ಬುಧವಾರ, ನವೆಂಬರ್ 13, 2019
28 °C

ರಾಜಕಾರಣ | ಯಡಿಯೂರಪ್ಪ ಪರ ಬೊಮ್ಮಾಯಿ, ಪ್ರಹ್ಲಾದ ಜೋಶಿ ಬ್ಯಾಟಿಂಗ್

Published:
Updated:

ಬೆಳಗಾವಿ/ಹುಬ್ಬಳ್ಳಿ: ಅನರ್ಹರ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಟೇಪ್ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ ನಂತರ ಇದೀಗ ಯಡಿಯೂರಪ್ಪ ಅವರ ನೆರವಿಗೆ ಬಿಜೆಪಿ ಹಿರಿಯ ನಾಯಕರು ಧಾವಿಸಿದ್ದಾರೆ.

‘ನಾವು ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ. ಅವರೇ ನಮ್ಮನ್ನು ಕಳುಹಿಸಿದರು’ ಎಂದು ಅನರ್ಹ ಶಾಸಕರು ಹೇಳಿದ್ದಾರೆ. ಈ ಹೇಳಿಕೆಗಳ ಕುರಿತು ತನಿಖೆ ನಡೆಯಬೇಕಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ‘ಹುಬ್ಬಳ್ಳಿಯಲ್ಲಿ ಕೋರ್ ಕಮಿಟಿ ಸಭೆಯೇ ನಡೆದಿಲ್ಲ. ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸಭೆಯಷ್ಟೇ ನಡೆಯಿತು’ ಎಂದು ಆಡಿಯೊ ಟೇಪ್ ವಿಚಾರವನ್ನೇ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: 'ಕೈ'ಗೆ ಸಿಕ್ಕಿತು ಆಡಿಯೊ ಅಸ್ತ್ರ: ಯಡಿಯೂರಪ್ಪ, ಶಾ ರಾಜೀನಾಮೆಗೆ ಆಗ್ರಹ

ಹತಾಶ ಕಾಂಗ್ರೆಸ್‌: ಬೊಮ್ಮಾಯಿ ಟೀಕೆ

ಬೆಳಗಾವಿ ವರದಿ: ‘ಶಾಸಕರಿಗೆ ಆಮಿಷ ಒಡ್ಡಿ ಮೈತ್ರಿ ಸರ್ಕಾರ ಕೆಡವಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಿಜೆಪಿ ಸರ್ಕಾರ ವಜಾಗೊಳಿಸಬೇಕು’ ಎಂದು ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಕಾಂಗ್ರೆಸ್‌ನವರು ಅಧಿಕಾರ ಕಳೆದುಕೊಂಡು ಹತಾಶರಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಮ್ಮಿಶ್ರ ಸರ್ಕಾರದ ಆಂತರಿಕ ಕಚ್ಚಾಟದಿಂದಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು‌ ರಾಜೀನಾಮೆ ನೀಡಿದ್ದಾರೆ. ಇದನ್ನು ಬಿಟ್ಟು ಬಿಜೆಪಿಯವರನ್ನು ಗುರಿಯಾಗಿಸಿ ರಾಜ್ಯಪಾಲರಿಗೆ ಮನವಿ ಕೊಟ್ಟಿರುವುದು ರಾಜಕೀಯ ಪ್ರೇರಿತವಾದುದಾಗಿದೆ ಎಂದರು. ಈ ರೀತಿಯ ಸರ್ಕಸ್‌ಗಳನ್ನು ಕಾಂಗ್ರೆಸ್‌ನವರು ನಿಲ್ಲಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಅಂತರಾಳದ ವಾಸ್ತವ ವೈರಲ್ ಆಗಬಾರದಿತ್ತು: ಸಚಿವ ವಿ.ಸೋಮಣ್ಣ

ಕೆಲಸವಿಲ್ಲದ ಕಾಂಗ್ರೆಸ್‌: ಪ್ರಹ್ಲಾದ ಜೋಶಿ  

ಹುಬ್ಬಳ್ಳಿ ವರದಿ: ಬಿಜೆಪಿ ಅಭೆಯಲ್ಲಿ ಅನರ್ಹ ಶಾಸಕರ ಬಗ್ಗೆ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾದ ವಿಚಾರ ಹಾಗೂ ಕಾಂಗ್ರೆಸ್ ದೂರು ನೀಡಿರುವ ವಿಚಾರದ ಬಗ್ಗೆ ನನಗೆ ಅರಿವಿದೆ. ಈ ಬಗ್ಗೆ ಈಗಾಗಲೇ ಪಕ್ಷದ ಮುಖಂಡರು ಸ್ಪಷ್ಟನೆ‌ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಸಿದ್ದರಾಮಯ್ಯ ಹಾಗೂ ದಿನೇಶ ಗುಂಡೂರಾವ್ ಅವರಿಗೆ ಅಸಮಾಧಾನವಿತ್ತು ಎಂದು ಹೇಳಿದರು.

ಕೆಲಸವಿಲ್ಲದ ಕಾಂಗ್ರೆಸ್‌ನವರು ಮಾಡುತ್ತಿರುವ ಇಂಥ ಆರೋಪಗಳಿಗೆ ಯಾವುದೇ ಅರ್ಥವಿಲ್ಲ ಎಂದು ಟೀಕಿಸಿದರು.

ಸಮ್ಮಿಶ್ರ ಸರ್ಕಾರ ಪತನಕ್ಕೆ ಡಿಕೆಶಿ ಕಾರಣ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಇದು ಕಾಂಗ್ರೆಸ್ ನ ಆಂತರಿಕ ವಿಚಾರ. ರಮೇಶ ಜಾರಕಿಹೊಳಿ  ಕಾಂಗ್ರೆಸ್ ನಲ್ಲಿ ಇದ್ದು ಬಂದವರು. ಅವರಿಗೆ ಕಾಂಗ್ರೆಸ್ ಬಗ್ಗೆ ಎಲ್ಲವೂ ಗೊತ್ತಿದೆ ಹೀಗಾಗಿ ಮಾತನಾಡಿರಬೇಕು ಎಂದರು.

ಪ್ರತಿಕ್ರಿಯಿಸಿ (+)