡಿ, ನಾಗರಾಜ್‌ ಬಾಗಲಕೋಟೆ, ರಘು ಬೆಂಗಳೂರು, ವಿನಯಾಂಬಿಕಾ ಬೆಂಗಳೂರು, ವಿಶಾಲ್‌ ಕುಲಕರ್ಣಿ ಹುಬ್ಬಳ್ಳಿ, ಸರಸ್ವತಿ ಹೆಬ್ಬಾರ್‌ ಬೆಂಗಳೂರು, ರೂಪೇಶ್‌ ಬೆಂಗಳೂರು, ರಮೇಶ್‌ ತುಮಕೂರು, ಸುನಿತಾ ಧಾರವಾಡ, ಜಯಣ್ಣ ಬೆಂಗಳೂರು, ಜಗನ್ನಾಥ್‌ ದಾವಣಗೆರೆ ಮೊದಲಾದವರು ಕೇಳಿದರು.

ಪಂಜಾಬ್‌, ಮಹಾರಾಷ್ಟ್ರದಿಂದಲೂ ಕರೆ

ಫೋನ್‌– ಇನ್‌ಗೆ ಪಂಜಾಬ್‌, ಮಹಾರಾಷ್ಟ್ರಗಳಿಂದಲೂ ಕರೆ ಬಂತು. ಚಂಡೀಗಡದಿಂದ ಪೋನ್‌ ಮಾಡಿದ ಹರಮಿಂದರ್‌ ಸಿಂಗ್‌ ಅವರು 2006ರಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದೇನೆ. ಪದವಿಗೆ ಕೆಎಸ್‌ಒಯುನಿಂದ ಇನ್ನೂ ದೃಢೀಕರಣ ಸಿಕ್ಕಿಲ್ಲ ಎಂದರು. ಪೂರಕ ದಾಖಲೆಗಳೊಂದಿಗೆ ಕಳುಹಿಸಿಕೊಟ್ಟರೆ ತಕ್ಷಣ ದೃಢೀಕರಣ ಮಾಡಿಸಿಕೊಡುವುದಾಗಿ ಕುಲಪತಿ ಉತ್ತರಿಸಿದರು.

ಮಹಾರಾಷ್ಟ್ರದ ಕಿರಣ್‌ ಹಾಡೆ ಕರೆ ಮಾಡಿ, 2016ರಲ್ಲಿ ಎಂಎಸ್‌ಸಿ ಮಾಡಿರುವ ತಮಗೆ ಇನ್ನೂ ಪ್ರಮಾಣ ಪತ್ರ ದೊರೆತಿಲ್ಲ ಎಂದರು. ಸಮಸ್ಯೆ ಪರಿಹಾರ ಭರವಸೆ ನೀಡಿದರು.

ಕರೆಗಳ ಮಹಾಪೂರ

ಬೆಳಿಗ್ಗೆ 11ರಿಂದ ಫೋನ್‌– ಇನ್‌ ಆರಂಭವಾಗಬೇಕಿತ್ತು. 10.30ರಿಂದಲೇ ಕರೆಗಳು ಬರತೊಡಗಿದ್ದವು. ಮಧ್ಯಾಹ್ನ 1 ಗಂಟೆ ಕಳೆದರೂ ಕರೆಗಳು ಬರುತ್ತಲೇ ಇದ್ದವು. ಫೇಸ್‌ಬುಕ್‌ನಲ್ಲೂ ನೇರ ಪ್ರಸಾರ ಇತ್ತು. ದೂರವಾಣಿ ಸಂಪರ್ಕ ಸಿಗದ ಹಲವಾರು ಮಂದಿ ಫೇಸ್‌ಬುಕ್‌ ಮೂಲಕವೂ ಪ್ರಶ್ನೆ ಕೇಳಿದರು.

ಪಿಎಚ್‌.ಡಿ ಮಾಡಬಹುದೇ?

*ಚೇತನಾ, ದಾವಣಗೆರೆ: ಬಿ.ಕಾಂ ನಂತರ ದೂರ ಶಿಕ್ಷಣದಲ್ಲಿ ಎಂಬಿಎ ಪೂರೈಸಿ ಸರ್ಕಾರಿ ಹುದ್ದೆಗೆ ನೇಮಕಗೊಂಡಿದ್ದೇನೆ. ಈಗ ಪಿಎಚ್‌.ಡಿ ಮಾಡಬಹುದೇ?

ಖಂಡಿತ ಮಾಡಬಹುದು. ಪಿಎಚ್‌.ಡಿ.ಗಾಗಿ ಆರು ತಿಂಗಳ ಕೋರ್ಸ್‌ವರ್ಕ್‌ ಮಾಡಬೇಕಾಗುತ್ತದೆ. ಜತೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಗದಿ ಪಡಿಸಿರುವ ಒಂಬತ್ತು ಮಾನದಂಡಗಳ ಪ್ರಕಾರ ಪಾರ್ಟ್‌ ಟೈಮ್‌ನಲ್ಲಿ ಪಿಎಚ್‌.ಡಿ.ಗೆ ಸೇರಬಹುದು. ಮಾರ್ಗದರ್ಶನ ಮಾಡಲು ಅರ್ಹ ಪ್ರಾಧ್ಯಾಪಕರು ಇದ್ದಾರೆ.

*ಕಾವ್ಯ, ಬೆಂಗಳೂರು: 2011–12ನೇ ಸಾಲಿನಲ್ಲಿ ಎಂ.ಎಸ್ಸಿ ಮನೋವಿಜ್ಞಾನ ಕೋರ್ಸ್‌ಗೆ ಸೇರಿದ್ದೆ. ಅನಾರೋಗ್ಯದ ಕಾರಣದಿಂದ 2013–14ನೇ ಸಾಲಿನಲ್ಲಿ ಪರೀಕ್ಷೆ ಬರೆದಿಲ್ಲ. 2ನೇ ವರ್ಷದ ಪರೀಕ್ಷೆ ಬರೆಯಲು ಈಗ ಮತ್ತೊಮ್ಮೆ ಅವಕಾಶ ಕೊಡುತ್ತೀರಾ?

ಯುಜಿಸಿ ನಿಯಮಗಳ ಪ್ರಕಾರ ಕೋರ್ಸ್‌ನ ಅವಧಿಯೊಂದಿಗೆ ಉತ್ತೀರ್ಣರಾದರೆ ಮಾತ್ರ ಪದವಿ ಪ್ರದಾನ ಮಾಡಲಾಗುತ್ತದೆ. ದಾಖಲಾದ ನಾಲ್ಕು ವರ್ಷಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಸಬೇಕು. ಐದು ವರ್ಷಗಳಲ್ಲಿ ಪದವಿ ಶಿಕ್ಷಣ ಪೂರೈಸಬೇಕು.

*ನಾಗರಾಜು, ಬಾಗಲಕೋಟೆ: ಕೆಎಸ್‌ಒಯುನಲ್ಲಿ 2012–13ನೇ ಸಾಲಿನಲ್ಲಿ ದಾಖಲಾಗಿ ಎಂ.ಎ ಪೂರೈಸಿದ್ದೇನೆ. ನನ್ನ ಪದವಿ ಪ್ರಮಾಣಪತ್ರಗಳಿಗೆ ಮಾನ್ಯತೆ ಇದೆಯೇ?

ಮಾನ್ಯತೆ ರದ್ದಾದ ಬಳಿಕ 2013–15ನೇ ಸಾಲಿನಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಪದವಿ ನೀಡುವ ಕುರಿತು ಮಾತ್ರ ಗೊಂದಲಗಳಿವೆ. ನೀವು ಪಡೆದಿರುವ ಪದವಿಗೆ ಖಂಡಿತ ಮಾನ್ಯತೆ ಇದೆ.

*ರಘು, ಬೆಂಗಳೂರು: ಮಾನ್ಯತೆ ರದ್ದಾದ ಬಳಿಕ ಎಲ್ಲ ಅಂಕಪಟ್ಟಿಗಳನ್ನು ಪಡೆಯದವರು, ಪದವಿ ಪೂರ್ಣಗೊಳಿಸದವರು ಈಗ ಮತ್ತೆ ಕೋರ್ಸ್‌ನ ಮೊದಲ ವರ್ಷಕ್ಕೆ ಸೇರಬೇಕೆ?

ಹಾಗೇನು ಕಡ್ಡಾಯ ನಿಯಮವಿಲ್ಲ. ಆಸಕ್ತರು ಮತ್ತೆ ಕೋರ್ಸ್‌ಗಳಿಗೆ ಸೇರಿ ಪದವಿಯನ್ನು ಮೊದಲ ವರ್ಷದಿಂದ ಅಧ್ಯಯನ ಮಾಡಬಹುದು. ಮಾನ್ಯತೆ ರದ್ದತಿಯಿಂದ ತೊಂದರೆಗೆ ಒಳಗಾದ ವಿದ್ಯಾರ್ಥಿಗಳು ಈಗ ಮತ್ತೆ ಕೋರ್ಸ್‌ಗೆ ಸೇರಿದರೆ ಬೋಧನಾ ಶುಲ್ಕದಲ್ಲಿ ಅರ್ಧದಷ್ಟು ರಿಯಾಯಿತಿ ನೀಡಲಾಗುವುದು.

*ನಾಗರಾಜ ನಾಯಕ, ಬೆಂಗಳೂರು: ನಾನು 2009–10ನೇ ಸಾಲಿನಲ್ಲಿ ಬಿ.ಎ.ಗೆ ದಾಖಲಾಗಿದ್ದೆ. ಪದವಿ ವ್ಯಾಸಂಗದಲ್ಲಿ ಒಂದು ವಿಷಯದಲ್ಲಿ ಮಾತ್ರ ಅನುತ್ತೀರ್ಣನಾಗಿದ್ದೇನೆ. ಆ ವಿಷಯದ ಪರೀಕ್ಷೆ ಬರೆಯಲು ಒಂದೇ ಒಂದು ಅವಕಾಶ ಕೊಡುವಿರಾ?

ಕೋರ್ಸ್‌ಗಳನ್ನು ಪೂರ್ಣಗೊಳಿಸಲು ನಿಗದಿತ ವರ್ಷಗಳ ಕಾಲಾವಧಿ ಇದೆ. ನಿಮ್ಮ ಬ್ಯಾಚ್‌ನ ಬಹುತೇಕ ವಿದ್ಯಾರ್ಥಿಗಳು ಹೀಗೆ ಒಂದೆರಡು ವಿಷಯಗಳಲ್ಲಿ ಉತ್ತೀರ್ಣರಾಗಲು ಪರೀಕ್ಷೆ ಬರೆಯಲು ಇಚ್ಛಿಸಿದರೆ, ಅಕಾಡೆಮಿಕ್‌ ಕೌನ್ಸಿಲ್‌ನಲ್ಲಿ ವಿಷಯ ಪ್ರಸ್ತಾಪಿಸಿ ತೀರ್ಮಾನಿಸಲಾಗುವುದು.

*ಚಂದ್ರಶೇಖರ, ಶಿವಮೊಗ್ಗ: ಎಸ್ಸೆಸ್ಸೆಲ್ಸಿ, ಪಿಯುಸಿಗೆ ಸಮವಾದ ಕೋರ್ಸ್‌ಗಳನ್ನು ಕೆಎಸ್‌ಒಯು ನಡೆಸುತ್ತದೆಯೇ?

ಇಲ್ಲ. ಪ್ರೌಢ ಶಿಕ್ಷಣ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ವಾರ್ಷಿಕ ಪರೀಕ್ಷೆಗೆ ಹಾಜರಾಗಿಯೇ ಈ ತರಗತಿಗಳ ಪ್ರಮಾಣಪತ್ರ ಪಡೆಯಬೇಕು.

*ಸಾಗರ್‌, ವಿಜಯಪುರ: ದೂರ ಶಿಕ್ಷಣ ಮೂಲಕ ಎಂಬಿಎ ಮಾಡಬಹುದೇ?

ಹೌದು. ಈ ಕೋರ್ಸ್‌ಗೆ ಸೇರಿದವರಿಗಾಗಿ ನಮ್ಮ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳಲ್ಲಿ ವಾರಾಂತ್ಯದ ತರಗತಿಗಳನ್ನು ನಡೆಸುತ್ತೇವೆ. ಒಂದು ವಾರದ ಸಂಪರ್ಕ ಕಾರ್ಯಕ್ರಮ ನಡೆಸುತ್ತೇವೆ. ಅಧ್ಯಯನ ಸಾಮಗ್ರಿ ನೀಡುತ್ತೇವೆ.

*ಎಸ್‌.ರಮಾ, ಬೆಂಗಳೂರು: ನನ್ನ ಸ್ನೇಹಿತೆ ಪದವಿಯನ್ನು ರೆಗ್ಯುಲರ್‌ ಆಗಿ ಮಾಡದೆ, ವಯಸ್ಸಿನ ಆಧಾರದ ಮೇಲೆ 2008–09ರಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾಳೆ. ಅವಳ ಪ್ರಮಾಣಪತ್ರಕ್ಕೆ ಮಾನ್ಯತೆ ಇದೆಯೇ, ಅದನ್ನು ಸರ್ಕಾರಿ ಹುದ್ದೆಗೆ ಪರಿಗಣಿಸುತ್ತಾರೆಯೇ, ಅವರು ಪಿಎಚ್‌.ಡಿ ಮಾಡಬಹುದೇ?

ಹುದ್ದೆ ನೀಡಲು ಪ್ರಮಾಣಪತ್ರದ ನೈಜತೆಯ ಕುರಿತು ಪರಿಶೀಲನೆಯ ಅರ್ಜಿ ವಿಶ್ವವಿದ್ಯಾಲಯಕ್ಕೆ ಬಂದರೆ, ನಾವು ನೀಡಿದ ಪದವಿಯನ್ನು ಪರಿಗಣಿಸುವಂತೆ ಮನವಿ ಮಾಡುತ್ತೇವೆ. ಸ್ನಾತಕೋತ್ತರ ಪದವಿ ಆಗಿರುವುದರಿಂದ ಪಿಎಚ್‌.ಡಿ ಮಾಡಲು ಅವರು ಅರ್ಹರು.

*ಪಲ್ಲವಿ, ಬೆಂಗಳೂರು: ವಿಶ್ವವಿದ್ಯಾಲಯದ ಎಲ್ಲ ಶುಲ್ಕಗಳನ್ನು ಆನ್‌ಲೈನ್‌ ಮೂಲಕ ಪಾವತಿಸಲು ಅವಕಾಶ ಮಾಡಿಕೊಡಿ.

ಕೋರ್ಸ್‌ಗೆ ದಾಖಲಾಗುವ ಅಭ್ಯರ್ಥಿಗೆ ಯುಜಿಸಿ ನಿಗದಿಪಡಿಸಿರುವ ಅರ್ಹತೆಗಳು ಇವೆಯೇ ಎಂಬುದನ್ನು ಪ್ರಾದೇಶಿಕ ಕೇಂದ್ರದಲ್ಲಿ ಪರಿಶೀಲಿಸಬೇಕಾಗುತ್ತದೆ. ಆ ಬಳಿಕವೇ ಚಲನ್‌ ಮೂಲಕ ಶುಲ್ಕ ಪಾವತಿಸಲು ಅವಕಾಶ ಮಾಡಿಕೊಟ್ಟಿದ್ದೇವೆ.

ಪ್ರತಿ ಕೋರ್ಸ್‌ಗೆ ಸಾವಿರಾರು ರೂಪಾಯಿ ಶುಲ್ಕ ಇರುತ್ತದೆ. ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ವಿಧಾನ ಬಹುತೇಕರಿಗೆ ಗೊತ್ತಿರುವುದಿಲ್ಲ. ಅಲ್ಲದೆ, ದೊಡ್ಡ ಮೊತ್ತದ ವ್ಯವಹಾರಕ್ಕೆ ಆನ್‌ಲೈನ್‌ ಬ್ಯಾಂಕಿಂಗ್‌ನ ಹೆಚ್ಚು ಶುಲ್ಕ ಕಟ್ಟಬೇಕಾಗುತ್ತದೆ. ಹಾಗಾಗಿ ಸದ್ಯಕ್ಕೆ ಆನ್‌ಲೈನ್‌ ಪಾವತಿಯನ್ನು ಅಳವಡಿಸಿಕೊಂಡಿಲ್ಲ.

ಶುಲ್ಕ ವಿನಾಯಿತಿ

ಬಿಪಿಎಲ್‌ ಕಾರ್ಡ್‌ ಹೊಂದಿರುವ ಮಹಿಳಾ ಅಭ್ಯರ್ಥಿಗಳು ಕೋರ್ಸ್‌ಗಳಿಗೆ ಸೇರಲು ಬೋಧನಾ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಮಾನ್ಯತೆ ರದ್ದತಿಯಿಂದ ತೊಂದರೆಗೆ ಒಳಗಾದವರು ಮತ್ತೆ ಕೋರ್ಸ್‌ಗೆ ಸೇರಿದರೆ, ಶುಲ್ಕ ರಿಯಾಯಿತಿ ನೀಡಲಾಗುತ್ತಿದೆ.

ಪದವಿ ಕೋರ್ಸ್‌ಗೆ ವಿದ್ಯಾರ್ಹತೆ?

‘ಮೂರು ವರ್ಷಗಳ ಪದವಿ ಕೋರ್ಸ್‌ಗಳಿಗೆ ಸೇರಲು 10+2 ಮಾದರಿಯ ಪದವಿಪೂರ್ವ ಶಿಕ್ಷಣವನ್ನು ಕಡ್ಡಾಯವಾಗಿ ಪೂರೈಸಿರಬೇಕು’ ಎಂದು ಡಿ.ಶಿವಲಿಂಗಯ್ಯ ತಿಳಿಸಿದರು.

‘ಎರಡು ವರ್ಷಗಳ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ದಾಖಲಾಗಲು 12+3 (ಪಿಯುಸಿ ಮತ್ತು ಪದವಿ) ಮಾದರಿಯ ಶಿಕ್ಷಣ ಪಡೆದಿರಬೇಕು’ ಎಂದು ಅವರು ಮಾಹಿತಿ ನೀಡಿದರು.

ಪ್ರವೇಶ ಆರಂಭ

ಜುಲೈ 25 : ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ಕೊನೆಯ ದಿನಾಂಕ

ಆಗಸ್ಟ್‌ 31 : ₹ 400 ದಂಡ ಶುಲ್ಕದೊಂದಿಗೆ ಪ್ರವೇಶ ಪಡೆಯಲು ಕೊನೆಯ ದಿನ

ಮಾಹಿತಿಗೆ:http://ksoumysore.karnataka.gov.in

ಪ್ರಮುಖ ಸಂಪರ್ಕ ಸಂಖ್ಯೆಗಳು

ಕುಲಪತಿ: 944835831, ಶೈಕ್ಷಣಿಕ : 0821-2512471, ಪರೀಕ್ಷೆ ಮಾಹಿತಿ: 0821-2519942, ಪ್ರವೇಶಾತಿ ಕುಂದುಕೊರತೆ: 0821-2519950, ಸಿದ್ಧಪಾಠ ವಿಭಾಗ: 0821-2500984

ಅಂಕಿ–ಅಂಶ

31

ಕೆಎಸ್‌ಒಯುನಲ್ಲಿರುವ ಕೋರ್ಸ್‌ಗಳು

18

ಕೆಎಸ್‌ಒಯು ಪ್ರಾದೇಶಿಕ ಕೇಂದ್ರಗಳು

65

ರಾಜ್ಯದಲ್ಲಿನ ಅಧ್ಯಯನ ಕೇಂದ್ರಗಳು

90

ಬೋಧಕರ ಸಂಖ್ಯೆ

300

ಬೋಧಕೇತರ ಸಿಬ್ಬಂದಿ

13,000

ಕಳೆದ ಜುಲೈ ಮತ್ತು ಜನವರಿಯಲ್ಲಿ ದಾಖಲಾದ ಅಭ್ಯರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT