ಶನಿವಾರ, ನವೆಂಬರ್ 23, 2019
17 °C
ಪ್ರಜಾವಾಣಿ ‘ದೀಪಾವಳಿ ಕಥೆ, ಕವನ’ ಸ್ಪರ್ಧೆ – 2019

ಪ್ರಜಾವಾಣಿ ‘ದೀಪಾವಳಿ ಕಥೆ, ಕವನ’ ಸ್ಪರ್ಧೆ: ಗುರುಪ್ರಸಾದ್, ಪ್ರವೀಣ ಪ್ರಥಮ

Published:
Updated:

ಬೆಂಗಳೂರು: 2019ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ ಮತ್ತು ‘ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ’ಗಳ ಫಲಿತಾಂಶ ಪ್ರಕಟವಾಗಿದೆ. ಗುರುಪ್ರಸಾದ್ ಕಂಟಲಗೆರೆ ಬರೆದ ‘ಚಾಕರಿ’, ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ. ಪ್ರವೀಣ ಕೆ. ಅವರ ‘ಲಕ್ಷಾಂತರ ಬತ್ತಿ’, ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನಕ್ಕೆ ಆಯ್ಕೆಯಾಗಿದೆ.

ಮಾಧವಿ ಭಂಡಾರಿ ಅವರ ‘ಗುಲಾಬಿ ಕೆಂಪಿನ ರಸ್ತೆ’ ಹಾಗೂ ಜಿ.ಆರ್. ಚಂದ್ರಶೇಖರ್ ಅವರ ‘ಬೈಪಾಸ್ ರಸ್ತೆ’ ಕಥೆಗಳು ಕ್ರಮವಾಗಿ ಎರಡನೆಯ ಮತ್ತು ಮೂರನೆಯ ಬಹುಮಾನಕ್ಕೆ ಪಾತ್ರವಾಗಿವೆ. ಎಂ.ಡಿ. ಒಕ್ಕುಂದ ಅವರ ‘ಶಿವ ಶಿವಾ ಮಕ್ಕಳು ದೊಡ್ಡವರಾಗಬಾರದು’ ಮತ್ತು ಪ್ರಕಾಶ ಪೊನ್ನಾಚಿ ಅವರ ‘ಅಸ್ಪೃಶ್ಯ ಗಿಳಿ ಮತ್ತು ಮಾಯಕಾರ’ ಕವಿತೆಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ಪಾತ್ರವಾಗಿವೆ.

ಅದೀಬ್‌ ಅಖ್ತರ್‌ (ಪಂಜರ), ಪ್ರವೀಣಕುಮಾರ್‌ ಜಿ. (ಡೈರಿ ಮಿಲ್ಕ್‌ ಚಾಕ್ಲೇಟು), ವಿಕಾಸ ಮೌರ್ಯ (ಒಂದು ಹೆಜ್ಜೆ) ಅವರ ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ. ಕೇಶವ ಮಳಗಿ ಮತ್ತು ಸುನಂದಾ ಕಡಮೆ ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮಲ್ಲಿಕಾರ್ಜುನ ಛಬ್ಬಿ (ದಂಗೆ ಏಳುತ್ತವೆ ಕವಿತೆಗಳೂ), ಎಚ್‌.ಸಿ. ಭವ್ಯ ನವೀನ್‌ (ಸಿಂಡ್ರೆಲಾ ಮತ್ತು ಮುಫ್ತಿಗೆ ಸಿಕ್ಕ ರಾಜಕುಮಾರ) ಮತ್ತು ಸೋಮಶೇಖರ್‌ ಎಸ್‌. (ಹಿಮಗಿರಿಯ ಕಂದರ) ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ. ಎಚ್‌.ಎಸ್‌. ವೆಂಕಟೇಶ
ಮೂರ್ತಿ ಮತ್ತು ಎಚ್‌.ಎಲ್‌. ಪುಷ್ಪ ಅವರು ಕವನ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ಮಕ್ಕಳ ವರ್ಣಚಿತ್ರ ಸ್ಪರ್ಧೆ: ಪೃಥ್ವಿರಾಜ್ ಎಂ.ಆರ್. ಆಳ್ವ (ಮಡಿಕೇರಿ), ಬಂದೇನವಾಜ್ (ಕುರುಕುಂದ, ಮಾನ್ವಿ ತಾಲ್ಲೂಕು), ಪ್ರತೀಕ್ಷಾ ಮರಕಿಣಿ (ಬೆಂಗಳೂರು), ಅಭಿನವ್ ಎಸ್. ರಾವ್ (ಬೆಂಗಳೂರು), ಕೆ. ಪ್ರಥಮ್ ಕಾಮತ್ (ಕಟಪಾಡಿ, ಉಡುಪಿ ಜಿಲ್ಲೆ), ಸಾನಿಯಾ ಐ. ಯಲಿಗಾರ (ಗಜೇಂದ್ರಗಡ, ಗದಗ ಜಿಲ್ಲೆ), ಕಾರ್ತೀಕ್ ಎಂ.ಎಸ್. (ಭರಮಸಾಗರ, ಚಿತ್ರದುರ್ಗ ಜಿಲ್ಲೆ), ಪ್ರಗತಿ ಡಿ.ಕೆ. (ಜಿಗಳಿ, ಹರಿಹರ ತಾಲ್ಲೂಕು) ಅವರ ಬಿಡಿಸಿದ ವರ್ಣಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಕಲಾವಿದ ಜೆ.ಎಂ.ಎಸ್. ಮಣಿ ಅವರು ವರ್ಣಚಿತ್ರ ಸ್ಪರ್ಧೆಯ ತೀರ್ಪುಗಾರ ಆಗಿದ್ದರು.

ಬಹುಮಾನ ಏನು?

ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮೊದಲ ಮೂರು ಕಥೆಗಳಿಗೆ ಕ್ರಮವಾಗಿ ₹ 20 ಸಾವಿರ, ₹ 15 ಸಾವಿರ ಹಾಗೂ ₹ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಲಭಿಸಲಿದೆ. ಕವನ ಸ್ಪರ್ಧೆ ವಿಭಾಗದ ಮೊದಲ ಮೂರು ಕವನಗಳಿಗೆ ಕ್ರಮವಾಗಿ ₹ 5,000, ₹ 3,000 ಹಾಗೂ ₹ 2,500 ನಗದು, ಪ್ರಶಸ್ತಿ ಪತ್ರ ದೊರೆಯಲಿದೆ. ಮಕ್ಕಳ ವರ್ಣಚಿತ್ರ ಸ್ಪರ್ಧೆಯ ವಿಜೇತರಿಗೆ ತಲಾ ₹ 2,500 ನಗದು, ಪ್ರಶಸ್ತಿ ಪತ್ರ ದೊರೆಯಲಿದೆ.

**

ದೀಪಾವಳಿ ಕವನ ಸ್ಪರ್ಧೆಗಾಗಿ ಬಂದ ಕವಿತೆಗಳು ಸಮಕಾಲೀನ ಸಂದರ್ಭದಲ್ಲಿ ಪ್ರಕ್ಷುಬ್ಧಗೊಂಡ ಸಮಾಜ, ಧರ್ಮ, ರಾಜಕೀಯ, ಸಾಂಸ್ಕೃತಿಕ ವ್ಯವಸ್ಥೆಗೆ ಹಿಡಿದ ಕನ್ನಡಿಗಳಂತೆ ತೋರುತ್ತವೆ
- ಡಾ.ಎಚ್.ಎಲ್. ಪುಷ್ಪ

**

ಇತ್ತೀಚಿನ ದಿನಮಾನದಲ್ಲಿ ಬದಲಾಗುತ್ತಿರುವ ಕನ್ನಡದ ಕಥಾವಿನ್ಯಾಸದ ಸುಳಿಹು-ಹೊಳಹುಗಳು ಇಲ್ಲಿನ ಕಥೆಗಳಲ್ಲಿ ಹರಳುಗಟ್ಟಿವೆ
- ಕೇಶವ ಮಳಗಿ

**

ನಮ್ಮ ಮನಸ್ಸು ಸೆಳೆದ ಮುಖ್ಯ ಕವಿತೆಗಳು ಕಾವ್ಯದ ರೂಪಕಾಕೃತಿಯನ್ನು ಒಪ್ಪಿಕೊಂಡು ಅರ್ಥಾಂತರಕ್ಕೆ ಗಂಭೀರವಾಗಿ ತೊಡಗುತ್ತವೆ ಎನ್ನುವುದು ಸಮಾಧಾನ ಕೊಡುವ ಸಂಗತಿ
- ಎಚ್.ಎಸ್. ವೆಂಕಟೇಶಮೂರ್ತಿ

**

ನಮ್ಮ ಬಳಿ ಬಂದ ಕಥೆಗಳಿಗೆ ಮೊದಲ ಓದಿನಲ್ಲೇ ವಿವಿಧ ರೀತಿಯ ಕಂಪನಗಳನ್ನು ಎಬ್ಬಿಸುವ ಶಕ್ತಿಯಿದ್ದದ್ದು ಕಥಾ ಪ್ರಕಾರದ ಕೃಷಿಯ ಕುರಿತು ಭರವಸೆ ಮೂಡಿಸುವಂತಿದೆ
- ಸುನಂದಾ ಕಡಮೆ

**

ದೀಪಾವಳಿ ವರ್ಣಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ಚಿತ್ರಗಳಲ್ಲಿ ಕಾಣಬಹುದಾದ ವೈಶಿಷ್ಟ್ಯ ಎಂದರೆ ಮಕ್ಕಳಲ್ಲಿನ ಮುಗ್ಧ ಭಾವ
- ಜೆ.ಎಂ.ಎಸ್. ಮಣಿ

ಪ್ರತಿಕ್ರಿಯಿಸಿ (+)