ಶುಕ್ರವಾರ, ನವೆಂಬರ್ 22, 2019
27 °C

ನರೇಂದ್ರ ಮೋದಿಯಿಂದ ರಾಜ್ಯದ ಜನರ ನಿರ್ಲಕ್ಷ್ಯ: ಕುಮಾರಸ್ವಾಮಿ ಆರೋಪ

Published:
Updated:

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದರು. ಹೀಗೆ ಮಾಡುವ ಮೂಲಕ ಒಂದು ರೀತಿ ಅವರು ರಾಜ್ಯದ ಜನರನ್ನು ನಿರ್ಲಕ್ಷಿಸಿದಂತೆಯೇ ಆಯಿತು’ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ನೆರೆಹಾನಿ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಏಕಾಂಗಿಯಾಗಿ ಓಡಾಡಿದರು. ಅವರನ್ನು ಶ್ಲಾಘಿಸುತ್ತೇನೆ’ ಎಂದರು.

‘ಯಡಿಯೂರಪ್ಪ ಅವರ ಕಾಳಜಿಯನ್ನು ನಾನು ಮೆಚ್ಚುತ್ತೇನೆ. ಅದರೆ ಇತರ ಸಚಿವರಿಂದ ಅವರಿಗೆ ಸಾಕಷ್ಟು ಸ್ಪಂದನೆ ಸಿಗಲಿಲ್ಲ. ಮುಖ್ಯಮಂತ್ರಿ ಮತ್ತು ಸಚಿವರ ನಡುವೆ ಹೊಂದಾಣಿಕೆ ಇದ್ದಂತಿಲ್ಲ. ಇಂಥ ಸ್ಥಿತಿಯಲ್ಲಿ ಸರ್ಕಾರಕ್ಕೆ ಕೊಂಚ ಕಾಲಾವಕಾಶ ಕೊಡಬೇಕು. ಇದು ನನ್ನ ಅನುಭವ. ಇದನ್ನು ಸರ್ಕಾರದ ಬಗ್ಗೆ ನಾನು ಮೃದು ಧೋರಣೆ ತಳೆದಿದ್ದೇನೆ ಎಂದು ವ್ಯಾಖ್ಯಾನಿಸುವುದು ತಪ್ಪು’ ಎಂದು ನುಡಿದರು.

‘ಕೆಲವರು ನಾನು ಫೋನ್‌ ಟ್ಯಾಪಿಂಗ್‌ಗೆ ಹೆದರಿ ಸರ್ಕಾರದ ಬಗ್ಗೆ ಮೃದು ಧೋರಣೆ ತಳೆದಿದ್ದೇನೆ ಎಂದು ಹೇಳುತ್ತಿದ್ದಾರೆ. ಈ ವ್ಯಾಖ್ಯಾನವೂ ಸರಿಯಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಈ ಸರ್ಕಾರದ ಸ್ಥಿರತೆ ಬಗ್ಗೆ ಅದರ ಭಾಗವಾಗಿರುವ ಸಚಿವರಲ್ಲಿಯೇ ಪ್ರಶ್ನೆಗಳಿವೆ. ನಾವೆಲ್ಲರೂ ಚುನಾವಣೆಗಳಿಗೆ ಸಿದ್ಧರಾಗಬೇಕಿದೆ. ಈ ಮಾತನ್ನು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ’ ಎಂದರು.

‘ಪ್ರವಾಹದ ನಂತರ ಬೆಳಗಾವಿಗೆ ನಾನು ಹೋಗಿದ್ದೇನೆ. ಆದರೆ ಸಿದ್ದರಾಮಯ್ಯ ಅವರಂತೆ ಆರೋಪ ಮಾಡುವುದಿಲ್ಲ. ಪಿಡಿ ಖಾತೆಯಲ್ಲಿ ಹಣ ಇದೆ.  ಸರ್ಕಾರದಿಂದ ಮಾಹಿತಿ ಪಡೆದಂತೆ ಕೆಲವೆಡೆ ₹ 1 ಲಕ್ಷ ಪಾವತಿ ಆಗಿರುವುದು ನಿಜ. ಆದರೆ ನೇಕಾರರು, ಮೀನುಗಾರರಿಗೆ ಮಾತ್ರ ದುಡ್ಡು ಹೋಗಿಯೇ ಇಲ್ಲ’ ಎಂದು ಅವರು ನುಡಿದರು.


ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು.

‘ನಮಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಿ ಎಂದು ಜನ ಕೇಳುತ್ತಿದ್ದಾರೆ. ನನ್ನ ಅನುಭವವನ್ನು ಸರ್ಕಾರದ ಜತೆ ಹಂಚಿಕೊಳ್ಳಲು ಸಿದ್ಧ. ನಾನು ಅಧಿಕಾರದಲ್ಲಿ ಇದ್ದಿದ್ದರೆ ಕಬ್ಬಿನ ಗದ್ದೆಗೆ ಹೆಕ್ಟೇರ್‌ಗೆ ₹ 25 ಸಾವಿರವಲ್ಲ, ₹ 60 ಸಾವಿರ ಪರಿಹಾರ ಕೊಡುತ್ತಿದ್ದೆ‘ ಎಂದು ತಿಳಿಸಿದರು.

‘ಈಗ ರೈತರ ಸಾಲಮನ್ನಾ ಆಗಿದೆ. ನನ್ನ ಮಾತನ್ನು ಜನ ನಂಬಿರಲಿಲ್ಲ. ಬಿಜೆಪಿ ಸರ್ಕಾರವು ನನ್ನ ಬಜೆಟ್‌ ಒಪ್ಪಿಕೊಂಡಿದೆ. ಶಿಕಾರಿಪುರಕ್ಕೆ ₹ 850 ಕೋಟಿ ಕೊಟ್ಟದ್ದೇ ಈ ಸರ್ಕಾರದ ಬಹುದೊಡ್ಡ ಸಾಧನೆ. ವೈದ್ಯಕೀಯ ಕಾಲೇಜುಗಳಿಗೆ ಈ ಸರ್ಕಾರ ಅಡಿಗಲ್ಲು ಹಾಕುತ್ತಿದೆ. ಟೆಂಡರ್ ಆಗಿದೆಯಾ?’ ಎಂದು ಪ್ರಶ್ನಿಸಿದರು.

‘ಸರ್ಕಾರದಲ್ಲಿ ದುಡ್ಡಿದೆ, ಆದರೆ ಎಲ್ಲಿಗೆ ಹೋಗುತ್ತಿದೆ? ಅದನ್ನು ಹೇಗೆ ಖರ್ಚು ಮಾಡುತ್ತಿದೆ?’ ಎಂದು ಪ್ರಶ್ನಿಸಿದ ಅವರು, ಸರ್ಕಾರ ಸ್ವಲ್ಪ ಸಮಯ ಕೆಲಸ ಮಾಡಲಿ ಎಂದು ಜನರನ್ನು ಉಳಿಸುವ ಸಲುವಾಗಿ ನಾನು ಹೇಳಿದ್ದೇನೆಯೇ ಹೊರತು ಸರ್ಕಾರದ ಮೇಲಿನ ಮೃದು ಧೋರಣೆಯಿಂದಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಿದ್ದರಾಮಯ್ಯ ಅವಧಿಯಲ್ಲಿ ಆರಂಭವಾದ ಮನೆಗಳೇ ಈವರೆಗೆ ಪೂರ್ಣಗೊಂಡಿಲ್ಲ. ಅರೆಬರೆಯಾಗಿರುವ ಅಂಥ ಮನೆಗಳು ಪೂರ್ಣಗೊಳ್ಳಲು ₹ 29 ಸಾವಿರ ಕೋಟಿ ಕೊಡಬೇಕಿದೆ’ ಎಂದು ಮಾಹಿತಿ ನೀಡಿದರು.

‘ನಾನು ಹೇಳುದ ರೀತಿಯಲ್ಲಿ ಪರಿಹಾರ ನೀಡಿದರೆ ನಾನು ಯಾರಿಗೇ ಆದರೂ ಬೆಂಬಲ ನೀಡಲು ಸಿದ್ದ. ಸಿದ್ದರಾಮಯ್ಯ ಅವರಿಗೂ ಬೆಂಬಲ ನೀಡುತ್ತೇನೆ. ಮತ್ತೆ ಚುನಾವಣೆ ನಡೆದರೆ ಅತಂತ್ರ ಸರ್ಕಾರವೇ ಗತಿ. ನನ್ನ ಪಕ್ಷದ 15 ಶಾಸಕರು ಹೊರಗೆ ಹೋಗುತ್ತಾರೆ ಎನ್ನುತ್ತಿದ್ದಾರೆ. ಅದೆಲ್ಲ ಸುಳ್ಳು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)