ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದೂವರೆ ತಿಂಗಳಲ್ಲೇ 908 ಮಕ್ಕಳ ಮೇಲೆ ದೌರ್ಜನ್ಯ!

ರಾಜ್ಯದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣ l ಬಾಲ್ಯದಲ್ಲೇ ಕಮರುತ್ತಿರುವ ಕನಸುಗಳು
Last Updated 4 ಜುಲೈ 2019, 19:43 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಕೇವಲ ಐದೂವರೆ ತಿಂಗಳಲ್ಲಿ ‘ಪೋಕ್ಸೊ’ ಕಾಯ್ದೆಯಡಿ 908 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಮಕ್ಕಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇನ್ನೊಂದೆಡೆ 238 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳೂ ವರದಿಯಾಗಿದ್ದು, ಇದು ಸಮಾಜದಲ್ಲಿ ಹೆಚ್ಚುತ್ತಿರುವ ಮಾನಸಿಕ ಅನಾರೋಗ್ಯವನ್ನುಪ್ರತಿಬಿಂಬಿಸುತ್ತಿದೆ.

ಮಕ್ಕಳ ಮೇಲೆ ಎಸಗುತ್ತಿರುವ ಲೈಂಗಿಕ ದೌರ್ಜನ್ಯಗಳು, ಅವರ ಬಾಲ್ಯದ ಹೊಂಗನಸನ್ನೇ ಹೊಸಕಿ ಹಾಕುತ್ತಿವೆ. ಪೈಶಾಚಿಕ ಕೃತ್ಯಕ್ಕೆ ಮಕ್ಕಳ ಭವಿಷ್ಯವೇ ಹಾಳಾಗುತ್ತಿವೆ.

ಸಂಬಂಧಿಕರು, ನೆರೆಯ ಪರಿಚಯಸ್ಥರಿಂದಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚು ನಡೆಯುತ್ತಿವೆ. ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡಿರುವುದು ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣಗಳೂ ಆಗಾಗ ವರದಿಯಾಗುತ್ತಿವೆ.

ಪೋಕ್ಸೊ ಕಾಯ್ದೆಯಡಿ ಎರಡು ಬಗೆಯ ಪ್ರಕರಣಗಳು ದಾಖಲಾಗುತ್ತಿವೆ. ಮೊದಲನೆಯದ್ದು–ಮಕ್ಕಳ ಮೇಲೆ ಬಲವಂತವಾಗಿ ನಡೆಯುವ ಲೈಂಗಿಕ ದೌರ್ಜನ್ಯವಾದರೆ, ಇನ್ನೊಂದು–ಹದಿನೆಂಟು ವರ್ಷದೊಳಗಿನವರ ಮೇಲೆ ನಡೆಯುವ ಒಪ್ಪಿತ ಲೈಂಗಿಕ ಕೃತ್ಯದ ವ್ಯತಿರಿಕ್ತ ಪರಿಣಾಮ.

ಪೋಷಕರು ಮರ್ಯಾದೆಗೆ ಹೆದರುವುದರಿಂದ ಎಷ್ಟೋ ಪ್ರಕರಣಗಳು ವರದಿಯಾಗುತ್ತಲೇ ಇಲ್ಲ. ಇನ್ನೊಂದೆಡೆ ಬೆಳಕಿಗೆ ಬಂದ ಪ್ರಕರಣಗಳನ್ನು ಊರಿನ ಹಿರಿಯರು ರಾಜೀ ಪಂಚಾಯಿತಿ ನಡೆಸಿ ಮುಚ್ಚಿ ಹಾಕುತ್ತಿದ್ದಾರೆ. ಕೆಲ ಪ್ರೇಮ ಪ್ರಕರಣಗಳಲ್ಲಿ ಬಾಲಕಿ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಪೋಷಕರು ಮಹತ್ವ ನೀಡುತ್ತಿಲ್ಲ. ಬದಲಾಗಿ ಹುಡುಗಿಗೆ 18 ವರ್ಷ ತುಂಬಿದ ತಕ್ಷಣವೇ ಹುಡುಗನೊಂದಿಗೆ ಮದುವೆ ಮಾಡಿಸಲು ಮುಂದಾಗುತ್ತಿದ್ದಾರೆ.

‘ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳ ಒಳಗೆ ಪೂರ್ಣಗೊಳಿಸಿ, ಆರು ತಿಂಗಳ ಒಳಗೆ ವಿಚಾರಣೆ ಮುಗಿಸಬೇಕಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಪ್ರಮಾಣ ಹೆಚ್ಚಿದೆ. ಉಳಿದ ಅತ್ಯಾಚಾರ ಪ್ರಕರಣಗಳ ವಿಚಾರಣೆ ವಿಳಂಬವಾಗುವುದರಿಂದ ಸಂತ್ರಸ್ತೆಯೇ ಹೇಳಿಕೆ ಬದಲಿಸುತ್ತಿರುವ ಸನ್ನಿವೇಶಗಳನ್ನೂ ಎದುರಿಸುತ್ತಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಆರೋಗ್ಯ ತಪಾಸಣೆ ವೇಳೆ ಕಂಡುಬಂದ ತಕ್ಷಣವೇ ವೈದ್ಯರೂ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಶಾಲೆಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿರುವಾಗಲೂ ಬಾಲಕಿ ಗರ್ಭಿಣಿಯಾಗಿರುವ ಸಂಗತಿ ಬೆಳಕಿಗೆ ಬರುತ್ತಿವೆ. ಹೀಗಾಗಿಯೇ ಇಂದು ಮೊದಲಿಗಿಂತಲೂ ಹೆಚ್ಚು ಪ್ರಕರಣಗಳು ಗಮನಕ್ಕೆ ಬರುತ್ತಿವೆ. ದೆಹಲಿಯ ‘ನಿರ್ಭಯಾ’ ಪ್ರಕರಣದ ನಂತರ ಅತ್ಯಾಚಾರ ವಿಷಯ ಮತ್ತಷ್ಟು ಮಹತ್ವ ಪಡೆದುಕೊಂಡಿದೆ’ ಎಂದು ವಿಶ್ಲೇಷಿಸಿದರು.

ಪರಿಚಯಸ್ಥರಿಂದಲೇ ದೌರ್ಜನ್ಯ ಹೆಚ್ಚು

‘ಶೇ 90ರಷ್ಟು ಪ್ರಕರಣಗಳಲ್ಲಿ ಗೊತ್ತಿರುವುದರಿಂದಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಮಾನಸಿಕ ಹಾಗೂ ದೈಹಿಕ ಶಕ್ತಿ ಕಡಿಮೆ ಇರುವ ಮಕ್ಕಳ ಮೇಲೆಯೇ ಹೆಚ್ಚು ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ’ ಎಂದು ದಾವಣಗೆರೆಯ ಎಸ್‌.ಎಸ್‌. ಆಸ್ಪತ್ರೆಯ ಮಕ್ಕಳ ಮನೋರೋಗ ತಜ್ಞೆಡಾ. ಎಚ್‌.ಎನ್‌. ಆಶಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂತ್ರಸ್ತ ಮಕ್ಕಳು ತಮ್ಮ ವಯಸ್ಸಿಗಿಂತ ಚಿಕ್ಕವರಂತೆ ವರ್ತಿಸತೊಡಗುತ್ತಾರೆ. ಮಾದಕ ವ್ಯಸನಿಗಳಾಗುವುದು, ಕೀಳರಿಮೆ ಬೆಳೆಸಿಕೊಂಡು ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಯತ್ನಿಸುವ ಸಾಧ್ಯತೆಯೂ ಇದೆ. ದೊಡ್ಡವರಾದ ಬಳಿಕ ತಾವೂ ಅಂತಹದೇ ಕೃತ್ಯ ಎಸಗಲು ಮುಂದಾಗಬಹುದು. ಇನ್ನು ಕೆಲವರು ಲೈಂಗಿಕತೆಯನ್ನೇ ಕೆಟ್ಟದ್ದು ಎಂದು ಭಾವಿಸುವುದರಿಂದ ಭವಿಷ್ಯದಲ್ಲಿ ಅವರ ದಾಂಪತ್ಯ ಜೀವನದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು’ ಎಂದು ವಿವರಿಸಿದರು.

ಪೋಕ್ಸೊ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದ್ದರಿಂದ ಇಂದು ಹೆಚ್ಚು ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

– ಆರ್‌. ಚೇತನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT