ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ ಬಂದೋಬಸ್ತ್‌ಗೆ ಗರ್ಭಿಣಿ ಕಾನ್‌ಸ್ಟೆಬಲ್‌

ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 26 ಅಕ್ಟೋಬರ್ 2019, 20:03 IST
ಅಕ್ಷರ ಗಾತ್ರ

ಮಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಶುಕ್ರವಾರ ಉಡುಪಿ ಜಿಲ್ಲೆಗೆ ಭೇಟಿನೀಡಿ ಹಿಂದಿರುಗುತ್ತಿದ್ದ ವೇಳೆ ಮೂಲ್ಕಿ ಪೊಲೀಸ್‌ ಠಾಣೆಯ ತುಂಬು ಗರ್ಭಿಣಿ ಕಾನ್‌ಸ್ಟೆಬಲ್‌ ಒಬ್ಬರನ್ನು ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜಿಸಿದ್ದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಗರ್ಭಿಣಿ ಕಾನ್‌ಸ್ಟೆಬಲ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಠಿ ಹಿಡಿದು ಕರ್ತವ್ಯದಲ್ಲಿರುವ ಫೋಟೊ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅದರೊಂದಿಗೆ ‘ಸಹೃದಯಿ’ ಎಂಬ ನಾಮಧೇಯದಡಿ ಸುದೀರ್ಘವಾದ ಬರಹವೊಂದನ್ನು ಹಾಕಿರುವ ವ್ಯಕ್ತಿ, ‘ನೀವೂ ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಲ್ಲವೇ? ನಿಮಗೂ ಅಕ್ಕ, ತಂಗಿಯರಿಲ್ಲವೇ? ನಿಮ್ಮ ಮನೆಯ ಹೆಣ್ಣು ಮಕ್ಕಳಾಗಿದ್ದರೆ ಹೀಗೆಯೇ ವರ್ತಿಸುತ್ತಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.

‘ತುಂಬು ಗರ್ಭಿಣಿಯನ್ನೇ ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜಿಸಿ ಎಂದು ಉಪ ಮುಖ್ಯಮಂತ್ರಿಯವರು ಹೇಳಿದ್ದರೇ? ಅಥವಾ ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಬೇರೆ ಪೊಲೀಸ್‌ ಸಿಬ್ಬಂದಿ ಇರಲಿಲ್ಲವೇ’ ಎಂದೂ ಕೇಳಿದ್ದಾರೆ.

ವಿಚಾರಣೆಗೆ ಆದೇಶ:ಘಟನೆ ಕುರಿತು ವಿಚಾರಣೆಗೆ ಆದೇಶಿಸಿರುವ ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು, ಸಮಗ್ರ ಮಾಹಿತಿ ಕಲೆಹಾಕಿ ಭಾನುವಾರದೊಳಗೆ ವರದಿ ನೀಡುವಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ ಗೌಡ ಅವರಿಗೆ ಆದೇಶಿಸಿದ್ದಾರೆ.

‘ಇಂತಹ ವರ್ತನೆಯನ್ನು ಒಪ್ಪಲಾಗದು. ಇಲಾಖೆಯ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ. ತಕ್ಷಣವೇ ಆ ಸಿಬ್ಬಂದಿಯನ್ನು ಹೆರಿಗೆ ರಜೆ ಮೇಲೆ ಕಳುಹಿಸಿ. ಭಾನುವಾರ ಬೆಳಿಗ್ಗೆಯೊಳಗೆ ಮೂಲ್ಕಿ ಠಾಣೆ ಇನ್‌ಸ್ಪೆಕ್ಟರ್‌ ಲಿಖಿತ ವಿವರಣೆ ಸಲ್ಲಿಸಬೇಕು. ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಕಮಿಷನರ್‌ ವಾಟ್ಸ್‌ ಆ್ಯಪ್‌ ಗುಂಪಿನಲ್ಲೇ ಪ್ರತಿಕ್ರಿಯಿಸಿದ್ದಾರೆ.

ವಿಶ್ರಾಂತಿ ನೀಡಲಾಗಿತ್ತು:ಘಟನೆ ಕುರಿತು ಪ್ರತಿಕ್ರಿಯಿಸಿದ ಎಸಿಪಿ ಶ್ರೀನಿವಾಸಗೌಡ, ‘ಗರ್ಭಿಣಿ ಕಾನ್‌ಸ್ಟೆಬಲ್‌ ವೈದ್ಯಕೀಯ ರಜೆ ಪಡೆದಿರಲಿಲ್ಲ. ನಿತ್ಯವೂ ಅವರಿಗೆ ಹೆಚ್ಚು ಸಮಯ ವಿಶ್ರಾಂತಿ ನೀಡಲಾಗಿತ್ತು. ಶುಕ್ರವಾರ ಮನೆಗೆ ಊಟಕ್ಕೆ ತೆರಳುತ್ತಿದ್ದ ಅವರು, ಸ್ವಯಂಪ್ರೇರಿತರಾಗಿ ಬಂದು ಸಿಬ್ಬಂದಿ ಜೊತೆ ನಿಂತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ವಿಚಾರಣೆ ನಡೆಸಿ, ವರದಿ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT